ಸೋಮವಾರ, ಡಿಸೆಂಬರ್ 6, 2021
23 °C
ಇಂಡೋನೆಷ್ಯಾ ಓಪನ್ ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಪ್ರಣೀತ್

ಸಿಂಧು, ಶ್ರೀಕಾಂತ್‌ಗೆ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿ (ಪಿಟಿಐ): ಒಲಿಂಪಿಯನ್ ಪಿ.ವಿ. ಸಿಂಧು, ಕೆ. ಶ್ರೀಕಾಂತ್ ಮತ್ತು ಬಿ. ಸಾಯಿಪ್ರಣೀತ್ ಇಂಡೋನೆಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌  ಎರಡನೇ ಸುತ್ತಿಗೆ ಪ್ರವೇಶಿಸಿದರು.

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಸಿಂಧು 17-21, 21-17, 21-17 ರಿಂದ ಜಪಾನಿನ ಯಾಯಾ ಒಹೊರಿ ವಿರುದ್ಧ ಗೆದ್ದರು. ಒಂದು ತಾಸು ಮತ್ತು ಹತ್ತು ನಿಮಿಷಗಳವರೆಗೆ ನಡೆದ ಪಂದ್ಯದ ಮೊದಲ ಗೇಮ್‌ನಲ್ಲಿ ಜಪಾನಿ ಆಟಗಾರ್ತಿ ಕಠಿಣ ಸವಾಲೊಡ್ಡಿ ಗೆದ್ದರು.

ಆದರೆ, ನಂತರದ ಎರಡೂ ಗೇಮ್‌ಗಳಲ್ಲಿ ಪಾರಮ್ಯ ಮೆರೆದರು. ಇದರೊಂದಿಗೆ ಜಪಾನಿ ಆಟಗಾರ್ತಿಯ ಎದುರು ಇದುವರೆಗೂ ಆಡಿದ 11 ಪಂದ್ಯಗಳಲ್ಲಿಯೂ ಜಯದ ದಾಖಲೆ ಬರೆದರು.

ಎರಡನೇ ಸುತ್ತಿನಲ್ಲಿ ಸಿಂಧು ಜರ್ಮನಿಯ ಯವೊನೆ ಲೀ ವಿರುದ್ಧ ಆಡಲಿದ್ದಾರೆ.  ಈಚೆಗೆ ಇಲ್ಲಿಯೇ ನಡೆದಿದ್ದ ಮಾಸ್ಟರ್ಸ್ ಸೂಪರ್ 750 ಟೂರ್ನಿಯ ಸೆಮಿಫೈನಲ್‌ನಲ್ಲಿ ಸಿಂಧು ಸೋತಿದ್ದರು. 

 ಪುಟುರಷ ಸಿಂಗಲ್ಸ್‌ನಲ್ಲಿ ಬಿ. ಸಾಯಿಪ್ರಣೀತ್ 21–19, 21–18ರಿಂದ ಫ್ರಾನ್ಸ್‌ನ ತೊಮಾ ಜೂನಿಯರ್ ಪೊಪೊವ್ ಗೆದ್ದರು. 

ಈ ವಿಭಾಗದ ಇನ್ನೊಂದು ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್ 21–15, 19–21, 21–12ರಿಂದ ಭಾರತದವರೇ ಆದ ಪ್ರಣಯ್ ವಿರುದ್ಧ ಜಯಿಸಿದರು. 56 ನಿಮಿಷಗಳ ಪಂದ್ಯವು ರೋಚಕವಾಗಿತ್ತು. 

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಎನ್. ಸಿಕ್ಕಿರೆಡ್ಡಿ ಮತ್ತು ಧ್ರುವ ಕಪಿಲ ಮೊದಲ ಸುತ್ತಿನಲ್ಲಿ 7–21, 12–21ರಿಂದ  ಜಪಾನ್‌ನ ಕಿಯೊಹಿ ಯಮಾಶಿತಾ ಮತ್ತು ನಾರು ಶಿನೊಯಾ ವಿರುದ್ಧ ಸೋತರು.

ಮಹಿಳೆಯರ ಡಬಲ್ಸ್‌ನಲ್ಲಿಯೂ  ಭಾರತಕ್ಕೆ ನಿರಾಶೆ ಕಾಡಿತು. ಸಿಕ್ಕಿ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿಯು 27–29, 18–21 ರಿಂದ ಐದನೇ ಶ್ರೇಯಾಂಕದ ಬಲ್ಗೇರಿಯಾದ ಜೋಡಿ ಗ್ಯಾಬ್ರಿಲಾ ಸ್ಟೊವಾ ಮತ್ತು ಸ್ಟಿಫಾನಿ ಸ್ಟೊವಾ ವಿರುದ್ಧ ವಿರೋಚಿತ ಸೋಲನುಭವಿಸಿದರು.

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು