ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: ಜಾವೆಲಿನ್‌ ಫೈನಲ್‌ಗೆ ಅನುರಾಣಿ

5,000 ಮೀಟರ್‌ ವಿಭಾಗದಲ್ಲಿ ಪಾರುಲ್‌ಗೆ ನಿರಾಸೆ
Last Updated 21 ಜುಲೈ 2022, 13:57 IST
ಅಕ್ಷರ ಗಾತ್ರ

ಯೂಜೀನ್‌, ಅಮೆರಿಕ: ಭಾರತದ ಅನುರಾಣಿ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮಹಿಳಾ ಜಾವೆಲಿನ್‌ ಥ್ರೊ ಸ್ಪರ್ಧೆಯ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನಲ್ಲಿ ಗುರುವಾರ 59.60 ಮೀಟರ್ಸ್ ಸಾಧನೆ ಮಾಡಿದ ಅವರು, ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಎರಡನೇ ಬಾರಿ ಫೈನಲ್‌ ತಲುಪಿದ ಶ್ರೇಯ ಗಳಿಸಿದರು.

ಅರ್ಹತಾ ಸುತ್ತಿನ ಮೊದಲ ಎಸೆತವನ್ನು ಫೌಲ್‌ ಮಾಡಿದ ಅವರು ಸ್ಪರ್ಧೆಯಿಂದ ಹೊರಬೀಳುವ ಆತಂಕ ಎದುರಿಸಿದರು. ಎರಡನೇ ಯತ್ನದಲ್ಲಿ 55.35 ಮೀಟರ್ಸ್ ದಾಖಲಿಸಿದರು. ಆದರೆ ಮೂರನೇ ಪ್ರಯತ್ನದಲ್ಲಿ 59.60 ಮೀ. ದೂರ ಜಾವೆಲಿನ್ ಎಸೆದು ಫೈನಲ್ ಅರ್ಹತೆ ಗಳಿಸುವಲ್ಲಿ ಯಶಸ್ವಿಯಾದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಗಿಂತ ಕಡಿಮೆ ದೂರವಾಗಿತ್ತು.

ಬಿ ಗುಂಪಿನ ಅರ್ಹತಾ ಸುತ್ತಿನಲ್ಲಿ ಐದನೇಯವರಾದ ಅವರು, ಒಟ್ಟಾರೆ ಎಂಟನೇ ಸ್ಥಾನ ಗಳಿಸಿದರು. 63.82 ಮೀಟರ್ಸ್ ಅನುರಾಣಿ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದ್ದು, ರಾಷ್ಟ್ರೀಯ ದಾಖಲೆಯೂ ಅವರ ಹೆಸರಿನಲ್ಲಿದೆ. ಈ ವರ್ಷದ ಮೇನಲ್ಲಿ ಜಮ್ಶೆಡ್‌ಪುರದಲ್ಲಿ ನಡೆದ ಇಂಡಿಯನ್‌ ಓಪನ್‌ನಲ್ಲಿ ಅವರು 63.82 ಮೀಟರ್‌ ದೂರದೊಂದಿಗೆ ರಾಷ್ಟ್ರೀಯ ದಾಖಲೆ ಉತ್ತಮಪಡಿಸಿಕೊಂಡಿದ್ದರು.

29 ವರ್ಷದ ಅಥ್ಲೀಟ್‌ ಅರ್ಹತಾ ಸುತ್ತಿನಲ್ಲಿ 60 ಮೀ. ಸಾಧನೆ ಮೀರದಿದ್ದರೂ ಫೈನಲ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ಅವಕಾಶವಿದೆ. ಶನಿವಾರ ಬೆಳಿಗ್ಗೆ 6.30ರಿಂದ (ಭಾರತೀಯ ಕಾಲಮಾನ) ಫೈನಲ್ ನಡೆಯಲಿದೆ.

ಕಳೆದ ಬಾರಿಯ ವಿಶ್ವಚಾಂಪಿಯನ್‌ಷಿಪ್‌ನಲ್ಲಿ (2019) ಅನುರಾಣಿ 61.12 ಮೀ. ಸಾಧನೆಯೊಂದಿಗೆ ಎಂಟನೇ ಸ್ಥಾನ ಗಳಿಸಿದ್ದರು. ಒಟ್ಟಾರೆ ಮೂರನೇ ಬಾರಿ ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ್ದಾರೆ.

ಅನುಭವಿ ಅಥ್ಲೀಟ್‌ ಅಮೆರಿಕದ ಮ್ಯಾಗಿ ಮ್ಯಾಲೋನ್‌ (54.19 ಮೀ.) ಅವರಿಗೆ ಈ ವಿಭಾಗದಲ್ಲಿ ಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಹಾಲಿ ಚಾಂಪಿಯನ್, ಆಸ್ಟ್ರೇಲಿಯಾದ ಕೆಲ್ಸಿ ಲೀ ಬಾರ್ಬರ್‌ (61.27 ಮೀ.) ಒಟ್ಟಾರೆ ಐದನೇ ಸ್ಥಾನದೊಂದಿಗೆ ಫೈನಲ್‌ ಪ್ರವೇಶಿಸಿದರು.

ಸೆಮಿಫೈನಲ್ ತಲುಪಲು ಪಾರುಲ್ ವಿಫಲ: ಮಹಿಳೆಯರ 5,000 ಮೀ. ವಿಭಾಗದ ಸೆಮಿಫೈನಲ್‌ತಲುಪಲು ಭಾರತ ಪಾರುಲ್ ಚೌಧರಿ ಅವರಿಗೆ ಸಾಧ್ಯವಾಗಲಿಲ್ಲ. ಎರಡನೇ ಹೀಟ್‌ನಲ್ಲಿ 15 ನಿಮಿಷ 54.03 ಸೆಕೆಂಡು ತೆಗೆದುಕೊಂಡು 17ನೇ ಸ್ಥಾನ ಗಳಿಸಿದ ಅವರು ಒಟ್ಟಾರೆ 31ನೇ ಸ್ಥಾನಕ್ಕೆ ಸಮಾಧಾನಪಡಬೇಕಾಯಿತು.

ಸ್ಪೀಪಲ್‌ಚೇಸ್‌ನಲ್ಲಿಜೆರುಟೊ ಕೂಟ ದಾಖಲೆ: ಕಜಕಸ್ತಾನದ ನೊರಾಹ್‌ ಜೆರುಟೊ ಮಹಿಳೆಯರ 3,000 ಮೀಟರ್ಸ್‌ ಸ್ಟೀಪಲ್‌ಚೇಸ್‌ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದರು. ಅವರು 8 ನಿಮಿಷ 53.02 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಈ ಹಿಂದಿನ ದಾಖಲೆಯನ್ನು ಕೆನ್ಯಾದ ಬೀಟ್‌ರೈಸ್‌ ಚೆಪ್ಕೊಚ್‌ (2019ರಲ್ಲಿ ದೋಹಾದಲ್ಲಿ; 8 ನಿ. 53.59) ಅವರ ಹೆಸರಿನಲ್ಲಿತ್ತು.

ಇಥಿಯೋಪಿಯಾದ ವೆರ್ಕುಹಾ ಗೆಟಾಚೆವ್‌ ಬೆಳ್ಳಿ ಮತ್ತು ಮೆಕೆಡಿಸ್‌ ಅಡೆಬೆ ಕಂಚು ಜಯಿಸಿದರು. ಮಹಿಳೆಯರ ಡಿಸ್ಕಸ್‌ ಥ್ರೊ ಚಿನ್ನವು ಚೀನಾದ ಫೆಂಗ್ ಬಿನ್ (69.12 ಮೀ.) ಅವರ ಪಾಲಾಯಿತು. ಕ್ರೊವೇಷ್ಯಾದ ಸ್ಯಾಂಡ್ರಾ ಪೆರ್ಕೊವಿಚ್‌ ಮತ್ತು ಅಮೆರಿಕದ ಅಲಮನ್‌ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು.

ಶುಕ್ರವಾರಬೆಳಿಗ್ಗೆಕಣಕ್ಕೆ ನೀರಜ್‌
ಟೋಕಿಯೊ ಒಲಿಂಪಿಕ್ ಚಾಂಪಿಯನ್‌, ಭಾರತದಜಾವೆಲಿನ್‌ ಸ್ಪರ್ಧಿ ನೀರಜ್‌ ಚೋಪ್ರಾ ಶುಕ್ರವಾರ ಕಣಕ್ಕಿಳಿಯಲಿದ್ದಾರೆ. ಅರ್ಹತಾ ಸುತ್ತಿನ ಎ ಗುಂಪಿನಲ್ಲಿ ಅವರಿದ್ದಾರೆ. ಒಲಿಂಪಿಕ್‌ ಬೆಳ್ಳಿ ಪದಕ ವಿಜೇತ, ಜೆಕ್‌ ಗಣರಾಜ್ಯದ ಜಾಕುಬ್‌ ಜಾಕುಬ್ ವಡ್ಲೆಚ್‌ ಮತ್ತು 2012ರ ಲಂಡನ್‌ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ, ಟ್ರಿನಿಡಾಡ್‌ ಆ್ಯಂಡ್‌ ಟೊಬ್ಯಾಗೊದ ಕೆಶೋರ್ನ್‌ ವಾಲ್ಕಾಟ್‌ ಕೂಡ ಇದೇ ಗುಂಪಿನಲ್ಲಿದ್ದು ನೀರಜ್‌ಗೆ ತೀವ್ರ ಪೈಪೋಟಿಯೊಡ್ಡುವ ಸಾಧ್ಯತೆಯಿದೆ.

ಪುರುಷರ ಜಾವೆಲಿನ್‌ ಥ್ರೊ ಫೈನಲ್ಸ್ ಭಾನುವಾರ ನಡೆಯಲಿವೆ.

ನೀರಜ್‌ ಅರ್ಹತಾ ಸುತ್ತಿನ ಸ್ಪರ್ಧೆ ಆರಂಭ: ಬೆಳಿಗ್ಗೆ 5.30 (ಭಾರತೀಯ ಕಾಲಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT