ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ವಿಶ್ವಕಪ್‌: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಇಂಗ್ಲೆಂಡ್‌

ಟೂರ್ನಿಯ ಮೊದಲ ‘ಕ್ರಾಸ್‌ ಓವರ್‌’ ಪಂದ್ಯದಲ್ಲಿ ನ್ಯೂಜಿಲೆಂಡ್‌ ಸವಾಲು ಮೀರಿದ ಆಂಗ್ಲರ ನಾಡಿನ ತಂಡ
Last Updated 10 ಡಿಸೆಂಬರ್ 2018, 14:29 IST
ಅಕ್ಷರ ಗಾತ್ರ

ಭುವನೇಶ್ವರ: ವಿಲ್‌ ಕಾಲ್ನನ್‌ ಮತ್ತು ಲ್ಯೂಕ್‌ ಟೇಲರ್‌ ಅವರ ಕೈಚಳಕದಲ್ಲಿ ಅರಳಿದ ತಲಾ ಒಂದು ಗೋಲಿನ ಬಲದಿಂದ ಇಂಗ್ಲೆಂಡ್‌ ತಂಡ ಈ ಬಾರಿಯ ಹಾಕಿ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಕಳಿಂಗ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮೊದಲ ‘ಕ್ರಾಸ್‌ ಓವರ್‌’ ಹಣಾಹಣಿಯಲ್ಲಿ ಇಂಗ್ಲೆಂಡ್‌ 2–0 ಗೋಲುಗಳಿಂದ ನ್ಯೂಜಿಲೆಂಡ್‌ ತಂಡವನ್ನು ಪರಾಭವಗೊಳಿಸಿತು.

ಬುಧವಾರ ನಡೆಯುವ ಎಂಟರ ಘಟ್ಟದ ಪೈಪೋಟಿಯಲ್ಲಿ ಇಂಗ್ಲೆಂಡ್‌ ತಂಡ ಒಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿರುವ ಅರ್ಜೆಂಟೀನಾ ವಿರುದ್ಧ ಆಡಲಿದೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಏಳನೇ ಸ್ಥಾನ ಹೊಂದಿರುವ ಇಂಗ್ಲೆಂಡ್‌ ತಂಡ ನ್ಯೂಜಿಲೆಂಡ್‌ ಎದುರಿನ ಹೋರಾಟದ ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಪ್ರಾಬಲ್ಯ ಮೆರೆಯಿತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದ ಫಿಲ್‌ ರೋ‍ಪರ್‌ ಪಡೆಗೆ ಐದನೇ ನಿಮಿಷದಲ್ಲಿ ‍ಪೆನಾಲ್ಟಿ ಕಾರ್ನರ್‌ ಲಭಿಸಿತ್ತು. ಈ ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳಲು ಇಂಗ್ಲೆಂಡ್‌ ಆಟಗಾರರು ವಿಫಲರಾದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನ ಹೊಂದಿರುವ ಕಿವೀಸ್‌ ನಾಡಿನ ತಂಡ ನಂತರ ಪರಿಣಾಮಕಾರಿ ಆಟ ಆಡಿತು. ಹೀಗಾಗಿ ಮೊದಲ ಕ್ವಾರ್ಟರ್‌ನ ಆಟ ಗೋಲು ರಹಿತವಾಗಿ ಅಂತ್ಯಕಂಡಿತು.

ಎರಡನೇ ಕ್ವಾರ್ಟರ್‌ನಲ್ಲಿ ಇಂಗ್ಲೆಂಡ್‌ಗೆ ಯಶಸ್ಸು ಸಿಕ್ಕಿತು. 25ನೇ ನಿಮಿಷದಲ್ಲಿ ವಿಲ್‌ ಕಾಲ್ನನ್‌ ತಂಡದ ಖಾತೆ ತೆರೆದರು. ಎದುರಾಳಿ ಆವರಣದ ಎಡ ತುದಿಯಿಂದ ನಾಯಕ ರೋಪರ್‌ ತಮ್ಮತ್ತ ತಳ್ಳಿದ ಚೆಂಡಿನ ಮೇಲೆ ಚುರುಕಾಗಿ ನಿಯಂತ್ರಣ ಸಾಧಿಸಿದ ಕಾಲ್ನರ್‌, ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ಮುಟ್ಟಿಸಿ ಸಂಭ್ರಮಿಸಿದರು.

27ನೇ ನಿಮಿಷದಲ್ಲಿ ಆಂಗ್ಲರ ನಾಡಿನ ತಂಡಕ್ಕೆ ಮುನ್ನಡೆ ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶ ಸಿಕ್ಕಿತ್ತು. ಲಿಯಾಮ್‌ ಅನ್‌ಸೆಲ್‌ ಬಾರಿಸಿದ ಚೆಂಡನ್ನು ನ್ಯೂಜಿಲೆಂಡ್‌ ತಂಡದ ಗೋಲ್‌ಕೀಪರ್‌ ರಿಚರ್ಡ್‌ ಜಾಯ್ಸ್‌ ಆಕರ್ಷಕ ರೀತಿಯಲ್ಲಿ ತಡೆದರು.

ಟರಾಂಟ್‌ ಬ್ಲೇರ್‌ ಸಾರಥ್ಯದ ನ್ಯೂಜಿಲೆಂಡ್‌ ತಂಡಕ್ಕೆ 28ನೇ ನಿಮಿಷದಲ್ಲಿ ಸಮಬಲದ ಗೋಲು ಗಳಿಸುವ ಅವಕಾಶ ಲಭ್ಯವಾಗಿತ್ತು. ನಿಕ್‌ ರಾಸ್‌ ಅವರ ಪ್ರಯತ್ನವನ್ನು ಇಂಗ್ಲೆಂಡ್‌ ಗೋಲ್‌ಕೀಪರ್‌ ಜಾರ್ಜ್‌ ಪಿನ್ನರ್‌ ವಿಫಲಗೊಳಿಸಿದರು. ಇದರ ಬೆನ್ನಲ್ಲೇ ರೋಪರ್‌ ಬಳಗಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್‌ ಸಿಕ್ಕಿತ್ತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಇಂಗ್ಲೆಂಡ್‌ ತಂಡಕ್ಕೆ ಸಾಧ್ಯವಾಗಲಿಲ್ಲ.

ದ್ವಿತೀಯಾರ್ಧದಲ್ಲೂ ರೋ‍ಪರ್‌ ಬಳಗಕ್ಕೆ ಸತತವಾಗಿ ‍ಪೆನಾಲ್ಟಿ ಕಾರ್ನರ್‌ ಅವಕಾಶಗಳು ಸಿಕ್ಕವು. ಇವುಗಳನ್ನು ಗೋಲುಗಳನ್ನಾಗಿ ಪರಿವರ್ತಿಸಲು ಆಂಗ್ಲರ ನಾಡಿನ ತಂಡ ವಿಫಲವಾಯಿತು. ಇನ್ನೊಂದೆಡೆ ನ್ಯೂಜಿಲೆಂಡ್‌ ಕೂಡಾ ಸಮಬಲದ ಗೋಲು ಗಳಿಸಲು ಸಾಕಷ್ಟು ಪ್ರಯತ್ನಿಸಿತು.

ಮೂರನೇ ಕ್ವಾರ್ಟರ್‌ನ ಅಂತ್ಯದಲ್ಲಿ (44ನೇ ನಿಮಿಷ) ಇಂಗ್ಲೆಂಡ್‌ ತಂಡ ಮುನ್ನಡೆ ಹೆಚ್ಚಿಸಿಕೊಂಡಿತು. ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಲ್ಯೂಕ್‌ ಟೇಲರ್‌ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

ಅಂತಿಮ ‘ಹೂಟರ್‌’ನಲ್ಲಿ ಉಭಯ ತಂಡಗಳು ತುರುಸಿನ ಪೈಪೋಟಿಗೆ ಮುಂದಾದವು. ಕೊನೆಯ ಕ್ಷಣದಲ್ಲಿ ನ್ಯೂಜಿಲೆಂಡ್‌ಗೆ ‍ಪೆನಾಲ್ಟಿ ಕಾರ್ನರ್‌ ಸಿಕ್ಕಿತ್ತು. ಈ ಅವಕಾಶವನ್ನು ಕೈಚೆಲ್ಲಿದ ಟರಾಂಟ್‌ ಬ್ಲೇರ್‌ ಬಳಗ ಸೋಲಿನ ಸುಳಿಗೆ ಸಿಲುಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT