ಭಾನುವಾರ, ಆಗಸ್ಟ್ 18, 2019
23 °C
ಫಿಟ್‌ನೆಸ್

ನವೀನ ತಂತ್ರ ಇನ್‌ವಿಕ್ಟಸ್ ಮಂತ್ರ

Published:
Updated:
Prajavani

ಫಿಟ್‌ನೆಸ್ ಕಾಪಾಡಿಕೊಳ್ಳಲು ಜಿಮ್ ಮೊರೆ ಹೋಗುವವರೇ ಹೆಚ್ಚು. ಕೆಲಸದ ಒತ್ತಡದ ನಡುವೆ ವ್ಯಾಯಾಮದ ಕಸರತ್ತನ್ನು ದಿನವೂ ನಡೆಸುವುದು ತುಸು ಕಷ್ಟವೇ ಆಗಿರುತ್ತದೆ. ವ್ಯಾಯಾಮ ಮತ್ತು ವೃತ್ತಿ ಎರಡನ್ನೂ ನಿಭಾಯಿಸಲಾಗದೇ ವ್ಯಾಯಾಮವನ್ನು ಬಿಟ್ಟವರು ಬಹಳ ಮಂದಿ ಇದ್ದಾರೆ. ಇಂತಹವರನ್ನು ಮತ್ತೆ ಫಿಟ್ ನೆಸ್ ಬದುಕಿಗೆ ಇನ್‌ವಿಕ್ಟಸ್‌ ಅಥ್ಲೆಟಿಕ್ಸ್ ಕ್ಲಬ್ ಹೊರಳಿಸಿದೆ. ತನ್ನದೇ ಆದ ವಿಶಿಷ್ಟ ತಂತ್ರಗಳಿಂದ ಫಿಟ್‌ನೆಸ್‌ ಪ್ರಿಯರ ಗಮನ ಸೆಳೆದಿದೆ.

***

ಬೆಂಗಳೂರು ಭಾರತದ ಫಿಟ್‌ನೆಸ್‌ ರಾಜಧಾನಿ. ಇಲ್ಲಿರುವಷ್ಟು ಫಿಟ್‌ನೆಸ್‌ ಪ್ರಜ್ಞೆ ದೇಶದ ಯಾವುದೇ ನಗರಗಳಲ್ಲೂ ನಾನು ಕಂಡಿದ್ದು ಕಡಿಮೆ ಎನ್ನುತ್ತಾರೆ ಸೋಹಂ ಜೈನ್. ಇವರು ಆರಂಭಿಸಿರುವ ಇನ್‌ವಿಕ್ಟಸ್ ಅಥ್ಲೆಟಿಕ್ಸ್ ಕ್ಲಬ್ ಇತರೆ ಜಿಮ್ ಕೇಂದ್ರಗಳಂತಲ್ಲ. ಹೊಸ ತಂತ್ರಗಳು, ತಂತ್ರಜ್ಞರು ಮತ್ತು ಪರಿಕರಗಳು ಅಡಕವಾಗಿವೆ. ಕಲಿಯುತ್ತ ಕಲಿಸುವುದು ಈ ಫಿಟ್ ನೆಸ್ ಕೇಂದ್ರದ ವೈಶಿಷ್ಟ್ಯ. 

ಸರ್ಜಾಪುರ ಮುಖ್ಯ ರಸ್ತೆಯಲ್ಲಿರುವ ಈ ಫಿಟ್‌ನೆಸ್‌ ಕೇಂದ್ರ ಆಧುನಿಕ ತಂತ್ರಗಳಿಂದ ಗಮನ ಸೆಳೆದಿದೆ. ಇಲ್ಲಿ ವಿದೇಶದಿಂದ ಬಂದ ಫಿಟ್‌ನೆಸ್‌ ತಂತ್ರಜ್ಞರೂ ಇದ್ದು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕ್ರೀಡಾ ತಾರೆಯರೂ ಇದ್ದಾರೆ. ಇನ್‌ವಿಕ್ಟಸ್‌ ಎಂಬುದು ಲ್ಯಾಟಿನ್ ಪದವಾಗಿದ್ದು, ಇದರ ಅರ್ಥ ‘ಸೋಲಿಸಲಾಗದ್ದು’ ಎಂದು. ಫಿಟ್‌ ಆಗಿರುವವರನ್ನು ಸೋಲಿಸಲು ಸಾಧ್ಯವೇ?

ದಿನ ಬಿಟ್ಟು ದಿನ ವ್ಯಾಯಾಮ: ಇಲ್ಲಿಗೆ ನಿತ್ಯ ಬರೆಬೇಕು. ಕಸರತ್ತು ನಡೆಸಬೇಕು ಎಂಬ ಒತ್ತಡವಿಲ್ಲ. ಆದರೆ, ದಿನ ಬಿಟ್ಟು ದಿನ ಬರಬೇಕು. ಒಂದು ದಿನ ವ್ಯಾಯಾಮ ಮಾಡಿದರೆ ಒಂದು ದಿನ ವಿಶ್ರಾಂತಿ ನೀಡಲಾಗುತ್ತದೆ. ಇದರಿಂದ ಗಾಯಗಳು ಆಗುವುದು, ಸ್ನಾಯುಗಳಿಗೆ ವಿಪರೀತ ಒತ್ತಡ ನೀಡುವುದು ತಪ್ಪುತ್ತದೆ. ಸರಾಗ ಕಲಿಕೆ ಇಲ್ಲಿ ಸಾಧ್ಯವಾಗಿದೆ. 

ಬದಲಾವಣೆಯೇ ವಿಶ್ರಾಂತಿ: ವ್ಯಾಯಾಮ ದಿನ ಬಿಟ್ಟು ದಿನ ಮಾಡುವಂತೆಯೇ ಕಲಿಕೆಯಲ್ಲೂ ಬದಲಾವಣೆ ಇರುತ್ತದೆ. ಹೀಗಾಗಿ ಮಾನಸಿಕವಾಗಿಯೂ ವಿಶ್ರಾಂತಿ ಸಿಗುತ್ತದೆ. ಹೊಸತನ್ನು ಕಲಿಯುವ ಉತ್ಸಾಹ ಮೂಡುತ್ತದೆ. ಒಂದು ದಿನ ಬಾಕ್ಸಿಂಗ್ ಇದ್ದರೆ, ಮತ್ತೊಂದು ದಿನ ಝುಂಬಾ ಇರುತ್ತದೆ. ಯೋಗ, ಪಿಲಾಟಿಸ್ ಸೇರಿದಂತೆ ಹಲವು ವ್ಯಾಯಾಮ ಮಾರ್ಗಗಳು ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕೆ ಇರುತ್ತದೆ. ಜಿಮ್ನಾಸಿಯಂ, ಸ್ಟುಡಿಯೋ, ಬಾರ್ಬೆಲ್‌ ಕ್ಲಬ್‌ ಎಂಬ ಮೂರು ವಿಭಾಗಗಳಿದ್ದು, ಇವುಗಳಿಂದ ಕಲಿಕಾ ಮಾದರಿಗಳು ಭಿನ್ನ ಎನಿಸಿಕೊಂಡಿವೆ. 

ಸಮಯ ಉಳಿತಾಯ: ಫಲಿತಾಂಶ ಕೇಂದ್ರಿತ ಕಲಿಕೆ ಇಲ್ಲಿದೆ. ಸಾಮರ್ಥ್ಯವನ್ನು ದ್ವಿಗುಣಗೊಳಿಸುತ್ತ, ನಿರ್ದಿಷ್ಟ ಗುರಿಯೆಡೆಗೆ ಸಾಗುವಂತೆ ಕಾಳಜಿ ವಹಿಸಲಾಗುತ್ತದೆ. ಇಲ್ಲಿನ ತಂತ್ರಜ್ಞರು ದಿನವೂ ‍ಪ್ರತಿಯೊಬ್ಬ ಅಭ್ಯಾಸಿಯ ಮೇಲೂ ನಿಗಾ ವಹಿಸಿರುತ್ತಾರೆ. ಎಷ್ಟು ಸಾಮರ್ಥ್ಯ ಪ್ರದರ್ಶಿಸಿದರು ಎಂಬ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತದೆ. ಇದರಿಂದ ಸಮಯ ಉಳಿತಾಯವಾಗುತ್ತದೆ. ಕಡಿಮೆ ಅವಧಿಯಲ್ಲಿ ದೇಹ ಸಾಮರ್ಥ್ಯದಲ್ಲಿ ಬದಲಾವಣೆ ಸಾಧ್ಯ. ವೈದ್ಯರಂತೆಯೇ ಇಲ್ಲಿನ ತಂತ್ರಜ್ಞರು ನಿತ್ಯ ಸಲಹೆ ನೀಡುತ್ತಾರೆ.

ಒಬ್ಬರಿಗೆ ಒಬ್ಬರೇ ತರಬೇತುದಾರರು: ನಿರ್ದಿಷ್ಟ ಸಮಯದಲ್ಲಿ ಒಬ್ಬ ತಂತ್ರಜ್ಞ ಪೂರ್ಣವಾಗಿ ಒಬ್ಬ ಅಭ್ಯಾಸಿಯ ಮೇಲೆಯೇ ನಿಗಾ ವಹಿಸಿರುತ್ತಾರೆ. ಉದ್ದೇಶಿತ ಗುರಿ ಸಾಧನೆಗೆ ಅಭ್ಯಾಸಿಗಳೊಂದಿಗೆ ತರಬೇತುದಾರರೂ ಶ್ರಮ ವಹಿಸುತ್ತಾರೆ. ಅವರಿಗೂ ವಿಶೇಷ ತರಗತಿಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಶಿಬಿರಗಳನ್ನು ಆಯೋಜಿಸಲಾಗುತ್ತದೆ. 

ಹೊಸ ತಂತ್ರಗಳು

ಆಧುನಿಕ ಫಿಟ್‌ನೆಸ್ ತಂತ್ರಗಳು ಇಲ್ಲಿನ ತರಬೇತುದಾರರಿಗೆ ಕರಗತ. ಲಂಡನ್‌ನ ಮಾರ್ಕ್ ಎಂಬುವ ಫಿಟ್‌ನೆಸ್‌ ತಂತ್ರಜ್ಞ ಹಲವು ವರ್ಷಗಳಿಂದ ಇನ್‌ವಿಕ್ಟಸ್‌ನಲ್ಲಿ ಇದ್ದಾರೆ. ಪಶ್ಚಿಮ ದೇಶಗಳಲ್ಲಿ ಇರುವ ಸುಧಾರಿತ ತಂತ್ರಗಳನ್ನು ಇಲ್ಲಿ ಅಳವಡಿಸಲಾಗಿದೆ. ಟ್ರಾವೆಲರ್ ಸ್ಲೆಡ್, ಸ್ಟೇರ್ ವಾಕ್ ಮುಂತಾದ ಆಧುನಿಕ ಸೌಲಭ್ಯಗಳು ಇಲ್ಲಿವೆ. ಇವು ಬೇರೆ ಕೇಂದ್ರಗಳಲ್ಲಿ ಸಿಗುವುದು ಅಪರೂಪ. ನಮ್ಮದೇ ಆದ ವಿನ್ಯಾಸದಲ್ಲಿ ಅಭ್ಯಾಸ ಮಾಡಿಸಲಾಗುತ್ತದೆ. ಗ್ರಂಥಾಲಯ, ದತ್ತಾಂಶ ಕೇಂದ್ರವಾಗಿ ಈ ಜಿಮ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಉತ್ತಮ ಫಲಿತಾಂಶ ನೀಡಲು ಸಹಾಯಕವಾಗಿದೆ ಎನ್ನುತ್ತಾರೆ ಸೋಹಂ.

ಕಲಿಕೆಯೊಂದಿಗೆ ಮಾರ್ಗದರ್ಶನ: ಒಬ್ಬರ ಅನುಭವವನ್ನು ಇನ್ನೊಬ್ಬರಿಗೆ ಹೇಳಿಕೊಡುತ್ತಲೇ ಕಲಿಯುವ ವಾತಾವರಣ ಇಲ್ಲಿ ಸೃಷ್ಟಿಸಲಾಗಿದೆ. ಫಿಟ್ ನೆಸ್ ಕಾಪಾಡಿಕೊಳ್ಳಲು ಬಂದವರು ಇನ್ನೊಬ್ಬರ ಫಿಟ್‌ನೆಸ್‌ಗೆ ನೆರವಾಗುತ್ತಾರೆ. ಹೀಗಾಗಿ ಕಲಿಕೆಯೊಂದಿಗೆ ಮಾರ್ಗದರ್ಶನ ನೀಡುವ ಅವಕಾಶವನ್ನು ಇಲ್ಲಿನ ಅಭ್ಯಾಸಿಗಳಿಗೆ ನೀಡಲಾಗುತ್ತದೆ. ಕಾಳಜಿ, ಗುರಿ, ಪುನರಭ್ಯಾಸ ಮತ್ತು ಸಲಹೆ ಇನ್ನಿತರ ಕೇಂದ್ರಗಳಿಗಿಂತ ಇನ್‌ವಿಕ್ಟಸ್‌ ಅನ್ನು ಭಿನ್ನವಾಗಿಸಿದೆ.

ಪಂಚಮಂತ್ರ: ಆರೋಗ್ಯ, ಸಾಮರ್ಥ್ಯ, ವಿಶ್ರಾಂತಿ, ಉತ್ಸಾಹ ಮತ್ತು ಸೌಂದರ್ಯ ಪ್ರಜ್ಞೆ  ಈ ಐದು ಮಂತ್ರಗಳಡಿ ‘ಇನ್‌ವಿಕ್ಟಸ್’ ಕಾರ್ಯಾಚರಿಸುತ್ತಿದೆ. ನಿರಂತರ ಅಭ್ಯಾಸದೊಂದಿಗೆ ವಿಶ್ರಾಂತಿ ನೀಡಿದರೆ ಸಾಮರ್ಥ್ಯ ಮತ್ತು ಸೌಂದರ್ಯ ಪ್ರಜ್ಞೆ ತಂತಾನೇ ಹೊರಹೊಮ್ಮುತ್ತದೆ. ಇದೂ ಫಿಟ್ ನೆಸ್ ಕಾಪಾಡಿಕೊಳ್ಳಲು ಸಹಕಾರಿ ಎನ್ನುತ್ತಾರೆ ಸಾಮರ್ಥ್ಯ ವ್ಯವಸ್ಥಾಪಕ ಪವನ್.


ಇನ್‌ವಿಕ್ಟಸ್‌ನ ಜಿಮ್‌ನೊಳಗಿನ ನೋಟ

ಸಂವಹನಕಾರರು: ಜಿಮ್ ತರಬೇತಿ ನೀಡಲು ದೇಹದಾರ್ಢ್ಯತೆ ಇದ್ದರೆ ಸಾಲದು. ಉತ್ತಮ ಬೋಧನಾ ತಂತ್ರ, ಸಂವಹನ ಕಲೆ ಇರಬೇಕು. ಹೀಗಾಗಿ ಇಲ್ಲಿ ತರಬೇತುದಾರರಿಗೂ ತರಬೇತಿ ನೀಡಲಾಗುತ್ತದೆ. ಜಸ್ ಜೀತ್ ಎಂಬುವರು ಸಂವಹನ ನಡೆಸುವ ವಿಧಾನಗಳನ್ನು ದಿನವೂ ಇಲ್ಲಿನ ತರಬೇತುದಾರರಿಗೆ ಕಲಿಸುತ್ತಾರೆ. ಹೀಗಾಗಿ ಈ ಫಿಟ್ ನೆಸ್ ಕೇಂದ್ರ ಯೋಜಿತ ರೀತಿಯಲ್ಲಿ ಸಾಗುತ್ತಿದೆ.

ಆಹಾರ ಕ್ರಮ: ಇಲ್ಲಿ ಬರುವವರ ಆಹಾರಾಭ್ಯಾಸ ಕ್ರಮಗಳನ್ನು ಅರಿಯಲಾಗುತ್ತದೆ. ಇವರಿಗೆ ಎಷ್ಟು ಪ್ರೋಟಿನ್ ಅಗತ್ಯ ಇದೆ ಎಂಬುದನ್ನು ಅವರ ದೇಹದ ತೂಕ ಮತ್ತು ಎತ್ತರಕ್ಕೆ ಅನುಗುಣವಾಗಿ ನಿರ್ಧರಿಸಿ ಸಲಹೆ ನೀಡಲಾಗುತ್ತದೆ. ಕೊಬ್ಬಿನ ಆಹಾರ ಪದಾರ್ಥಗಳನ್ನು ಮಿತವಾಗಿ ಸೇವಿಸಬೇಕು. ಒಂದೇ ಮಾದರಿಯ ಆಹಾರವನ್ನು ಹೆಚ್ಚು ಸೇವಿಸದೇ ನಮ್ಮ ಮುಷ್ಟಿಯ ಎರಡರಷ್ಟು ಪ್ರಮಾಣ ಸೇವಿಸಿ. ಅದನ್ನು ಜೀರ್ಣಿಸಿಕೊಳ್ಳಬೇಕು. 60-70 ಕೆ.ಜಿ ತೂಕ ಇರುವವರು ದಿನಕ್ಕೆ 90 ಗ್ರಾಂ ಪ್ರೊಟೀನ್‌ಯುಕ್ತ  ಆಹಾರ ತೆಗೆದುಕೊಳ್ಳಬೇಕು.. ಇವೇ ಮೊದಲಾದ ಆಹಾರ ವಿನ್ಯಾಸವನ್ನು ಇಲ್ಲಿ ಅಳವಡಿಸಲಾಗಿದೆ.

ಉಚಿತ ತರಬೇತಿ: ಕರ್ನಾಟಕ ಮತ್ತು ಭಾರತವನ್ನು ಪ್ರತಿನಿಧಿಸಿದ ಕ್ರೀಡಾ ತಾರೆಯರು ಇಲ್ಲಿ ಉಚಿತ ಸದಸ್ಯತ್ವ ಪಡೆಯಬಹುದು. ದೇಶದಲ್ಲಿ ಉತ್ತಮ ಕ್ರೀಡಾ ವಾತಾವರಣ ನಿರ್ಮಿಸಿದರೆ, ಉತ್ತಮ ಫಲಿತಾಂಶವನ್ನು ಪ್ರತಿಯೊಬ್ಬ ಕ್ರೀಡಾಪಟು ನೀಡಿಯೇ ನೀಡುತ್ತಾರೆ ಎಂಬುದು ಸೋಹಂ ಜೈನ್‌ ಅವರ ಅನಿಸಿಕೆ. ಹೀಗಾಗಿಯೇ ಇಲ್ಲಿ ಹಲವು ಕ್ರೀಡಾಪಟುಗಳು ಅಭ್ಯಾಸ ನಡೆಸಲು ಬರುತ್ತಾರೆ. ಟೆನಿಸ್ ನ ಅಶ್ವಿನ್ ಭಟ್, ಕನಿಷ್ಕಾ, ಜಿಮ್ನಾಸ್ಟಿಕ್ ಅನಘ ಜಯರಾಮನ್ ಮೊದಲಾದವರು ಕಾಯಂ ಆಗಿ ಆಗಮಿಸಿ ತರಬೇತಿ ಮತ್ತು ಸೌಲಭ್ಯ ಪಡೆಯುತ್ತಿದ್ದಾರೆ. 
ಫ್ರಾಂಚೈಸಿ ನೀಡಿ, ಇನ್ನೂ ಹಲವು ಶಾಖಾ ಕೇಂದ್ರಗಳನ್ನು ತೆರೆಯುವ ಆಲೋಚನೆ ಇಲ್ಲ ಎನ್ನುತ್ತಾರೆ ಸೋಹಂ. ಗುಣಮಟ್ಟದ ಒಂದು ಕೇಂದ್ರ ಇದ್ದರೆ ಸಾಕು. ಗ್ರಾಹಕರು ಹುಡುಕಿಕೊಂಡು ಬರುತ್ತಾರೆ ಎಂಬುದು ಅವರ ಅಭಿಪ್ರಾಯ.

ಫಿಟ್ ನೆಸ್ ದಕ್ಕುವುದು ಸಮಯ ಮತ್ತು ಸಾಮರ್ಥ್ಯವನ್ನು ಸಂದಾಯ ಮಾಡಿದಾಗ ಮಾತ್ರ. ವ್ಯಾಯಾಮ, ಒಳ್ಳೆಯ ಆಹಾರ ಸೇವನೆಯಿಂದ ಆರೋಗ್ಯಪೂರ್ಣ ಜೀವನ ನಮ್ಮದಾಗಿಸಿಕೊಳ್ಳಬಹುದು. ಇದು ನಮ್ಮನ್ನು ಮುಂಬರುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ, ಎದುರಿಸುವ ಶಕ್ತಿಯನ್ನು ವ್ಯಾಯಾಮ ನೀಡುತ್ತದೆ. ದಿನವೂ 45 ನಿಮಿಷದಿಂದ ಒಂದು ಗಂಟೆ ಸಮಯವನ್ನು ವ್ಯಾಯಾಮಕ್ಕೆ ಮೀಸಲಿಟ್ಟರೆ ಬದುಕಿನ ಕೊನೆವರೆಗೂ ಸುಸ್ಥಿರ ಆರೋಗ್ಯ ನಮ್ಮದಾಗಿಸಿಕೊಳ್ಳಬಹುದು ಎಂದು ಅವರು ಹೇಳುತ್ತಾರೆ.

ಒತ್ತಡಗಳ ಶಮನ: ಒತ್ತಡಗಳನ್ನು ನಾವು ಹಲವು ಮಾದರಿಯಲ್ಲಿ ಎದುರಿಸುತ್ತಿದ್ದೇವೆ. ಪರಿಸರ ಮಾಲಿನ್ಯ, ಸಂಚಾರ ದಟ್ಟಣೆ, ಕಳಪೆ ಗುಣಮಟ್ಟದ ಆಹಾರ, ಪೌಷ್ಟಿಕಾಂಶ ಕೊರತೆ, ವೃತ್ತಿಯ ಒತ್ತಡಗಳು ಎಲ್ಲರನ್ನು ಹಿಂಡಿಪ್ಪೆ ಮಾಡಿವೆ. ಇದಕ್ಕಾಗಿಯೇ ಎಲ್ಲರೂ ಫಿಟ್‌ನೆಸ್‌ ಕೇಂದ್ರಗಳಿಗೆ ಬರುತ್ತಾರೆ. ಇಲ್ಲಿಯೂ ಒತ್ತಡ ಹೇರಿದರೆ ಅವರು ಮತ್ತೆಲ್ಲಿಗೆ ಹೋಗಬೇಕು? ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಫಿಟ್‌ನೆಸ್‌ ಕಾಪಾಡಲು ನೂತನ ವಿಧಾನಗಳ ಮೂಲಕ ಸಹಕರಿಸುತ್ತಿದ್ದೇವೆ. ಅವರ ಒತ್ತಡಗಳನ್ನು ನಿವಾರಿಸುವ ಪ್ರಯತ್ನವನ್ನು ಇನ್‌ವಿಕ್ಟಸ್‌ ಮೂಲಕ ಮಾಡುತ್ತಿದ್ದೇವೆ ಎನ್ನುತ್ತಾರೆ ಬ್ರಿಟನ್ ನ ಫಿಟ್ ನೆಸ್ ಪರಿಣಿತ ಮಾರ್ಕ್.ಇಲ್ಲಿ ಬಂದವರು ಮತ್ತೆ ಹೋಗಿಲ್ಲ: ನಾವು ಅಳವಡಿಸಿಕೊಂಡಿರುವ ಫಿಟ್ ನೆಸ್ ತಂತ್ರಗಳು ಜನರಿಗೆ ಇಷ್ಟವಾಗಿದೆ. ಸದಸ್ಯತ್ವ ಪಡೆದ ಬಹುತೇಕರು ಈಗಲೂ ಬರುತ್ತಾರೆ. ವಾರಕ್ಕೆ ಒಬ್ಬರಿಗೆ ಮೂರು ಬಾರಿ ಮಾತ್ರ ತರಗತಿಗಳು ಇರುತ್ತವೆ. ಅಭ್ಯಾಸ ದಿನ ಬಿಟ್ಟು ದಿನ ಇರುವುದರಿಂದ ವಿಶ್ರಾಂತಿ ಸಿಗುತ್ತದೆ. ಒತ್ತಡವೂ ಇರುವುದಿಲ್ಲ. ಎಲ್ಲರೂ ಕಲಿಯುತ್ತಲೇ ಕಲಿಸುವ ವಾತಾವರಣವನ್ನು ಇಲ್ಲಿ ಸೃಷ್ಟಿಸಲಾಗಿದೆ. ಇನ್‌ವಿಕ್ಟಸ್‌ ಜಾಲತಾಣ ಮತ್ತು ಆ್ಯಪ್‌ ಸೌಲಭ್ಯವೂ ಇದೆ. ಇದು ನಿರಂತರ ಸಂಪರ್ಕದಲ್ಲಿರುವಂತೆ ಮಾಡಿದೆ.

Post Comments (+)