ಸೋಮವಾರ, ನವೆಂಬರ್ 30, 2020
19 °C

ಆನ್‌ಲೈನ್‌ ಚೆಸ್‌: ಚಿನ್ನ ಗೆದ್ದ ಭಾರತದ ಮಹಿಳೆಯರು, ಪುರುಷರ ತಂಡಕ್ಕೆ ಬೆಳ್ಳಿ ಪದಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಅಮೋಘ ಆಟವಾಡಿದ ಭಾರತದ ಮಹಿಳೆಯರು ಏಷ್ಯನ್‌ ನೇಷನ್ಸ್ ಕಪ್‌ ಆನ್‌ಲೈನ್ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಪುರುಷರ ತಂಡ ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು.

ಅಂತಿಮ ಸುತ್ತಿನಲ್ಲಿ ಮಹಿಳಾ ತಂಡ 6–2ರಿಂದ ಇಂಡೊನೇಷ್ಯಾ ತಂಡವನ್ನು ಪರಾಭವಗೊಳಿಸಿದರೆ, ಪುರುಷರ ತಂಡ 3.5–4.5ರಿಂದ ಆಸ್ಟ್ರೇಲಿಯಾಕ್ಕೆ ಮಣಿಯಿತು.

ಆಗಸ್ಟ್‌ನಲ್ಲಿ ನಡೆದ ಫಿಡೆ ಆನ್‌ಲೈನ್‌ ಒಲಿಂಪಿಯಾಡ್‌ನಲ್ಲಿ ಭಾರತ ತಂಡ ಚಿನ್ನದ ಪದಕ ಗೆದ್ದಿತ್ತು.

ಫೈನಲ್‌ನಲ್ಲಿ ಮಹಿಳಾ ಗ್ರ್ಯಾಂಡ್‌ಮಾಸ್ಟರ್‌ ಪಿ.ವಿ.ನಂದಿತಾ ಅವರು ಚೆಲ್ಸಿ ಮೋನಿಕಾ ಇಗ್ನೇಷಿಯಸ್‌ ಸಿಹಿತೆ ಅವರನ್ನು ಸೋಲಿಸುವ ಮೂಲಕ ಭಾರತಕ್ಕೆ ಮೊದಲ ಪಾಯಿಂಟ್ ತಂದುಕೊಟ್ಟರು. ಪದ್ಮಿನಿ ರಾವುತ್‌ ಅವರು ಮೇದಿನಾ ವಾರ್ಡಾ ಔಲಿಯಾ ಎದುರು ಗೆದ್ದು ಬೀಗಿದರು.

ಉತ್ತಮ ಲಯದಲ್ಲಿರುವ ಆರ್‌.ವೈಶಾಲಿ ಹಾಗೂ ನಾಯಕಿ ಮೇರಿ ಆ್ಯನ್‌ ಗೋಮ್ಸ್ ಅವರು ಡ್ರಾ ಸಾಧಿಸಿದರು. ಹೀಗಾಗಿ ಎದುರಾಳಿ ಇಂಡೊನೇಷ್ಯಾ ಎದುರಿನ ಮೊದಲ ಪಂದ್ಯವನ್ನು 3–1ರಿಂದ ಭಾರತ ತನ್ನದಾಗಿಸಿಕೊಂಡಿತು.

ಎರಡನೇ ಪಂದ್ಯದಲ್ಲಿ ಭಾರತದ ಮಹಿಳೆಯರು ಪರಿಣಾಮಕಾರಿ ಆಟವಾಡಿದರು. ಭಕ್ತಿ ಕುಲಕರ್ಣಿ, ಪದ್ಮಿಣಿ ರಾವುತ್ ಹಾಗೂ ನಂದಿತಾ ಅವರು ಕ್ರಮವಾಗಿ ಔಲಿಯಾ, ಸಿಹಿತೆ ಹಾಗೂ ದಿತಾ ಕರೆಂಜಾ ಎದುರು ಜಯಭೇರಿ ಬಾರಿಸಿದರು. ವೈಶಾಲಿ ಅವರು ಕರೀಷ್ಮಾ ಸುಖಂದರ್‌ ಎದುರು ಸೋತರು.

ಪುರುಷರ ಅಂತಿಮ ಸುತ್ತಿನ ಮೊದಲ ಪಂದ್ಯದಲ್ಲಿ ಬಿ ಅಧಿಬನ್‌ ಹಾಗೂ ಎಸ್‌.ಪಿ.ಸೇತುರಾಮನ್‌ ಅವರು ಆ್ಯಂಟನ್‌ ಸ್ಮಿರ್ನೊವ್‌ ಹಾಗೂ ಮ್ಯಾಕ್ಸ್ ಇಲ್ಲಿಂಗ್‌ವರ್ಥ್‌ ಎದುರು 1.5–2.5ರಿಂದ ಸೋತರು. ಅನುಭವಿ ಪಟು ಕೆ.ಶಶಿಕಿರಣ್‌ ಅವರು ಜೇಮ್ಸ್ ಮೋರಿಸ್‌ ಎದುರು ಗೆದ್ದರೆ, ನಿಹಾಲ್‌ ಸರಿನ್‌ ಅವರು ಟೆಮೂರ್‌ ಕ್ಯೂಬಕರೊವ್‌ ಅವರೊಂದಿಗೆ ಡ್ರಾ ಸಾಧಿಸಿದರು.

ಎರಡನೇ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ 2–2ರಿಂದ ಡ್ರಾಗೆ ಸಮ್ಮತಿಸಿದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು