ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲ್ಬೀರ್ ಸಿಂಗ್: ಸ್ವತಂತ್ರ ಭಾರತದ ಹಾಕಿ ಕ್ರೀಡೆಯ 'ಬಂಗಾರದ ಮನುಷ್ಯ'

ಮೇಜರ್ ಧ್ಯಾನಚಂದ್ ಪರಂಪರೆಯನ್ನು ಮುಂದುವರಿಸಿದ ಬಲ್ಬೀರ್ ಸಿಂಗ್ ದೊಸಾನ್ಜಿ
Last Updated 26 ಮೇ 2020, 2:32 IST
ಅಕ್ಷರ ಗಾತ್ರ

ಬೆಂಗಳೂರು: ಆ ಘಟನೆಗೀಗ ಐವತ್ತು ವರ್ಷಗಳು ತುಂಬಿದವು. ಆದರೂ ಅದನ್ನು ಮರೆಯಲು ಸಾಧ್ಯವಾಗಿಲ್ಲ. ಏಷ್ಯನ್ ಗೇಮ್ಸ್‌ನಲ್ಲಿ ಆಡಲು ಬ್ಯಾಂಕಾಕ್‌ಗೆ ಪ್ರಯಾಣ ಮಾಡಿದ್ದ ಭಾರತ ತಂಡದಲ್ಲಿ ನಾನು, ಕೊಡಗಿನ ಬಿ.ಪಿ. ಗೋವಿಂದ ಮತ್ತು ಎಂ.ಪಿ. ಗಣೇಶ್ ಭಾರತ ತಂಡದಲ್ಲಿದ್ದೆವು. ಆಗ ತಂಡದಲ್ಲಿ ನಾವಿನ್ನೂ ಹೊಸಬರು. ಭಾರತ ಮತ್ತು ಪಾಕಿಸ್ತಾನ ನಡುವಣ ಫೈನಲ್ ಪಂದ್ಯದ ಬೆಳಿಗ್ಗೆ ನಾವು ಮೂವರೂ ಹೋಟೆಲ್‌ನ ಈಜುಕೊಳದಲ್ಲಿ ಸ್ನಾನ ಮಾಡುತ್ತಿದ್ದವು. ‌

ಆಗ ಅಲ್ಲಿಗೆ ಬಂದ ತಂಡದ ಮ್ಯಾನೇಜರ್ ಬಲ್ಬೀರ್‌ ಸಿಂಗ್ ಸೀನಿಯರ್, ’ನೀವಿನ್ನೂ ಇಲ್ಲಿಯೇ ಇದ್ದೀರಾ. ಸಂಜೆ ಪಂದ್ಯ ಆಡಬೇಕು ನೀವು. ಮೂರು ಜನ ಸಿದ್ಧರಾಗಿ‘ ಎಂದು ಹೊರಟರು. ಮಧ್ಯಾಹ್ನದ ಊಟದ ಸಂದರ್ಭದಲ್ಲಿ ತಂಡದ ಪಟ್ಟಿಯನ್ನು ಅವರೇ ಬಿಡುಗಡೆ ಮಾಡಿದರು. ನಾವು ಮೂವರೂ ಅದರಲ್ಲಿದ್ದೆವು. ಆದರೆ, ಸೀನಿಯರ್ ಆಟಗಾರರು ತಕರಾರು ತೆಗೆದರು. ಹೊಸ ಹುಡುಗರನ್ನು ಪಾಕ್‌ (ಆಗ ಬಲಿಷ್ಠವಾಗಿತ್ತು) ಎದುರು ಆಡಿಸುವುದೇ ಅದೂ ಇಂತಹ ಮಹತ್ವದ ಪಂದ್ಯದಲ್ಲಿ ಇವರ್ಯಾಕೆ ಎಂಬ ಪ್ರತಿಭಟನೆ ಅವರದ್ದಾಗಿತ್ತು. ಕೊನೆಗೂ ಸಿಂಗ್ ಸಾಬ್ ಮಣಿಯಬೇಕಾಯಿತು. ತಂಡದ ಹಿತಕ್ಕೊಸ್ಕರ ನಮ್ಮನ್ನು ಕೈಬಿಟ್ಟರು. ಆ ಪಂದ್ಯದಲ್ಲಿ ಭಾರತ ಸೋತಿತು. ಅವರಿಗೆ ಅದು ಬಹಳ ಬೇಸರವಾಗಿತ್ತು. ಏಕೆಂದರೆ ಅವರಿಗೆ ಭಾರತ ಯಾವಾಗಲೂ ಜಯಿಸಬೇಕು ಎಂಬ ಛಲದಲ್ಲಿರುತ್ತಿದ್ದರು.

1971ರ ವಿಶ್ವಕಪ್ ಟೂರ್ನಿಯಲ್ಲಿಯೂ ಇದೇ ರೀತಿಯಾಯಿತು. ಆ ಸಲದ ತಂಡದಲ್ಲಿ ಬಹಳಷ್ಟು ಜನ ಹೊಸಬರು ಇದ್ದೆವು. ಬಾರ್ಸಿಲೋನಾದಲ್ಲಿ ಸೆಮಿಫೈನಲ್ ತಲುಪಿದ್ದೆವು. ಆ ಟೂರ್ನಿಯಲ್ಲಿ ಗಣೇಶ್ ಆಟ ಅಮೋಘವಾಗಿತ್ತು. ‌

ಆದರೆ, ಸೆಮಿಫೈನಲ್‌ನಲ್ಲಿ ಪಾಕ್ ಎದುರು ಸೋತಿದ್ದು ದೊಡ್ಡ ಆಘಾತವಾಗಿತ್ತು. ನಾವೆಲ್ಲರೂ ಬೇಸರದಿಂದ ಡ್ರೆಸ್ಸಿಂಗ್ ಕೋಣೆಗೆ ಬಂದಾಗ ಮ್ಯಾನೇಜರ್ ಸಿಂಗ್ ಸಾಬ್‌ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಸುಮಾರು ಮುಕ್ಕಾಲು ಗಂಟೆ ಅವರ ಅಳು ನಿಲ್ಲಲಿಲ್ಲ. ಪಾಕ್ ಎದುರು ಸೋತಿದ್ದು ಅವರ ದುಃಖಕ್ಕೆ ಕಾರಣವಾಗಿತ್ತು. ಬಹುಶಃ 1975ರ ವಿಶ್ವಕಪ್ ಗೆಲುವಿಗೆ ಅದು ಸೋಪಾನವೂ ಆಯಿತು!

ಅದಾಗಿ ನಾಲ್ಕು ವರ್ಷಗಳ ನಂತರ ನಮ್ಮ ತಂಡ ವಿಶ್ವ ಚಾಂಪಿಯನ್ ಆದಾಗಲೂ ಅವರೇ ಮ್ಯಾನೇಜರ್ ಆಗಿದ್ದರು. ಆದರೆ ಟೂರ್ನಿಗೂ ಮುನ್ನ ಚಂಡೀಗಡ ವಿಶ್ವವಿದ್ಯಾಲಯದಲ್ಲಿ ತರಬೇತಿ ಶಿಬಿರ ಇತ್ತು. ಅಲ್ಲಿಯ ಪುರುಷರ ಹಾಸ್ಟೆಲ್‌ನಲ್ಲಿ ಬೀಡುಬಿಟ್ಟಿದ್ದೆವು. ನಮ್ಮ ವಸತಿ ನಿಲಯದ ಎದುರಿಗೇ ಮಹಿಳಾ ಹಾಸ್ಟೆಲ್ ಇತ್ತು. ಒಂದೆರಡು ದಿನಗಳ ನಂತರ ಆ ಹೆಣ್ಣುಮಕ್ಕಳನ್ನು ನಮ್ಮವರಲ್ಲಿ ಕೆಲವರು ಚುಡಾಯಿಸುತ್ತಿದ್ದರು ಎಂಬ ದೂರುಗಳು ಬಂದವು. ಆಗ ಸಿಂಗ್ ಸಾಬ್ ಮತ್ತು ತಂಡದ ಕೋಚ್ ಪ್ರತಿದಿನ ನಾವು ಹೊರಗೆ ತಾಲೀಮಿಗೆ ಹೊರಟರೆ ಮಹಿಳಾ ಹಾಸ್ಟೆಲ್‌ಗೆ ಎದುರಿಗೆ ಇರುವ ಗೇಟ್‌ ಬಳಿ ಕಾವಲುಗಾರರಂತೆ ಕುಳಿತಿರುತ್ತಿದ್ದರು. ನಾವ್ಯಾರೂ ಕೆಮ್ಮುವಂತಿರಲಿಲ್ಲ. ಆದರಿಂದ ನಾವೂ ಕೂಡ ಗಂಭೀರವಾದೆವು. ವಿಶ್ವ ಚಾಂಪಿಯನ್ನರಾದಾಗ ಅದೇ ಮಹಿಳಾ ಹಾಸ್ಟೆಲ್‌ನವರು ನಮ್ಮನ್ನು ಸನ್ಮಾನಿಸಿದರು. ಅವರ ದೂರದೃಷ್ಟಿ ಆ ರೀತಿಯಿತ್ತು. ‌

ನನ್ನ ತಂದೆ ಮೇಜರ್ ಧ್ಯಾನಚಂದ್ ಅವರ ಸಾಧನೆಯಿಂದ ಪ್ರೇರಣೆಗೊಂಡು ಹಾಕಿ ಸ್ಟಿಕ್ ಹಿಡಿದವರು. ಸ್ವಾತಂತ್ರ್ಯಾನಂತರದ ಮೂರು ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದ ತಂಡದಲ್ಲಿ ಆಡಿದರು. ಗೋಲ್‌ ಸ್ಕೋರಿಂಗ್‌ನಲ್ಲಿ ಎತ್ತಿದ ಕೈ ಅವರದ್ದು. ಭಾರತದ ಹಾಕಿ ಪರಂಪರೆಯನ್ನು ತ್ರಿವರ್ಣ ಧ್ವಜದೊಂದಿಗೆ ಎತ್ತಿ ಹಿಡಿದ ಶ್ರೇಯ ಅವರದ್ದು.‌

(ಲೇಖಕರು ಹಾಕಿಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಪುತ್ರ)

ನಿರೂಪಣೆ: ಗಿರೀಶ ದೊಡ್ಡಮನಿ

ಪಿತೃ ಸ್ವರೂಪಿಯಾಗಿದ್ದರು

ನಮ್ಮ ಪಾಲಿಗೆ ಪಿತೃ ಸ್ವರೂಪಿಯಾಗಿದ್ದವರು ಬಲ್ಬೀರ್ ಸಿಂಗ್. 1975ರಲ್ಲಿ ನಮ್ಮ ತಂಡವು ವಿಶ್ವಕಪ್ ಗೆ್ದ್ದು ಇತಿಹಾಸ ಬರೆದಾಗ ಅವರೇ ಮ್ಯಾನೇಜರ್ ಆಗಿದ್ದರು. ಅವರ ಆತ್ಮೀಯತೆ, ಅಪ್ಯಾಯತೆಗಳು ಇವತ್ತಿಗೂ ಸ್ಮರಣೀಯ. ಅವರ ಅಗಲಿಕೆಯು ಭಾರತದ ಕ್ರೀಡೆಗೆ ದೊಡ್ಡ ನಷ್ಟ ಎನ್ನುತ್ತಾರೆ ಒಲಿಂಪಿಯನ್ ಕ್ರೀಡಾಪಟುಬಿ.ಪಿ. ಗೋವಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT