ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರ ಉದ್ಯೋಗ ಸೃಷ್ಟಿಗೆ ಆದ್ಯತೆ

Last Updated 8 ಮೇ 2018, 14:06 IST
ಅಕ್ಷರ ಗಾತ್ರ

ಮಸ್ಕಿ: ತಂದೆ ರಾಜಾ ಅಮರಪ್ಪ ನಾಯಕರು ಈ ಭಾಗದಲ್ಲಿ ಶಾಸಕರಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇವತ್ತಿಗೂ ಈ ಭಾಗದಲ್ಲಿ ತಂದೆಯವರ ಹೆಸರು ಇದೆ. ಅವರ ಹೆಸರು ಚಿರಾಯುವಾಗಿ ಉಳಿಯಬೇಕು ಎಂಬ ಉದ್ದೇಶದಿಂದ ಹತ್ತು ಹಲವಾರು ಕನಸುಗಳನ್ನು ಹೊತ್ತುಕೊಂಡು ಕಣಕ್ಕೆ ಇಳಿದಿದ್ದೇನೆ ಎನ್ನುವುದು ಮಸ್ಕಿ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸೋಮನಾಥ ನಾಯಕ ಅಭಿಮತ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನಿದೆ?

ತಮ್ಮ ತಂದೆಯವರು ಮಾಡಿದ ಅಭಿವೃದ್ಧಿ ಕೆಲಸಗಳ ಜೊತೆಗೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ 20 ತಿಂಗಳ ಅಧಿಕಾರದ ಅವಧಿಯಲ್ಲಿ ಅನೇಕ ಜನಪರ ಕೆಲಸಗಳು ನಡೆದಿವೆ. ಬಡವರು, ಮಹಿಳೆಯರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ರಾಜ್ಯದ ಜನರು ಮರೆತಿಲ್ಲ. ಇವು ಕ್ಷೇತ್ರದಲ್ಲಿ ನನ್ನ ಗೆಲುವಿಗೆ ಸಹಕಾರಿಯಾಗಲಿದೆ. ಇದರ ಜೊತೆಗೆ ಕ್ಷೇತ್ರದಲ್ಲಿ ಇರುವ ಆಡಳಿತದ ಅಲೆಯೂ ಕೆಲಸ ಮಾಡಲಿದೆ.

ಕ್ಷೇತ್ರದ ಮತದಾರು ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಅನ್ನು ಗೆಲ್ಲಿಸಿದ್ದಾರೆ. ಈ ಸಾರಿ ಜೆಡಿಎಸ್ ಗೆ ಬೆಂಬಲಿಸಲಿದ್ದಾರೆ ಎಂಬುದು ನನ್ನ ವಿಶ್ವಾಸ. ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ.

ನಿಮಗೆ ಏಕೆ ಮತ ಹಾಕಬೇಕು?

ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟು ನೋಡಿದ್ದಾರೆ. ನಾನು ಹೊಸದಾಗಿ ಸ್ಪರ್ಧಿಸಿದ್ದೇನೆ. ಜನರು ಹೊಸತನ ಬಯಸುತ್ತಿದ್ದಾರೆ. ಈ ಕಾರಣದಿಂದ ನನಗೆ ಮತ ಕೊಡುತ್ತಾರೆ. ಜನರೊಂದಿಗೆ ಬೆರೆತು ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದೇನೆ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಮತ್ತೆ ಬರಬೇಕು ಎನ್ನುವ ಹಂಬಲ ಬಹಳ ಜನರಲ್ಲಿದೆ. ಜೆಡಿಎಸ್‌ಗೆ ಹೆಚ್ಚಿನ ಅಧಿಕಾರ ಕೊಡಲು ಜನರು ನನಗೆ ಮತ ಕೊಡಬೇಕು.

 ಕ್ಷೇತ್ರದಲ್ಲಿ ಗುರುತಿಸಿದ ಸಮಸ್ಯೆಗಳು?

ಹತ್ತು ವರ್ಷಗಳಲ್ಲಿ ಮಸ್ಕಿ ಕ್ಷೇತ್ರದಲ್ಲಿ ನೂರಾರು ಉದ್ಯೋಗ ಸೃಷ್ಟಿಯಾಗಬೇಕಾಗಿತ್ತು. ಆದರೆ, ಯುವ ಜನಾಂಗಕ್ಕೆ ಉದ್ಯೋಗ ಸೃಷ್ಟಿಸುವಲ್ಲಿ ಸ್ಥಳೀಯ ಶಾಸಕರು ವಿಫಲರಾಗಿದ್ದಾರೆ. ಶಾಸಕನಾಗಿ ಆಯ್ಕೆಯಾದ ನಂತರ ಮಾಡುವ ಮೊದಲ ಕೆಲಸವೆಂದರೆ ಈ ಭಾಗದ ಯುವಕರಿಗೆ ಉದ್ಯೋಗ ಸೃಷ್ಟಿಸುವ ಉದ್ಯಮಗಳನ್ನು ಸ್ಥಾಪಿಸುತ್ತೇವೆ. ಈ ಮೂಲಕ ಉದ್ಯೋಗವಕಾಶ ಕಲ್ಪಿಸುತ್ತೇನೆ. ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ರಸ್ತೆಗಳು ಸುಧಾರಿಸಬೇಕಾಗಿದೆ. ಶೈಕ್ಷಣಿಕ ವ್ಯವಸ್ಥೆ ಬೆಳೆಯಬೇಕಾಗಿದೆ. ಸಾರಿಗೆ ಹಾಗೂ ವಿದ್ಯುತ್ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ತಜ್ಞರಿಂದ ಕ್ರಿಯಾ ಯೋಜನೆ ಸಿದ್ಧಪಡಿಸಿ ಅವುಗಳನ್ನು ಅನುಷ್ಠಾನಗೊಳಿಸಲಾಗುವುದು.

ಗೆದ್ದ ಮೇಲೆ ನಿಮ್ಮ ಆದ್ಯತೆ ಏನು ?

ಮಸ್ಕಿ ಹೊಸ ತಾಲ್ಲೂಕು ಕೇಂದ್ರವಾಗಿದೆ. ಎಲ್ಲಾ ಕಚೇರಿಗಳು ಶೀಘ್ರ ಕಾರ್ಯಾರಂಭ ಮಾಡಿ ಜನ ಸಾಮಾನ್ಯರ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮಾಡುವಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳನ್ನು ಗುರುತಿಸಿ ಅವುಗಳನ್ನು ಅನುಷ್ಠಾನಕ್ಕೆ ತರಲಾಗುವುದು. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡದೇ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುವುದು.

ಕ್ಷೇತ್ರದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ನನ್ನ ಆಶಯ, ಅದಕ್ಕಾಗಿ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಬೇಕಾದ ಕಾರ್ಯಕ್ರಮಗಳ ಕಾರ್ಯಯೋಜನೆ ಶಿಕ್ಷಣ ತಜ್ಞರಿಂದ ಕ್ರಿಯಾ ಯೋಜನೆ ಸಿದ್ಧಪಡಿಸಿ ಅದನ್ನು ಕಾರ್ಯರೂಪಕ್ಕೆ ತರಲಾಗುವುದು. ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಜೊತೆಗೆ ಈಗಿರುವ ಶಾಲೆ, ಕಾಲೇಜುಗಳಲ್ಲಿ ಉತ್ತಮ ಕಟ್ಟಡ, ಬೋಧಕರ ಕೊರತೆ ತುಂಬಿಸುವ ಮೂಲಕ ಈ ಭಾಗದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲಾಗುವುದು.

ಪ್ರಕಾಶ ಮಸ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT