ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡೆಲಿಂಗ್‌ ಒಲವಿನ ಬೆಡಗಿ ಪ್ರಿಯಾಂಕಾ

Last Updated 29 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಮಾಡೆಲಿಂಗ್‌ ಮತ್ತು ನಟನೆ ಎರಡೂ ವಿಭಿನ್ನ. ಸದ್ಯ ಯಶಸ್ವಿ ಹಾಗೂ ಖ್ಯಾತ ರೂಪದರ್ಶಿಯಾಗಿ ಕಾಣಿಸಿಕೊಳ್ಳುವುದು ನನ್ನ ಗುರಿ’ ಎನ್ನುವ ರೂಪದರ್ಶಿ ಪ್ರಿಯಾಂಕಾ ಪ್ರೀತ್‌ ಹುಬ್ಬಳ್ಳಿಯವರು.

ಬೆಂಗಳೂರಿಗೆ ಚಾರ್ಟೆಡ್‌ ಅಕೌಂಟೆಂಟ್‌ ಓದಲು ಬಂದ ಅವರು ವಯೋಸಹಜ ಆಕರ್ಷಣೆಯಿಂದ ಮಾಡೆಲಿಂಗ್‌ ಕಡೆಗೆ ವಾಲಿದರು. ಕಾಲೇಜು ದಿನಗಳಲ್ಲಿ ಸಾಕಷ್ಟು ಫ್ಯಾಷನ್‌ ಷೋಗಳಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರಿಗೆ ಬಂದ ಮೇಲೆ ಅವರಿಷ್ಟದ ಮಾಡೆಲಿಂಗ್‌ ಕ್ಷೇತ್ರದಿಂದಲೂ ಸಾಕಷ್ಟು ಅವಕಾಶಗಳು ಬರತೊಡಗಿದವು. 2016ರಲ್ಲಿ ಮಿಸ್‌ ಉತ್ತರ ಕರ್ನಾಟಕ, 2017ರಲ್ಲಿ ಮಿಸ್‌ ಪಾಪ್ಯುಲರ್‌ ಹಾಗೂ ಮಿಸ್‌ ಹೈದಾರಾಬಾದ್‌ ಕ್ವೀನ್‌ ಕಿರೀಟವನ್ನು ತಮ್ಮ ಮುಡಿಗೇರಿಕೊಂಡಿದ್ದರು.

ಪ್ರಿಯಾಂಕಾ ಕಳೆದ ಎರಡು ವರ್ಷಗಳಿಂದ ಮಾಡೆಲಿಂಗ್‌ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಖ್ಯಾತ ವಿನ್ಯಾಸಕರ ಫ್ಯಾಷನ್‌ ಷೋಗಳಲ್ಲಿ ಹೆಜ್ಜೆ ಹಾಕಿರುವ ಅವರು ಇದುವರೆಗೂ 30ಕ್ಕೂ ಹೆಚ್ಚು ಷೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಿಸ್‌ ಕರ್ನಾಟಕ, ಆಭರಣ ಬ್ರಾಂಡ್‌, ಚೆನ್ನೈ ಫ್ಯಾಷನ್‌ ವೀಕ್‌, ಕೇರಳ ಫ್ಯಾಷನ್‌ ವೀಕ್‌ಗಳಲ್ಲಿ ಭಾಗವಹಿಸಿರುವ ಅವರು, ಲೋರಿಯಲ್‌, ನಿಕಾನ್‌, ಲೈಫ್‌ ಸ್ಟೈಲ್‌, ಅಪರ್ಣಾ ಡಿಸೈನ್ ಸ್ಟುಡಿಯೊ, ರಿಲಯನ್ಸ್‌ ಸೇರಿದಂತೆ 45ಕ್ಕೂ ಹೆಚ್ಚು ಜಾಹೀರಾತುಗಳಲ್ಲಿಯೂ ನಟಿಸಿದ್ದಾರೆ.

‘ಒಳ್ಳೆಯ ರೂಪದರ್ಶಿ ಎನಿಸಿಕೊಳ್ಳಲು ಆತ್ಮವಿಶ್ವಾಸ, ಅಂಗ ಸೌಂದರ್ಯ ಎರಡೂ ಬೇಕು. ಇಲ್ಲಿ 5 ಅಡಿ 5 ಇಂಚಿಗಿಂತ ಎತ್ತರವಿರುವವರಿಗೆ ಅವಕಾಶ ಹೆಚ್ಚು. ಮಾಡೆಲಿಂಗ್‌ ಮತ್ತು ನಟನೆ ಎರಡೂ ಭಿನ್ನ. ಮಾಡೆಲಿಂಗ್‌ನಲ್ಲಿ ಇಷ್ಟವಿರಲಿ, ಇಲ್ಲದಿರಲಿ ಹೈ ಹೀಲ್ಡ್‌ ಹಾಕಲೇಬೇಕು. ಅಂತಹ ಲೈಫ್‌ಸ್ಟೈಲ್‌ಗೆ ನಾವು ಹೊಂದಿಕೊಳ್ಳಬೇಕು. ಆದರೆ ನಟನೆ ಹಾಗಲ್ಲ, ಅಭಿನಯ ಕೌಶಲ ಗೊತ್ತಿರಬೇಕು. ಕ್ಯಾಮೆರಾ ಎದುರು ನಟನೆ ಮುಖ್ಯ. ಸದ್ಯ ಮಾಡೆಲಿಂಗ್‌ ಕಡೆಗಷ್ಟೇ ನನ್ನ ಗಮನ. ಧಾರಾವಾಹಿ, ಸಿನಿಮಾ ಅವಕಾಶಗಳು ಬಂದಿವೆ’ ಎನ್ನುವ ಪ್ರಿಯಾಂಕಾ ಮಾತಿನಲ್ಲಿ ಮಾಡೆಲಿಂಗ್‌ ನಂತರ ಮುಂದೇನು? ಎಂಬ ಪ್ರಶ್ನೆಗೂ ಖಚಿತ ಉತ್ತರವಿದೆ.

ಆಲ್ಬಂ ಸಾಂಗ್‌ನಲ್ಲಿಯೂ ಪ್ರಿಯಾಂಕಾ ನಟಿಸುತ್ತಿದ್ದಾರೆ. ಸದ್ಯ ಮ್ಯಾಕ್ಸಿ ಮಾಯಿ ಅವರ ‘ಟಾಕ್‌ ಟಾಕ್ ಬ್ಲಾಕ್‌ ಡಾಗ್‌’ ಆಲ್ಬಂನಲ್ಲಿಯೂ ನಟಿಸುತ್ತಿರುವ ಅವರು, ಯುವ ಸಂಗೀತ ನಿರ್ದೇಶಕ ಸುಪ್ರೀತ್‌ ಗಾಂಧಾರ ಅವರ ರಾಕ್‌ ಮ್ಯೂಸಿಕ್‌ ಆಲ್ಬಂಗೆ ಆಯ್ಕೆಯಾಗಿದ್ದಾರೆ.

ಪ್ರಿಯಾಂಕಾ ತಮ್ಮ ದೇಹಾಕಾರ ಕಾಪಾಡಿಕೊಳ್ಳಲು ಮನೆಯಲ್ಲಿಯೇ ವ್ಯಾಯಾಮ ಮಾಡುತ್ತಾರಂತೆ. ‘ನಾನು ಸಣ್ಣಗಿದ್ದೇನೆ. ನಾನು ಹೆಚ್ಚು ತಿಂದರೂ ದಪ್ಪಗಾಗಲ್ಲ. ನನ್ನ ದೇಹಪ್ರಕೃತಿಯೇ ಹಾಗಿದೆ. ಹೀಗಾಗಿ ನನಗೆ ಡಯೆಟ್‌ ಮಾಡುವ ಅವಶ್ಯಕತೆಯಿಲ್ಲ. ಚಿಕನ್‌ ಬಿರಿಯಾನಿ ಹಾಗೂ ಕೀಮಾ ಬೌಲ್‌ ನನ್ನ ಫೇವರಿಟ್‌’ ಎಂದು ಹೇಳುವ ಅವರು ತೀರಾ ಕಟ್ಟುನಿಟ್ಟಾದ ಆಹಾರ ಪಥ್ಯ ಪಾಲಿಸದಿದ್ದರೂ ಕಂಡದ್ದೆಲ್ಲ ತಿನ್ನುವ ತಿಂಡಿಪೋತಿಯೂ ಅಲ್ಲ’ ಎನ್ನುತ್ತಾರೆ

ಹಣ್ಣು ಹಾಗೂ ಜ್ಯೂಸ್‌ಗಳಿಗೆ ಇವರ ಮೆನುವಿನಲ್ಲಿ ಮೊದಲ ಆದ್ಯತೆ. ‘ಬೆಳಿಗ್ಗೆ ಎದ್ದ ತಕ್ಷಣ ನೆಲ್ಲಿಕಾಯಿ ಜ್ಯೂಸ್‌ ಕುಡಿಯುತ್ತೇನೆ. ಇದು ದೇಹದಲ್ಲಿನ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಬಳಿಕ ಸರಳ ವ್ಯಾಯಾಮ ಹಾಗೂ ಯೋಗ ಮಾಡುತ್ತೇನೆ’ ಎಂದು ದಿನಚರಿ ವಿವರಿಸುತ್ತಾರೆ ಪ್ರಿಯಾಂಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT