ರಾಷ್ಟ್ರೀಯ ಸೀನಿಯರ್‌ ಹಾಕಿ ಚಾಂಪಿಯನ್‌ಷಿಪ್‌: ಕರ್ನಾಟಕಕ್ಕೆ ಗೆಲುವು

7
ಮಿಂಚಿದ ರಘುನಾಥ್‌, ಉತ್ತಪ್ಪ

ರಾಷ್ಟ್ರೀಯ ಸೀನಿಯರ್‌ ಹಾಕಿ ಚಾಂಪಿಯನ್‌ಷಿಪ್‌: ಕರ್ನಾಟಕಕ್ಕೆ ಗೆಲುವು

Published:
Updated:
Prajavani

ಗ್ವಾಲಿಯರ್‌: ದ್ವಿತೀಯಾರ್ಧದಲ್ಲಿ ಮಿಂಚಿನ ಸಾಮರ್ಥ್ಯ ತೋರಿದ ಹಾಕಿ ಕರ್ನಾಟಕ ತಂಡ, ರಾಷ್ಟ್ರೀಯ ಸೀನಿಯರ್‌ ಹಾಕಿ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿದಿದೆ.

ಮಧ್ಯಪ್ರದೇಶ ಹಾಕಿ ಅಕಾಡೆಮಿಯ ಅಂಗಳದಲ್ಲಿ ಭಾನುವಾರ ನಡೆದ ‘ಡಿ’ ಗುಂಪಿನ ಹಣಾಹಣಿಯಲ್ಲಿ ವಿ.ಆರ್‌.ರಘುನಾಥ್‌ ಬಳಗ 3–2 ಗೋಲುಗಳಿಂದ ನಾಮಧಾರಿ ಇಲೆವನ್‌ ತಂಡವನ್ನು ಪರಾಭವಗೊಳಿಸಿತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದ ಹಾಕಿ ಕರ್ನಾಟಕ ತಂಡ 20ನೇ ನಿಮಿಷದಲ್ಲಿ ಖಾತೆ ತೆರೆಯಿತು. ನಾಯಕ ರಘುನಾಥ್‌ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿದರು. ಇದರ ಬೆನ್ನಲ್ಲೇ ನಾಮಧಾರಿ ತಂಡ ಸಮಬಲ ಸಾಧಿಸಿತು. ಈ ತಂಡದ ಹರ್ಪಾಲ್‌ ಸಿಂಗ್‌ 24ನೇ ನಿಮಿಷದಲ್ಲಿ ಗೋಲು ಬಾರಿಸಿದರು. 40ನೇ ನಿಮಿಷದಲ್ಲಿ ಲವ್‌ಪ್ರೀತ್‌ ಸಿಂಗ್‌ ಕೈಚಳಕ ತೋರಿದ್ದರಿಂದ ನಾಮಧಾರಿ ತಂಡ 2–1 ಮುನ್ನಡೆ ಗಳಿಸಿತು.

ನಂತರದ ಅವಧಿಯಲ್ಲಿ ರಘುನಾಥ್‌ ಬಳಗದ ಆಟ ರಂಗೇರಿತು. 45ನೇ ನಿಮಿಷದಲ್ಲಿ ಕೆ.ಆರ್‌.ಭರತ್‌ ಗೋಲು ಹೊಡೆದು 2–2 ಸಮಬಲಕ್ಕೆ ಕಾರಣರಾದರು. ಹೀಗಾಗಿ ಅಂತಿಮ ಕ್ವಾರ್ಟರ್‌ನ ಆಟ ಕುತೂಹಲದ ಗಣಿಯಾಗಿತ್ತು. ಕೊನೆಯ 15 ನಿಮಿಷಗಳಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಆದ್ದರಿಂದ ಆಟದ ರೋಚಕತೆ ಹೆಚ್ಚಿತ್ತು. 60ನೇ ನಿಮಿಷದಲ್ಲಿ ಎಸ್‌.ಕೆ.ಉತ್ತಪ್ಪ ಮೋಡಿ ಮಾಡಿದರು. ಚೆಂಡಿನೊಂದಿಗೆ ಎದುರಾಳಿ ತಂಡದ ರಕ್ಷಣಾ ಕೋಟೆ ಭೇದಿಸಿದ ಅವರು ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ತಲುಪಿಸಿ ರಘುನಾಥ್‌ ಪಡೆಯ ಆಟಗಾರರ ಖುಷಿಗೆ ಕಾರಣರಾದರು.

ಈ ಗುಂಪಿನ ಇನ್ನೊಂದು ಪಂದ್ಯದಲ್ಲಿ ಏರ್‌ ಇಂಡಿಯಾ ಸ್ಪೋರ್ಟ್ಸ್‌ ಪ್ರೊಮೋಷನ್‌ ಬೋರ್ಡ್‌ 6–3 ಗೋಲುಗಳಿಂದ ಹಾಕಿ ಒಡಿಶಾ ಎದುರು ಗೆದ್ದಿತು.

‘ಎ’ ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಹಾಕಿ ಪಂಜಾಬ್‌ 3–1 ಗೋಲುಗಳಿಂದ ಹಾಕಿ ಚಂಡೀಗಡ ತಂಡವನ್ನು ಮಣಿಸಿತು.

ವಿಜಯೀ ತಂಡದ ಸುಖದೇವ್‌ ಸಿಂಗ್‌ (2ನೇ ನಿಮಿಷ), ರಮಣದೀಪ್‌ ಸಿಂಗ್‌ (25ನೇ ನಿ.) ಮತ್ತು ರೂಪಿಂದರ್‌ ಪಾಲ್‌ ಸಿಂಗ್‌ (41ನೇ ನಿ.) ಗೋಲು ಹೊಡೆದರು.

ಇನ್ನೊಂದು ಪಂದ್ಯದಲ್ಲಿ ಮುಂಬೈ ಹಾಕಿ ಸಂಸ್ಥೆ ಲಿಮಿಟೆಡ್‌ 3–1 ಗೋಲುಗಳಿಂದ ಅಸೋಸಿಯೇಷನ್‌ ಆಫ್‌ ಇಂಡಿಯನ್‌ ಯೂನಿವರ್ಸಿಟಿ ತಂಡದ ಎದುರು ವಿಜಯಿಯಾಯಿತು.

‍ಪಿಎಸ್‌ಪಿಬಿ 5–0 ಗೋಲುಗಳಿಂದ ಸಿಎಜಿ ತಂಡವನ್ನು ಸೋಲಿಸಿತು. ಹರಿಯಾಣ ತಂಡ 4–1 ಗೋಲುಗಳಿಂದ ಭೋಪಾಲ್‌ ಎದುರು ಗೆದ್ದಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !