ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಮಿಲ್ಟನ್‌ ಮುಡಿಗೆ ಸ್ಟಿರಿಯನ್‌ ಗ್ರ್ಯಾನ್‌ ಪ್ರಿ ಗರಿ

Last Updated 13 ಜುಲೈ 2020, 6:02 IST
ಅಕ್ಷರ ಗಾತ್ರ

ಸ್ಪಿಲ್‌ಬರ್ಗ್‌, ಆಸ್ಟ್ರಿಯಾ: ಮರ್ಸಿಡಿಸ್‌ ತಂಡದ ಚಾಲಕ ಲೂಯಿಸ್‌ ಹ್ಯಾಮಿಲ್ಟನ್‌, ಭಾನುವಾರ ಸ್ಟಿರಿಯನ್‌ ಗ್ರ್ಯಾನ್‌ ಪ್ರಿ ಫಾರ್ಮುಲಾ ಒನ್‌ ರೇಸ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಬ್ರಿಟನ್‌ನ 35 ವರ್ಷ ವಯಸ್ಸಿನ ಚಾಲಕ ಹ್ಯಾಮಿಲ್ಟನ್‌, ವೃತ್ತಿಬದುಕಿನಲ್ಲಿ ಗೆದ್ದ 85ನೇ ಪ್ರಶಸ್ತಿ ಇದಾಗಿದೆ.

ದಾಖಲೆಯ 89ನೇ ಬಾರಿ ಪೋಲ್‌‍ಪೊಷಿಸನ್‌ ಪಡೆದಿದ್ದ ಹ್ಯಾಮಿಲ್ಟನ್,‌ ಮಳೆಯಿಂದಾಗಿ ಒದ್ದೆಯಾಗಿದ್ದ ರೆಡ್‌ಬುಲ್‌ ರಿಂಗ್‌ ಟ್ರ್ಯಾಕ್‌ನಲ್ಲಿ ಮಿಂಚಿನ ವೇಗದಲ್ಲಿ ಕಾರು ಚಲಾಯಿಸಿ ಗಮನ ಸೆಳೆದರು.

ಆರಂಭದಿಂದಲೂ ಮುಂಚೂಣಿಯಲ್ಲಿದ್ದ ಹ್ಯಾಮಿಲ್ಟನ್‌ಗೆ ಮರ್ಸಿಡಿಸ್‌ ತಂಡದ ಮತ್ತೊಬ್ಬ ಚಾಲಕ ವಾಲ್ಟೆರಿ ಬೊಟ್ಟಾಸ್‌ ಹಾಗೂ ರೆಡ್‌ಬುಲ್‌ ತಂಡದ ಮ್ಯಾಕ್ಸ್‌‌ ವರ್ಸ್ಟಾಪನ್‌ ಅವರಿಂದ ತೀವ್ರ ಪೈಪೋಟಿ ಎದುರಾಯಿತು. ಇವರ ಸವಾಲು ಮೀರಿ ನಿಲ್ಲುವಲ್ಲಿ ಯಶಸ್ವಿಯಾದ ಹ್ಯಾಮಿಲ್ಟನ್‌ 1 ಗಂಟೆ 22 ನಿಮಿಷ 50.683 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು. ಇದರೊಂದಿಗೆ 25 ಪಾಯಿಂಟ್ಸ್‌ಗಳನ್ನೂ ತಮ್ಮ ಖಾತೆಗೆ ಸೇರ್ಪಡೆ ಮಾಡಿಕೊಂಡರು.

ಬೊಟ್ಟಾಸ್‌ ಮತ್ತು ವರ್ಸ್ಟಾಪನ್‌ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳೊಂದಿಗೆ ಸ್ಪರ್ಧೆ ಮುಗಿಸಿದರು.

ಬೊಟ್ಟಾಸ್‌ ಅವರು ಹೋದ ವಾರ ನಡೆದಿದ್ದ ಆಸ್ಟ್ರಿಯನ್‌ ಗ್ರ್ಯಾನ್‌ ಪ್ರಿ ರೇಸ್‌ನಲ್ಲಿ ಚಾಂಪಿಯನ್‌ ಆಗಿದ್ದರು.

ರೇಸ್‌ನ ವೇಳೆ ಅವಘಡವೊಂದು ಸಂಭವಿಸಿತು. ಫೆರಾರಿ ತಂಡದ ಚಾರ್ಲ್ಸ್‌ ಲೆಕ್ಲರ್ಕ್‌ ಚಲಾಯಿಸುತ್ತಿದ್ದ ಕಾರು ಟ್ರ್ಯಾಕ್‌ನ ತಿರುವೊಂದರಲ್ಲಿ ನಿಯಂತ್ರಣ ತಪ್ಪಿ ಫೆರಾರಿ ತಂಡದ ಮತ್ತೊಬ್ಬ ಚಾಲಕ ಸೆಬಾಸ್ಟಿಯನ್ ವೆಟಲ್‌ ಅವರ ಕಾರಿಗೆ ಡಿಕ್ಕಿ ಹೊಡೆಯಿತು. ಹೀಗಾಗಿ ಇಬ್ಬರೂ ಸ್ಪರ್ಧೆಯಿಂದ ಹೊರಬಿದ್ದರು.

ಕೊರೊನಾ ವೈರಾಣುವಿನ ಸೋಂಕು ಹರಡುವ ಅಪಾಯವಿರುವುದರಿಂದ ರೇಸ್‌ ನೋಡಲು ಪ್ರೇಕ್ಷಕರಿಗೆ ಅವಕಾಶ ನೀಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT