ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಹಾಂಕಾಂಗ್‌ ಸವಾಲು

18 ವರ್ಷದೊಳಗಿನ ಮಹಿಳೆಯರ ಏಷ್ಯಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌
Last Updated 1 ನವೆಂಬರ್ 2018, 18:32 IST
ಅಕ್ಷರ ಗಾತ್ರ

‌ಬೆಂಗಳೂರು: ಏಷ್ಯಾ 18 ವರ್ಷದೊಳಗಿನ ಮಹಿಳೆಯರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ‘ಬಿ’ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತ ತಂಡ ಹಾಂಕಾಂಗ್‌ ಎದುರು ಸೆಣಸಲಿದೆ. ಪಂದ್ಯ ಶುಕ್ರವಾರ ರಾತ್ರಿ ಎಂಟು ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

‘ಎ’ ಗುಂಪಿನಲ್ಲಿದ್ದ ಭಾರತ ಗುಂಪು ಹಂತದಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಬುಧವಾರವೇ ಸೆಮಿಫೈನಲ್‌ಗೆ ಲಗ್ಗೆ ಇರಿಸಿತ್ತು. ಗುಂಪು ಹಂತದ ಮೊದಲ ಪಂದ್ಯದಲ್ಲಿ ಭಾರತ 73–65ರಲ್ಲಿ ಇರಾನ್ ವಿರುದ್ಧ ಗೆದ್ದಿತ್ತು. ನಂತರ ಗುವಾಮ್‌ ಎದುರು 107–42ರಿಂದ ಗೆದ್ದಿತ್ತು. ಕೊನೆಯ ಪಂದ್ಯದಲ್ಲಿ 79–49ರಲ್ಲಿ ಸಿಂಗಪುರವನ್ನು ಸೋಲಿಸಿತ್ತು.

ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಹಾಂಕಾಂಗ್‌ ತಂಡ ಸಿಂಗಪುರವನ್ನು 67–37ರಿಂದ ಮಣಿಸಿ ನಾಲ್ಕರ ಘಟ್ಟ ಪ್ರವೇಶಿಸಿತು. ವಿಂಗ್ ಗಾ ಪೂನ್‌ (18 ಪಾಯಿಂಟ್‌), ತಾನ್ ಫಂಗ್ ಮಾ (9 ರೀಬೌಂಡ್‌) ಮತ್ತು ಪೀ ಯಿಂಗ್ ವೋ (7 ಅಸಿಸ್ಟ್‌) ಹಾಂಕಾಂಗ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕಜಕಸ್ತಾನ ಸೆಮಿಫೈನಲ್‌ಗೆ: ಕೋರಮಂಗದಲ್ಲಿ ಗುರುವಾರ ನಡೆದ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಇರಾನ್ ವಿರುದ್ಧ 71–56ರಿಂದ ಗೆದ್ದ ಕಜಕಸ್ತಾನ ಸೆಮಿಫೈನಲ್‌ಗೆ ಪ್ರವೇಶಿಸಿತು. ನಾಲ್ಕರ ಘಟ್ಟದ ಪಂದ್ಯದಲ್ಲಿ ಈ ತಂಡ ಸಿರಿಯಾವನ್ನು ಎದುರಿಸಲಿದೆ.

ಇನಾ ಕುಲಿಕೋವ ಅವರು ಮಿಂಚಿನ ಆಟದ ಮೂಲಕ ಕಜಕಸ್ತಾನಕ್ಕೆ ಗೆಲುವು ತಂದುಕೊಟ್ಟರು. ಅವರು ಒಟ್ಟು 26 ಪಾಯಿಂಟ್ ಗಳಿಸಿ ಗಮನ ಸೆಳೆದರು. 20 ರೀ ಬೌಂಡ್ ಪಾಯಿಂಟ್‌ಗಳನ್ನು ಗಳಿಸಿಕೊಟ್ಟ ಮರಿಯಾ ಜೈತ್ಸೇವ ಕೂಡ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇರಾನ್ ತಂಡದ ಪರ ಸಹಾರ್ ಗುಡಾರ್ಜಿ 11 ಪಾಯಿಂಟ್ ಮತ್ತು ಏಳು ಅಸಿಸ್ಟ್‌ಗಳ ಮೂಲಕ ಮಿಂಚಿದರೆ, ಜೈನಬ್ ಗಫಾರಿ 10 ರೀಬೌಂಡ್‌ಗಳ ಮೂಲಕ ಗಮನ ಸೆಳೆದರು.

‘ಬಿ’ ವಿಭಾಗದ ಏಳು ಮತ್ತು ಎಂಟನೇ ಸ್ಥಾನವನ್ನು ನಿರ್ಣಯಿಸುವ ಪಂದ್ಯದಲ್ಲಿ ಸಮೋ ತಂಡ ಗುವಾಮ್ ಎದುರು 62–48ರಿಂದ ಗೆದ್ದಿತು.

ಆಸ್ಟ್ರೇಲಿಯಾ–ಜಪಾನ್ ಸೆಣಸು: ‘ಎ’ ವಿಭಾಗದಲ್ಲಿ ನ್ಯೂಜಿಲೆಂಡ್‌ ವಿರುದ್ಧ 82–66ರಿಂದ ಗೆದ್ದ ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಲಗ್ಗೆ ಇರಿಸಿತು. ಶುಕ್ರವಾರ ನಡೆಯಲಿರುವ ನಾಲ್ಕರ ಘಟ್ಟದ ಪಂದ್ಯದಲ್ಲಿ ಈ ತಂಡ ಜಪಾನ್ ವಿರುದ್ಧ ಸೆಣಸಲಿದೆ.

ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಕೊರಿಯಾ, ಚೀನಾವನ್ನು ಎದುರಿಸಲಿದೆ. ಗುರುವಾರ ನಡೆದ ಪಂದ್ಯದಲ್ಲಿ ಚೀನಾ 80–53ರಲ್ಲಿ ಚೀನಾ ತೈಪೆಯನ್ನು ಮಣಿಸಿತು. ದಕ್ಷಿಣ ಕೊರಿಯಾ ಬುಧವಾರವೇ ಸೆಮಿಗೆ ಪ್ರವೇಶಿಸಿತ್ತು. ಏಳು ಮತ್ತು ಎಂಟನೇ ಸ್ಥಾನ ನಿರ್ಣಯಿಸುವ ಪಂದ್ಯದಲ್ಲಿ ಇಂಡೊನೇಷ್ಯಾ 86–35ರಿಂದ ಮಲೇಷ್ಯಾವನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT