ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ನರ ಸೆಮಿಫೈನಲ್‌ ಹಣಾಹಣಿ ಇಂದು

ಏಷ್ಯನ್‌ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ–ಜಪಾನ್ ತಂಡಗಳ ಸೆಣಸು
Last Updated 26 ಅಕ್ಟೋಬರ್ 2018, 19:48 IST
ಅಕ್ಷರ ಗಾತ್ರ

ಮಸ್ಕತ್‌: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಕುತೂಹಲಕಾರಿ ಸೆಮಿಫೈನಲ್ ಪಂದ್ಯ ಶನಿವಾರ ನಡೆಯಲಿದೆ. ಹಾಲಿ ಚಾಂಪಿಯನ್‌ ಭಾರತ ಮತ್ತು ಈ ಬಾರಿಯ ಏಷ್ಯಾಕಪ್‌ನಲ್ಲಿ ಚಾಂಪಿಯನ್ ಆಗಿದ್ದ ಜಪಾನ್ ತಂಡಗಳು ಪ್ರಶಸ್ತಿ ಸುತ್ತಿನ ಕನಸು ಹೊತ್ತು ಕಣಕ್ಕೆ ಇಳಿಯಲಿವೆ.

ಗುಂಪು ಹಂತದ ಪಂದ್ಯಗಳಲ್ಲಿ ಅಮೋಘ ಸಾಮರ್ಥ್ಯ ತೋರಿರುವ ಭಾರತ ತಂಡ ಮಲೇಷ್ಯಾ ಎದುರು ಡ್ರಾ ಸಾಧಿಸಿದ್ದು ಬಿಟ್ಟರೆ ಉಳಿದೆಲ್ಲ ಪಂದ್ಯಗಳಲ್ಲೂ ಭಾರಿ ಅಂತರದಿಂದ ಗೆದ್ದಿತ್ತು. ಜಪಾನ್ ವಿರುದ್ಧ 9–0 ಅಂತರದ ಜಯ ಗಳಿಸಿತ್ತು. ಹೀಗಾಗಿ ನಾಲ್ಕರ ಘಟ್ಟದ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸ ಹೊಂದಿದೆ.

ಟೂರ್ನಿಯ ಗುಂಪು ಹಂತದಲ್ಲಿ ಒಂದು ಪಂದ್ಯವನ್ನೂ ಸೋಲದ ಏಕೈಕ ತಂಡ ಭಾರತ. ಐದು ಪಂದ್ಯಗಳಿಂದ 13 ಪಾಯಿಂಟ್‌ ಕಲೆ ಹಾಕಿರುವ ಭಾರತ ಗುಂಪಿನ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿದೆ. ಪಾಕಿಸ್ತಾನ ಎರಡನೇ ಸ್ಥಾನದಲ್ಲಿದ್ದು ಮಲೇಷ್ಯಾ ಮತ್ತು ಜಪಾನ್ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನ ಗಳಿಸಿವೆ.

ಏಷ್ಯನ್‌ ಕ್ರೀಡಾಕೂಟದಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲಾಗದೆ ಟೀಕೆಗೆ ಒಳಗಾಗಿರುವ ಭಾರತ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಗೆದ್ದು ಗೌರವ ಉಳಿಸಿಕೊಳ್ಳುವ ಬಯಕೆಯಲ್ಲಿದೆ. ವಿಶ್ವಕಪ್‌ಗೂ ಮುನ್ನ ಇದು ಕೊನೆಯ ಪ್ರಮುಖ ಟೂರ್ನಿಯಾಗಿದೆ. ವಿಶ್ವಕಪ್‌ನಲ್ಲಿ ನಿರಾಳವಾಗಿ ಕಣಕ್ಕೆ ಇಳಿಯಬೇಕಾದರೆ ಇಲ್ಲಿ ಪ್ರಶಸ್ತಿ ಗೆಲ್ಲಬೇಕಾದ ಅಗತ್ಯವೂ ತಂಡಕ್ಕಿದೆ. ಹೀಗಾಗಿ ಸೆಮಿಫೈನಲ್‌ ಪಂದ್ಯ ಮಹತ್ವ ಪಡೆದುಕೊಂಡಿದೆ.

ಯುವ ಆಟಗಾರರ ಸವಾಲು: ಏಷ್ಯನ್‌ ಕ್ರೀಡಾಕೂಟದಲ್ಲಿ ಪ್ರಶಸ್ತಿ ಗೆದ್ದ ನಂತರ ಜಪಾನ್‌ ಆರು ಮಂದಿ ಯುವ ಆಟಗಾರರಿಗೆ ಅವಕಾಶ ನೀಡಿದೆ. ಈ ಟೂರ್ನಿಯಲ್ಲೂ ಅವರು ಆಡುತ್ತಿದ್ದಾರೆ. ಸೋಲಿನ ಸುಳಿಯಿಂದ ಎದ್ದು ಬಂದು ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿರುವ ಈ ತಂಡ ಭಾರತಕ್ಕೆ ಶನಿವಾರ ಯಾವ ರೀತಿಯಲ್ಲಿ ತಿರುಗೇಟು ನೀಡಲಿದೆ ಎಂಬುದು ಕುತೂಹಲ ಕೆರಳಿಸಿರುವ ಅಂಶ.

* ಸೆಮಿಫೈನಲ್‌ನಲ್ಲಿ ತಂಡ ಉತ್ತಮ ಸಾಮರ್ಥ್ಯ ತೋರುವ ಭರವಸೆ ಇದೆ. ಜಪಾನ್ ವಿರುದ್ಧ ಕಳೆದ ಪಂದ್ಯದಲ್ಲಿ ಆಡಿದ ರೀತಿಗೂ ಶನಿವಾರ ಆಡುವ ರೀತಿಗೂ ವ್ಯತ್ಯಾಸ ಇರಲಿದೆ.

ಹರೇಂದ್ರ ಸಿಂಗ್‌,ಭಾರತ ತಂಡದ ಕೋಚ್‌

*ಈ ಹಿಂದೆ 10 ಬಾರಿ ಮುಖಾಮುಖಿಯಾದಾಗ ಭಾರತ ಒಂಬತ್ತು ಬಾರಿ ಗೆದ್ದಿದೆ. ಆದರೆ ಶನಿವಾರ ಜಪಾನ್ ಮೇಲುಗೈ ಸಾಧಿಸಿ ಜಯ ತನ್ನದಾಗಿಸಿಕೊಳ್ಳಲಿದೆ.
–ಸೀಗ್‌ಫ್ರೀಡ್ ಐಕ್‌ಮನ್‌,ಜಪಾನ್ ತಂಡದ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT