ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಮುಂಬೈ ಸಿಟಿಗೆ ಭರ್ಜರಿ ಗೆಲುವು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಎಟಿಕೆಎಂಬಿಗೆ ನಿರಾಸೆ
Last Updated 1 ಡಿಸೆಂಬರ್ 2021, 16:32 IST
ಅಕ್ಷರ ಗಾತ್ರ

ಫತೋರ್ಡ: ಹೈದರಾಬಾದ್ ಎಫ್‌ಸಿ ಎದುರು ಕಳೆದ ಪಂದ್ಯದಲ್ಲಿ ಅನುಭವಿಸಿದ ಸೋಲಿನಿಂದ ಚೇತರಿಸಿಕೊಂಡ ಮುಂಬೈ ಸಿಟಿ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಜಯ ಸಾಧಿಸಿತು.

ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಎಟಿಕೆಎಂಬಿಯನ್ನು ಮುಂಬೈ 5–1ರಲ್ಲಿ ಮಣಿಸಿತು. ನಾಲ್ಕನೇ ನಿಮಿಷದಲ್ಲಿ ವಿಕ್ರಂ ಸಿಂಗ್ ಗಳಿಸಿದ ಗೋಲಿನೊಂದಿಗೆ ಮುನ್ನಡೆ ಸಾಧಿಸಿದ ಮುಂಬೈ ಮೊದಲಾರ್ಧದಲ್ಲೇ ಮೂರು ಗೋಲು ದಾಖಲಿಸಿತು.

25ನೇ ನಿಮಿಷದಲ್ಲಿ ವಿಕ್ರಂ ಸಿಂಗ್ ಮತ್ತೊಂದು ಗೋಲು ಗಳಿಸಿದರು. 38ನೇ ನಿಮಿಷದಲ್ಲಿ ಇಗರ್ ಆಂಗುಲೊ ಚೆಂಡನ್ನು ಗುರಿ ಮುಟ್ಟಿಸಿದರು. ದ್ವಿತೀಯಾರ್ಧದಲ್ಲಿ ಮುರ್ತಜಾ ಫಾಲ್ (47ನೇ ನಿ) ಮತ್ತು ಬಿಪಿನ್ ಸಿಂಗ್ (52ನೇ ನಿ) ಗೋಲು ಗಳಿಸಿದರು. ಎಟಿಕೆಎಂಬಿ ಸೋಲಿನ ಅಂತರವನ್ನು ವಿಲಿಯಮ್ಸ್ (60ನೇ ನಿ) ಕಡಿಮೆ ಮಾಡಿದರು.

ಭರವಸೆಯಲ್ಲಿ ಹೈದರಾಬಾದ್ ಎಫ್‌ಸಿ

ಬ್ಯಾಂಬೊಲಿಮ್‌ನಲ್ಲಿ ಗುರುವಾರ ಹೈದರಾಬಾದ್ ಎಫ್‌ಸಿ ಮತ್ತು ಜೆಮ್ಶೆಡ್‌ಪುರ ಎಫ್‌ಸಿ ತಂಡಗಳು ಸೆಣಸಲಿವೆ. ಹಾಲಿ ಚಾಂಪಿಯನ್ ಮುಂಬೈ ಸಿಟಿ ಎಫ್‌ಸಿಯನ್ನು ಮಣಿಸಿ ಆತ್ಮವಿಶ್ವಾದಲ್ಲಿರುವ ಹೈದರಾಬಾದ್ ತಂಡ ಮತ್ತೊಂದು ಗೆಲುವಿನ ಕನಸು ಹೊತ್ತುಕೊಂಡು ಕಣಕ್ಕೆ ಇಳಿಯಲಿದೆ.

ಡಿಸೆಂಬರ್‌ನಲ್ಲಿ ಹೈದರಾಬಾದ್ ತಂಡ ಒಟ್ಟು ಆರು ಪಂದ್ಯಗಳನ್ನು ಆಡಲಿದೆ. ಎಲ್ಲವೂ ಕಠಿಣ ಹಣಾಹಣಿಯಾಗಿದ್ದು ಒಂದೇ ಅಂಗಣದಲ್ಲಿ ನಡೆಯಲಿವೆ. ಓವೆನ್ ಕೊಯ್ಲೆ ಅವರ ಜೆಮ್ಶೆಡ್‌ಪುರ ಎಫ್‌ಸಿ ಹಿಂದಿನ ಪಂದ್ಯದಲ್ಲಿ ಎಫ್‌ಸಿ ಗೋವಾ ಎದುರು 3–1ರ ಜಯ ಗಳಿಸಿತ್ತು. ಆದ್ದರಿಂದ ಆ ತಂಡವೂ ಭರವಸೆಯಲ್ಲಿದೆ.

ನೆರಿಜಸ್ ವಲ್ಕಿಸ್‌ ಮತ್ತು ಜೋರ್ಡಾನ್ ಮರ್ರೆ ಅವರು ಜೆಮ್ಶೆಡ್‌ಪುರ ಎಫ್‌ಸಿ ಆಕ್ರಮಣ ವಿಭಾಗಕ್ಕೆ ಬಲ ತುಂಬಿದ್ದಾರೆ. ಅಲೆಕ್ಸ್ ಲೀಮಾ ಮತ್ತು ಗ್ರೆಗ್ ಸ್ಟಿವರ್ಟ್ ಅವರ ಅನುಭವವೂ ತಂಡದ ಜೊತೆಗಿದೆ.

ಹೈದರಾಬಾದ್‌ಗೆ ಜವೊ ವಿಕ್ಟರ್‌, ಆಕಾಶ್ ಮಿಶ್ರಾ, ಆಶಿಶ್ ರಾಯ್, ಮೊಹಮ್ಮದ್ ಯಾಸಿರ್ ಮತ್ತು ಹಿತೇಶ್ ಶರ್ಮಾ ಅವರು ಹೈದರಾಬಾದ್ ತಂಡದ ಬೆನ್ನೆಲುಬು ಆಗಿದ್ದು ಮತ್ತೊಮ್ಮೆ ಮಿಂಚು ಹರಿಸಲು ಸಿದ್ಧರಾಗಿದ್ದಾರೆ. ಹಾಲಿಚರಣ್ ನಜರೆ ಮತ್ತು ಸಾಹಿಲ್ ತವೊರಾ ಅವರು ಈ ಪಂದ್ಯದಲ್ಲೂ ತಂಡಕ್ಕೆ ಲಭ್ಯ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT