ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮಹಿಳೆಯರ ಶುಭಾರಂಭ

ಮಲೇಷ್ಯಾ ತಂಡದ ಎದುರಿನ ಹಾಕಿ ಸರಣಿ: ಎರಡು ಗೋಲು ಗಳಿಸಿದ ವಂದನಾ ಕಟಾರಿಯಾ
Last Updated 4 ಏಪ್ರಿಲ್ 2019, 19:20 IST
ಅಕ್ಷರ ಗಾತ್ರ

ಕ್ವಾಲಾಲಂಪುರ : ಸ್ಟ್ರೈಕರ್ ವಂದನಾ ಕಟಾರಿಯಾ ಗಳಿಸಿದ ಎರಡು ಮೋಹಕ ಗೋಲುಗಳ ಬಲದಿಂದ ಭಾರತ ಮಹಿಳಾ ತಂಡದವರು ಮಲೇಷ್ಯಾ ಎದುರಿನ ಹಾಕಿ ಸರಣಿಯಲ್ಲಿ ಶುಭಾರಂಭ ಮಾಡಿದರು. ಗುರುವಾರ ಆರಂಭವಾದ ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 3–0 ಗೋಲುಗಳಿಂದ ಗೆದ್ದಿತು.

17ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. ಲಾಲ್‌ರೆನ್ಸಿಯಾಮಿ 38ನೇ ನಿಮಿಷದಲ್ಲಿ ಮುನ್ನಡೆಯನ್ನು ಹೆಚ್ಚಿಸಿದರು. ವಂದನಾ 60ನೇ ನಿಮಿಷದಲ್ಲಿ ಮತ್ತೊಮ್ಮೆ ಚೆಂಡನ್ನು ಗುರಿ ಮುಟ್ಟಿಸಿ ಜಯದ ಅಂತರವನ್ನು ಹೆಚ್ಚಿಸಿದರು.

ಆತಿಥೇಯರು ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಹೀಗಾಗಿ ಮೂರನೇ ನಿಮಿಷದಲ್ಲೇ ಆ ತಂಡಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೆ ಗೋಲು ಗಳಿಸುವ ಪ್ರಯತ್ನವನ್ನು ಭಾರತದ ಗೋಲ್‌ಕೀಪರ್‌ ಸವಿತಾ ವಿಫಲಗೊಳಿಸಿದರು.

ಐದನೇ ನಿಮಿಷದಲ್ಲಿ ಲಾಲ್‌ರೆನ್ಸಿಯಾಮಿ ಭಾರಿ ಆಕ್ರಮಣದೊಂದಿಗೆ ಮುನ್ನುಗ್ಗಿದರು. ಆದರೆ ಅವರು ಹೊಡೆದ ಚೆಂಡು ಗುರಿ ಮುಟ್ಟಲಿಲ್ಲ. ಎರಡು ನಿಮಿಷಗಳ ನಂತರ ನವನೀತ್ ಕೌರ್ ಅವರಿಗೂ ಉತ್ತಮ ಅವಕಾಶ ಲಭಿಸಿತ್ತು. ಆದರೆ ಗೋಲು ಗಳಿಸಲು ಎದುರಾಳಿ ತಂಡದ ಗೋಲ್‌ಕೀಪರ್ ಅನುವು ಮಾಡಿಕೊಡಲಿಲ್ಲ. ಒಂಬತ್ತನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೂ ಗೋಲು ಗಳಿಸಲು ಆಗಲಿಲ್ಲ.

ಮೊದಲ ಕ್ವಾರ್ಟರ್‌ನಲ್ಲಿ ನಿರಾಸೆ ಅನುಭವಿಸಿದ ಪ್ರವಾಸಿ ತಂಡದವರು ಎರಡನೇ ಕ್ವಾರ್ಟರ್‌ನಲ್ಲಿ ಇನ್ನಷ್ಟು ಆಕ್ರಮಣಕ್ಕೆ ಮುಂದಾದರು. 17ನೇ ನಿಮಿಷದಲ್ಲಿ ಗೋಲು ಬಂದ ನಂತರ ತಂಡದ ಭರವಸೆ ಹೆಚ್ಚಿತು. ಮೂರನೇ ಕ್ವಾರ್ಟರ್‌ನಲ್ಲಿ ಮಲೇಷ್ಯಾ ಮೂರು ಪೆನಾಲ್ಟಿ ಕಾರ್ನರ್‌ಗಳನ್ನು ಬಿಟ್ಟುಕೊಟ್ಟಿತು. ಆದರೆ ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗಲಿಲ್ಲ.

ಆದರೆ 38ನೇ ನಿಮಿಷದಲ್ಲಿ ತಂಡ ಸಂಭ್ರಮಪಟ್ಟಿತು. ಕೊನೆಯ ಕ್ವಾರ್ಟರ್‌ನಲ್ಲಿ ಮತ್ತೊಂದು ಗೋಲು ಗಳಿಸಿದಾಗ ತಂಡದ ಸಂತಸ ಇನ್ನಷ್ಟು ಹೆಚ್ಚಿತು. ಸರಣಿಯ ಎರಡನೇ ಪಂದ್ಯ ಭಾನುವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT