ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಶಾ ಶರ್ಮಾ...ಚದುರಂಗದ ಚತುರೆ

Last Updated 22 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಕರ್ನಾಟಕದ ಯುವ ಆಟಗಾರ್ತಿಯರು ಹೆಜ್ಜೆ ಗುರುತು ಮೂಡಿಸಲು ವಿಫಲರಾಗುತ್ತಿರುವ ಸಮಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಇಶಾ ಶರ್ಮಾ ಭರವಸೆಯ ಬೆಳಕಾಗಿ ಗೋಚರಿಸಿದ್ದಾರೆ. ಅವರು ಈಗ ರಾಜ್ಯದ ಮೊದಲ ಮಹಿಳಾ ಇಂಟರ್‌ನ್ಯಾಷನಲ್‌ ಮಾಸ್ಟರ್‌ (ಡಬ್ಲ್ಯುಐಎಂ) ಗೌರವಕ್ಕೆ ಪಾತ್ರರಾಗಿದ್ದಾರೆ.

ಒಂದೆರಡು ವರ್ಷಗಳ ಹಿಂದೆ ಅನನ್ಯಾ ಎಸ್‌., ಸೃಷ್ಟಿ ಶೆಟ್ಟಿ, ಕೆ.ಶ್ರುತಿ ಮೊದಲಾದ ಆಟಗಾರ್ತಿಯರು ಉತ್ತಮ ಸಾಧನೆಯಿಂದ ಗಮನ ಸೆಳೆದಿದ್ದರು. ಆದರೆ ಅವರು ದೊಡ್ಡ ಮಟ್ಟದ ಟೂರ್ನಿಗಳಲ್ಲಿ ಅಂಥ ಛಾಪು ಮೂಡಿಸಲಿಲ್ಲ. ಈಗ ಆ ಕೊರತೆಯನ್ನು ನೀಗಿಸುವ ಹಾದಿಯಲ್ಲಿ 19 ವರ್ಷ ವಯಸ್ಸಿನ ಇಶಾ ಸಾಗಿದ್ದಾರೆ. ಹಂಗರಿಯಲ್ಲಿ ಸೆಪ್ಟೆಂಬರ್‌ ಮೊದಲ ವಾರ ನಡೆದ ‘ಸಮ್ಮರ್ಸ್‌ ಎಂಡ್‌ ಬ್ಯಾಲಟನ್‌ ಐಎಂ ಟೂರ್ನಿ’ಯಲ್ಲಿ ಮೂರನೇ ಡಬ್ಲ್ಯುಐಎಂ ನಾರ್ಮ್‌ ಪಡೆಯುವ ಮೂಲಕ ಅಗತ್ಯವಿದ್ದ ಔಪಚಾರಿಕತೆಯನ್ನು ಅವರು ಪೂರ್ಣಗೊಳಿಸಿದ್ದಾರೆ.

ಶಾರ್ಜಾ ಮಾಸ್ಟರ್ಸ್‌ ಟೂರ್ನಿಯಲ್ಲಿ (2017ರಲ್ಲಿ) ಇಶಾ ಮೊದಲ ನಾರ್ಮ್ ಪಡೆದಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ನಾರ್ಮ್‌ ಗಳಿಸಿದ್ದರು.

ಹಂಗರಿಯ ಟೂರ್ನಿಯಲ್ಲಿ ಇಶಾ ಸಾಧನೆ ಕಡಿಮೆಯೇನಿರಲಿಲ್ಲ. ಸ್ಲೊವೇಕಿಯಾದ ಡೇವಿಡ್‌ ಮರ್ಕೊ (ರೇಟಿಂಗ್‌ 2,186), ಬೆಲ್ಜಿಯಂನ ಫಿಡೆ ಮಾಸ್ಟರ್‌ ಲೆನೆರ್ಟ್ಸ್‌ ಲೆನರ್ಟ್‌ (2,341), ಇಂಗ್ಲೆಂಡ್‌ನ ಲೈಲ್‌ ಮಾರ್ಕ್‌ (2,185) ವಿರುದ್ಧ ಜಯಗಳಿಸಿದ್ದರು. ಹಂಗರಿಯ ನಾಟ್‌ ಮಿನ್‌ (2,388), ಸ್ಲೊವೇಕಿಯಾದ ಸುಟಾ ಆಂಡ್ರೇಜ್‌ (2,268), ಹಂಗರಿಯ ಸಾಟಿ ಒಲಿವರ್‌ (2,223) ಜೊತೆ ‘ಡ್ರಾ’ ಮಾಡಿಕೊಂಡಿದ್ದರು. ಇಶಾ ಅವರ ಸದ್ಯದ ರೇಟಿಂಗ್‌ 2,181.

ಬೆಳ್ತಂಗಡಿಯಲ್ಲಿ ಜನಿಸಿದ (29–10–2000) ಇಶಾ, ಮೊದಲ ಟೂರ್ನಿ ಆಡಿದ್ದು 11ನೇ ವಯಸ್ಸಿನಲ್ಲಿ. ತಂದೆ ಶ್ರೀಹರಿ, ತಾಯಿ ವಿದ್ಯಾ ಅವರು ವೈದ್ಯರು. ತಾಯಿಗೆ ಕೆಲಕಾಲ ಚೆಸ್‌ ಆಡಿದ ಅನುಭವ ಇತ್ತು. ಮಂಗಳೂರಿನಲ್ಲಿ ಆರಂಭವಾಗಿದ್ದ ಚೆಸ್‌ ಅಕಾಡೆಮಿಯಲ್ಲಿ ರಾಜ್ಯದ ಹಿರಿಯ ಆಟಗಾರರಾದ ಅರವಿಂದ ಶಾಸ್ತ್ರಿ, ಶಿವಾನಂದ ಮತ್ತು ರಾಘವೇಂದ್ರ ಅವರಿಂದ ತರಬೇತಿ ದೊರೆಯಿತು. ನಂತರ ಎರಡು ವರ್ಷ (2014–15) ಅರವಿಂದ ಶಾಸ್ತ್ರಿ ಅವರು ಬೆಳ್ತಂಗಡಿಗೆ ಹೋಗಿ ಹೆಚ್ಚಿನ ತರಬೇತಿ ನೀಡಿದ್ದರು.

‘ಕಲಿಯುವಿಕೆಯಲ್ಲಿ ಆಕೆಯ ಶ್ರದ್ಧೆ ಗಮನ ಸೆಳೆಯಿತು. ನಿರಂತರ 6–7 ಗಂಟೆ ಕುಳಿತುಕೊಂಡು ಆಡುತ್ತಿರುವಾಗಲೇ ಚೆಸ್‌ ಬಗ್ಗೆ ಆಕೆಗಿದ್ದ ಒಲವು ಗಮನಿಸಿದ್ದೆ’ ಎಂದು ಹೇಳುತ್ತಾರೆ ಅರವಿಂದ ಶಾಸ್ತ್ರಿ.

‘ಮಂಗಳೂರಿನಲ್ಲಿ ಆಡಿದ ಮೊದಲ ಟೂರ್ನಿಯಲ್ಲೇ (2011) ಮಗಳು ರೇಟಿಂಗ್ ಪಡೆದಿದ್ದು ನೋಡಿ ಖುಷಿಯಾಯಿತು. ಅವಳಿಗೆ ಉತ್ತಮ ಭವಿಷ್ಯವಿದೆ ಎಂದು ಹಿರಿಯ ಆಟಗಾರರು ಹೇಳಿದರು. 2014ರಲ್ಲಿ ರಾಷ್ಟ್ರೀಯ ಶಾಲಾ ಕ್ರೀಡೆಗಳ ಚೆಸ್‌ನಲ್ಲಿ ಇಶಾ ಚಿನ್ನದ ಪದಕ ಗೆದ್ದಿದ್ದಳು. ಅದು ಅವಳು ಗೆದ್ದ ಮೊದಲ ಪ್ರಮುಖ ಪ್ರಶಸ್ತಿ’ ಎಂದು ತಾಯಿ ವಿದ್ಯಾ ಸ್ಮರಿಸುತ್ತಾರೆ.

ಮಗಳು ಈ ಮಟ್ಟಕ್ಕೇರಲು ಕಲಿತ ಎಸ್‌ಡಿಎಂ ಶಾಲೆ, ಶಿಕ್ಷಣ ಸಂಸ್ಥೆಯ ಸಹ ಕಾರ ಬಹಳ ಮಟ್ಟಿಗೆ ಕಾರಣ ಎನ್ನುತ್ತಾರೆ. ಮಗಳಿಗಾಗಿ ಅವರು ಎರಡು ವರ್ಷಗಳಿಂದ ವೈದ್ಯ ವೃತ್ತಿಯಿಂದ ವಿಮುಖರಾಗಿದ್ದಾರೆ.

ಯಶಸ್ಸಿನ ಹೆಜ್ಜೆ

2017ರಲ್ಲಿ ರಾಜ್ಯ ಮಹಿಳಾ ಚಾಂಪಿಯನ್‌ ಆದ ಇಶಾ, ಆ ವರ್ಷದಸೆಪ್ಟೆಂಬರ್‌ನಲ್ಲಿ ನಡೆದ ರಾಷ್ಟ್ರೀಯ ಜೂನಿಯರ್‌ ಚಾಂಪಿ ಯನ್‌ಷಿಪ್‌ನಲ್ಲಿ ಮೂರನೇ ಸ್ಥಾನ ಗಳಿಸಿ ಗಮನ ಸೆಳೆದಿದ್ದರು. ಇರಾನ್‌ನ ಶಿರಾಜ್‌ನಲ್ಲಿ ಅದೇ ವರ್ಷದ ಮೇ ತಿಂಗಳಲ್ಲಿ ನಡೆದಿದ್ದ ಏಷ್ಯನ್‌ ಜೂನಿ ಯರ್ ಚಾಂಪಿಯನ್‌ಷಿಪ್‌ನ ರ್‍ಯಾಪಿಡ್‌ ವಿಭಾಗದಲ್ಲಿ ಗಳಿಸಿದ ಚಿನ್ನದ ಪದಕ, ಇಶಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಡೆದ ಮೊದಲ ಮಹತ್ವದ ಯಶಸ್ಸು ಎನಿಸಿತು.

ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದ ಡಬ್ಲ್ಯುಐಎಂ ಮಹಾಲಕ್ಷ್ಮಿ (ತಮಿಳುನಾಡು) ವಿರುದ್ಧ ಜಯಗಳಿಸಿದ್ದ ಇಶಾ ಅಂತಿಮ ಸುತ್ತಿನಲ್ಲೂ ಜಯಗಳಿಸಿದ್ದರೆ ಚಾಂಪಿಯನ್‌ ಆಗುತ್ತಿದ್ದರು. ಆದರೆ ತಮಿಳು ನಾಡಿನ ಸಿ.ಎಂ.ಎನ್‌.ಸನ್ಯುಕ್ತಾ ವಿರುದ್ಧ ಡ್ರಾ ಮಾಡಿಕೊಂಡಿದ್ದರಿಂದ ಮೂರನೇ ಸ್ಥಾನಕ್ಕೆ ಇಳಿಯಬೇಕಾಯಿತು. ಮಹಾಲಕ್ಷ್ಮಿ (9 ಅಂಕ) ಅಂತಿಮವಾಗಿ ಚಾಂಪಿಯನ್‌ ಆಗಿದ್ದರು. ಎರಡನೇ ಸ್ಥಾನ ಪಡೆದ ಸಾಕ್ಷಿ, ಮೂರನೇ ಸ್ಥಾನ ಪಡೆದ ಇಶಾ ತಲಾ 8.5 ಅಂಕ ಗಳಿಸಿದ್ದರು. ಈ ಸಾಧನೆಯಿಂದ ಅವರು ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆ ಪಡೆದುಕೊಂಡಿದ್ದರು.

ಟರ್ಕಿಯಲ್ಲಿ ನಡೆದಿದ್ದ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲೇ ಈಕೆ ಅಜರ್‌ಬೈಜಾನ್‌ನ ಡಬ್ಲ್ಯುಜಿಎಂ ಹೊಜ್ಜಾಟೊರಾ (2365 ರೇಟಿಂಗ್) ಅವರನ್ನು ಸೋಲಿಸಿದ್ದು ಸುದ್ದಿಯಾಗಿತ್ತು. ಆ ಪಂದ್ಯದ ಬಹುಭಾಗ ಆರನೇ ಶ್ರೇಯಾಂಕದ ಹೊಜ್ಜಾಟೊರಾ ಉತ್ತಮ ಸ್ಥಿತಿಯಲ್ಲಿದ್ದರು. ಆದರೆ ಬಿಟ್ಟುಕೊಡುವ ಮನೋಭಾವವನ್ನು ಕರ್ನಾಟಕದ ಆಟಗಾರ್ತಿ ತೋರಲಿಲ್ಲ.

‘ಏಷ್ಯನ್‌ ಜೂನಿಯರ್‌ ರ್‍ಯಾಪಿಡ್‌ ಟೂರ್ನಿಯಲ್ಲಿ ಗೆದ್ದ ಚಿನ್ನಕ್ಕಿಂತ ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ತೋರಿದ ಪ್ರದರ್ಶನ ನೆನಪಿನಲ್ಲಿ ಉಳಿಯುವಂಥದ್ದು’ ಎಂದು ಇಶಾ ಹೇಳುತ್ತಾರೆ.

ಸದ್ಯ ಅವರು ಚೆನ್ನೈನ ಹಿರಿಯ ಕೋಚ್‌ ವಿಶ್ವೇಶ್ವರನ್‌ ಮತ್ತು ಜಿಎಂ ಮೈಕೆಲ್‌ ಒರಟೊವ್‌ಸ್ಕಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

‘ಇಶಾಳ ಸಾಧನೆಯಲ್ಲಿ ಪೋಷಕರ ತ್ಯಾಗ ಮಹತ್ವದ್ದು. ಆಕೆಗೆ ಹೆಚ್ಚು ಪಂದ್ಯಗಳ ಅನುಭವವಾಗಲು ನಿಯಮಿತವಾಗಿ ಹೊರದೇಶಗಳ ಟೂರ್ನಿಗಳಲ್ಲಿ ಆಡಿಸಿದರು. ಮುಂದೆ ಆಕೆ ಮಹಿಳಾ ಗ್ರ್ಯಾಂಡ್‌ಮಾಸ್ಟರ್‌ ಆಗುವುದರಲ್ಲಿ ಅನುಮಾನವಿಲ್ಲ’ ಎಂದು ಹೇಳುತ್ತಾರೆ ಶಾಸ್ತ್ರಿ. ಇಶಾ ಸಾಧನೆ ರಾಜ್ಯದ ಉದಯೋನ್ಮುಖ ಆಟಗಾರ್ತಿಯರಿಗೆ ಪ್ರೇರಣೆಯಾದರೆ ಅದರಿಂದ ಕರ್ನಾಟಕದ ಚೆಸ್‌ ಬೆಳವಣಿಗೆಗೆ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT