ಶುಕ್ರವಾರ, ಮೇ 27, 2022
23 °C

ಮಹಿಳಾ ಹಾಕಿ: ರಾಣಿ ರಾಂಪಾಲ್ ಗೋಲು, ಅರ್ಜೆಂಟೀನಾ ಎದುರು ಡ್ರಾ ಸಾಧಿಸಿದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯೂನಸ್‌ ಐರಿಸ್‌: ಅಮೋಘ ಆಟವಾಡಿದ ಭಾರತ ಮಹಿಳಾ ಹಾಕಿ ತಂಡವು ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಅರ್ಜೆಂಟೀನಾ ವಿರುದ್ಧ 1–1ರ ಡ್ರಾ ಸಾಧಿಸಿತು. ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಭಾರತದ ಪರ ನಾಯಕಿ ರಾಣಿ ರಾಂಪಾಲ್‌ 35ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. 55ನೇ ನಿಮಿಷದಲ್ಲಿ ಕೈಚಳಕ ತೋರಿದ ಆತಿಥೇಯ ತಂಡದ ಎಮಿಲಾ ಫೋರ್ಚೆರಿಯೊ ಸಮಬಲ ಸಾಧಿಸಿದರು.

ಅರ್ಜೆಂಟೀನಾ ಎದುರಿನ ಸರಣಿಯಲ್ಲಿ ಭಾರತಕ್ಕೆ ಇದು ನಾಲ್ಕನೇ ಹಾಗೂ ಅಂತಿಮ ಪಂದ್ಯವಾಗಿತ್ತು. ಶನಿವಾರ ನಡೆಯಬೇಕಿದ್ದ ಪಂದ್ಯವು ಮಳೆಯ ಕಾರಣ ರದ್ದಾಗಿತ್ತು. ಮೊದಲ ಎರಡು ಪಂದ್ಯಗಳಲ್ಲಿ ಭಾರತ ಕ್ರಮವಾಗಿ 2–3 ಹಾಗೂ 0–2ರಿಂದ ಆತಿಥೇಯ ತಂಡಕ್ಕೆ ಶರಣಾಗಿತ್ತು.

ಗೆಲುವಿನ ಮೂಲಕ ಸರಣಿಯನ್ನು ಕೊನೆಗೊಳಿಸಬೇಕೆಂಬ ಭಾರತದ ಪ್ರಯತ್ನ ಯಶಸ್ವಿಯಾಗಲಿಲ್ಲ. ಆದರೂ ಸಮಬಲ ಸಾಧಿಸುವ ಮೂಲಕ ತೃಪ್ತಿಪಟ್ಟಿತು.

ಮೊದಲ ಕ್ವಾರ್ಟರ್‌ನಲ್ಲಿ ಭಾರತದ ಮೇಲೆ ಒತ್ತಡ ಹೇರಿದ ಆತಿಥೇಯ ತಂಡದ ಆಟಗಾರ್ತಿಯರು ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದರು. ಆದರೆ ಪ್ರವಾಸಿ ತಂಡದ ಗೋಲ್‌ಕೀಪರ್ ಸವಿತಾ ಈ ಪ್ರಯತ್ನಗಳನ್ನು ತಡೆಯುವಲ್ಲಿ ಯಶಸ್ವಿಯಾದರು.

11ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿ ಭಾರತ ತಂಡಕ್ಕೂ ಯಶಸ್ಸು ಸಿಗಲಿಲ್ಲ. ಎರಡನೇ ಕ್ವಾರ್ಟರ್‌ನ ಮೂರನೇ ನಿಮಿಷದಲ್ಲಿ ಭಾರತಕ್ಕೆ ದೊರೆತ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶವನ್ನೂ ಗೋಲಾಗಿ ಪರಿವರ್ತಿಸಲು ಆತಿಥೇಯ ತಂಡದ ಆಟಗಾರ್ತಿಯರು ಬಿಡಲಿಲ್ಲ.

35ನೇ ನಿಮಿಷದಲ್ಲಿ ವಂದನಾ ಕಟಾರಿಯಾ ನೀಡಿದ ಪಾಸ್‌ನಿಂದ ಚೆಂಡನ್ನು ಸೊಗಸಾಗಿ ಗೋಲುಪೆಟ್ಟಿಗೆಗೆ ಸೇರಿಸಿದ ರಾಣಿ ತಂಡದ ಸಂಭ್ರಮಕ್ಕೆ ಕಾರಣರಾದರು. 39 ಹಾಗೂ 50ನೇ ನಿಮಿಷಗಳಲ್ಲಿ ಸಿಕ್ಕ ಉತ್ತಮ ಅವಕಾಶಗಳನ್ನು ಭಾರತ ಕೈಚೆಲ್ಲಿತು.

55ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಪಡೆದ ಆತಿಥೇಯ ತಂಡದ ಫೋರ್ಚೆರಿಯೊ ಸಮಬಲದ ಗೋಲು ಹೊಡೆದರು. ಒತ್ತಡದಲ್ಲಿದ್ದ ಭಾರತ ತಂಡ ಮತ್ತೆರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಅರ್ಜೆಂಟೀನಾ ತಂಡಕ್ಕೆ ನೀಡಿತ್ತು. ಆದರೆ ಅವೆರಡೂ ವಿಫಲವಾದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು