ಶನಿವಾರ, ಜೂನ್ 6, 2020
27 °C

ತಂತ್ರಜ್ಞಾನ ಬಳಕೆಯಲ್ಲಿ ಪರಿಣತಿ: ಭಾರತ ಹಾಕಿ ತಂಡಗಳಿಂದ ಲಾಕ್‌ಡೌನ್‌ ಅವಧಿಯ ಉಪಯೋಗ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಭಾರತ ಹಾಕಿ ತಂಡಗಳು ಒಳಾಂಗಣ ಅಭ್ಯಾಸ ನಡೆಸುತ್ತಿವೆ. ಈ ಹಂತದಲ್ಲಿ ಅಂತರ ಕಾಪಾಡಿಕೊಳ್ಳಬೇಕಿರುವುದರಿಂದ ಆಟಗಾರರು ತಂತ್ರಜ್ಞಾನದ ಬಳಕೆಯಲ್ಲಿ ಪರಿಣತಿ ಸಾಧಿಸುವಂತಾಗಿದೆ.

ಮಾರ್ಚ್ ತಿಂಗಳ‌ ಮೂರನೇ ವಾರದಲ್ಲಿ ರಾಷ್ಟ್ರದಾದ್ಯಂತ ಲಾಕ್‌ಡೌನ್‌ ಘೋಷಣೆಯಾಗಿತ್ತು. ಹಾಗಾಗಿ ಇಲ್ಲಿಯ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿದ್ದ ಅಭ್ಯಾಸ ನಡೆಸುತ್ತಿದ್ದ ಆಟಗಾರರು ತರಬೇತಿಯನ್ನು ನಿಲ್ಲಿಸಿದ್ದರು. ತಂಡದ ತರಬೇತಿ ಸಿಬ್ಬಂದಿಯೂ ಅಂತರ ಕಾಪಾಡಿಕೊಳ್ಳಬೇಕಿದ್ದರಿಂದ ತಂಡದ ಸದಸ್ಯರಿಗೆ ದೈನಂದಿನ ಅಭ್ಯಾಸದ ವೇಳಾಪಟ್ಟಿ ತಿಳಿಸುವಿಕೆ ಮತ್ತಿತರ ಕಾರ್ಯಗಳಿಗೆ ಆ್ಯಪ್‌ಗಳನ್ನು ಬಳಸುವದು ಅನಿವಾರ್ಯವಾಯಿತು. 

‘ಆರಂಭದಲ್ಲಿ ಕೋಚಿಂಗ್‌ ಸಿಬ್ಬಂದಿ ಈ ಆ್ಯಪ್‌ಗಳನ್ನು ಬಳಸಲಾರಂಭಿಸಿದರು. ಅಂತರದ ಮಾನದಂಡಗಳನ್ನು ಪಾಲಿಸಬೇಕಿರುವುದರಿಂದ ನಾವು ಕೂಡ ನಮ್ಮ ತರಬೇತಿ ಕಾರ್ಯಚಟುವಟಿಕೆಗಳ ಪ್ರಗತಿಯ ದತ್ತಾಂಶವನ್ನು ಸಲ್ಲಿಸಲು ಗೂಗಲ್‌ ಡಾಕ್ಸ್‌ ಹಾಗೂ ಗೂಗಲ್‌ ಫಾರ್ಮ್ಸ್‌ ಆ್ಯಪ್‌ಗಳನ್ನು ಉಪಯೋಗಿಸಲಾರಂಭಿಸಿದೆವು’ ಎಂದು ಮಹಿಳಾ ತಂಡದ ಉಪನಾಯಕಿ ಸವಿತಾ ಹೇಳಿದರು.

ಝೂಮ್‌ ಹಾಗೂ ಗೂಗಲ್‌ ಮೀಟ್‌ ಆ್ಯಪ್‌ಗಳ ಮೂಲಕ ಈಗ ತಂಡದ ಸಭೆಗಳನ್ನು ನಡೆಸಲಾಗುತ್ತಿದೆ.

‘ನಮ್ಮ ತಂಡದ ನೆರವು ಸಿಬ್ಬಂದಿ ಕೂಡ ಸಾಯ್‌ ಆವರಣದಲ್ಲೇ ಇದ್ದರೂ ವೈಯಕ್ತಿಕ ಸಭೆಗಳಿಗೆ ಝೂಮ್‌ ಕಾಲ್‌ ಬಳಸುತ್ತೇವೆ. ಪೌಷ್ಟಿಕಾಂಶ ಆಹಾರ ಸೇವನೆ ಕುರಿತು ಹಾಗೂ ಪಂದ್ಯಗಳ ವಿಶ್ಲೇಷಣೆ ಈ ಸಭೆಯ ಮೂಲಕ ನಡೆಯುತ್ತದೆ’ ಎಂದು ಪುರುಷರ ತಂಡದ ಉಪನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಹೇಳುತ್ತಾರೆ.

‘ಸಾಮಾಜಿಕ ಜಾಲತಾಣಗಳ ಬಳಕೆಯ ಮೂಲಕ ನಮ್ಮ ಸ್ನೇಹಿತರು, ಅಭಿಮಾನಿಗಳು ಹಾಗೂ ಕುಟುಂಬದೊಂದಿಗೆ ಸಂಪರ್ಕ ಸಾಧಿಸಿದ್ದೇವೆ’ ಎಂದು ಡ್ರ್ಯಾಗ್‌ಫ್ಲಿಕ್‌ ಪರಿಣತ ಹರ್ಮನ್‌ಪ್ರೀತ್‌ ನುಡಿದರು.

ಭಾರತ ತಂಡಗಳು 2017ರಿಂದ ತಂಡದ ಸಾಮರ್ಥ್ಯ ವಿಶ್ಲೇಷಣೆ (ಟಿಪಿಎ) ತಂತ್ರಾಂಶವನ್ನು ಉಪಯೋಗಿಸುತ್ತಿವೆ. ಆದರೆ ಲಾಕ್‌ಡೌನ್ ಅವಧಿಯಲ್ಲಿ ಇದರ ಬಳಕೆ ಹೆಚ್ಚಾಗಿದೆ.

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು