ಗುರುವಾರ , ಫೆಬ್ರವರಿ 27, 2020
19 °C
ಫುಟ್‌ಬಾಲ್‌ನಲ್ಲಿ ಬೆಳಗಾವಿ, ಬೆಂಗಳೂರು, ದಕ್ಷಿಣ ಕನ್ನಡ ಜಯಭೇರಿ

ರಾಜ್ಯ ಮಿನಿ ಒಲಿಂಪಿಕ್ಸ್‌| ಹಾಕಿ: ಕೊಡಗು, ಬಳ್ಳಾರಿ ತಂಡಗಳಿಗೆ ಭರ್ಜರಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕುಶಾಲ್ ಬೋಪಯ್ಯ ಮತ್ತು ಕೆ.ರಮೇಶ್ ಇಲ್ಲಿನ ಕೆ.ಎಂ.ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಸೋಮವಾರ ಮಿಂಚಿದರು. ರಾಜ್ಯ ಮಿನಿ ಒಲಿಂಪಿಕ್ಸ್‌ನ ಬಾಲಕರ ಹಾಕಿಯಲ್ಲಿ ಇವರಿಬ್ಬರು ತಲಾ ಐದು ಗೋಲು ಗಳಿಸಿದರು. ಅವರ ಅಮೋಘ ಆಟದ ಬಲದಿಂದ ಹಾಕಿ ಕೊಡಗು ಮತ್ತು ಹಾಕಿ ಬಳ್ಳಾರಿ ತಂಡಗಳು ಭರ್ಜರಿ ಗೆಲುವು ದಾಖಲಿಸಿದವು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಒಲಿಂಪಿಕ್ಸ್ ಸಂಸ್ಥೆ ಹಾಗೂ ರಾಜ್ಯ ಕ್ರೀಡಾ ಪ್ರಾಧಿಕಾರ ಆಯೋಜಿಸಿರುವ ಕೂಟದ ಮೊದಲ ದಿನ ಕೊಡಗು ತಂಡವು ಹಾಕಿ ಕಲಬುರ್ಗಿಯನ್ನು 16–0 ಅಂತರದಿಂದ ಮತ್ತು ಬಳ್ಳಾರಿ ತಂಡ ಹಾಕಿ ಗದಗವನ್ನು 12–0ಯಿಂದ ಮಣಿಸಿತು.

ಕೊಡಗು ಪರ ಕುಶಾಲ್ ಬೋಪಯ್ಯ ಅವರೊಂದಿಗೆ ಧ್ರುವ ಬಿ.ಎಸ್‌. ಮೂರು ಗೋಲು ಗಳಿಸಿ ಗಮನ ಸೆಳೆದರು. ವಚನ್‌ ಕಾಳಪ್ಪ ಮತ್ತು ಅಖಿಲ್ ಅಯ್ಯಪ್ಪ ತಲಾ ಎರಡು, ಆಕಾಶ್ ಬಿದ್ದಪ್ಪ, ಚಿಣ್ಣಪ್ಪ, ಚೆಂಗಪ್ಪ ಮತ್ತು ಹರ್ಷ ಕುಮಾರ್ ತಲಾ ಒಂದೊಂದು ಗೋಲು ಗಳಿಸಿದರು.

ಹಾಕಿ ಬಳ್ಳಾರಿಗಾಗಿ ರಮೇಶ್‌ ಜೊತೆ ಆರ್‌.ಕಿರಣ್ ಗಮನಾರ್ಹ ಆಟವಾಡಿ ನಾಲ್ಕು ಗೋಲು ಗಳಿಸಿದರು. ಪಿ.ಆಕಾಶ್‌, ಪುನೀತ್ ಮತ್ತು ಎಂ.ಎಂ.ಸ್ವಾಮಿ ತಲಾ ಒಂದೊಂದು ಗೋಲು ಗಳಿಸಿದರು.

ಫುಟ್‌ಬಾಲ್‌ನಲ್ಲಿ ಬೆಳಗಾವಿ, ಬೆಂಗಳೂರಿಗೆ ಜಯ: ಬೆಳಗಾವಿ ಮತ್ತು ಬೆಂಗಳೂರಿನ ಬಾಲಕರ ತಂಡದವರು ಫುಟ್‌ಬಾಲ್‌ನಲ್ಲಿ ಭರ್ಜರಿ ಜಯ ಗಳಿಸಿದರು. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳಲ್ಲಿ ಬೆಳಗಾವಿ ತಂಡ ಮೈಸೂರು ವಿರುದ್ಧ 5–0 ಗೋಲುಗಳಿಂದ ಜಯ ಗಳಿಸಿತು. ಉತ್ತರ ಕನ್ನಡ ತಂಡವನ್ನು ಬೆಂಗಳೂರು 6–0ಯಿಂದ ಮಣಿಸಿತು.

ಬೆಳಗಾವಿ ತಂಡಕ್ಕೆ ಕೃಷ್ಣ ಮುಚ್ಚಂಡಿ ನಾಲ್ಕು ಗೋಲು ತಂದುಕೊಟ್ಟರೆ, ಆರ್ಯನ್ ಕಿಲ್ಲೇದಾರ್ ಒಂದು ಗೋಲು ಗಳಿಸಿದರು. ಬೆಂಗಳೂರು ತಂಡದ ರಾಘವ ಕುಮಾರ್ ಮತ್ತು ಮಿರ್ ಮೊಹಮ್ಮದ್ ಮೂಸಾ ತಲಾ ಎರಡು ಗೋಲು ಗಳಿಸಿದರೆ, ಅಕ್ಷಿತ್ ಮತ್ತು ಪ್ರಜ್ವಲ್ ಗೌಡ ಒಂದೊಂದು ಗೋಲು ಗಳಿಸಿದರು.

ಬೆಳಗಾವಿ ಬಾಲಕಿಯರಿಗೆ ಗೆಲುವು:ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ತಂಡ 6–0 ಗೋಲುಗಳಿಂದ ಉತ್ತರ ಕನ್ನಡ ತಂಡವನ್ನು ಮಣಿಸಿತು. ರಿತು ಪಾಟೀಲ ಮತ್ತು ಅಪರ್ಣಾ ಹರೇರ್ ತಲಾ ಎರಡು, ಶಾನಾ ಶಿನೀದ್ ಮತ್ತು ಅಲಿಶಾ ಬೋರ್ಜೆಸ್ ತಲಾ ಒಂದು ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಕನ್ನಡ ಬಾಲಕಿಯರು 2–0 ಗೋಲುಗಳಿಂದ ಧಾರವಾಡವನ್ನು ಸೋಲಿಸಿದರು. ಎರಡೂ ಗೋಲುಗಳು ಪ್ರಮೀಳಾ ಸೆರಾವೊ ಅವರ ಖಾತೆಗೆ ಸೇರಿದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು