ಶುಕ್ರವಾರ, ನವೆಂಬರ್ 22, 2019
27 °C
ಸುಲ್ತಾನ್‌ ಜೋಹರ್‌ ಕಪ್‌ ಹಾಕಿ: ಬ್ರಿಟನ್‌ ಎದುರಿನ ಪಂದ್ಯ ಡ್ರಾ

ಜಯದ ಅವಕಾಶ ಕೈಚೆಲ್ಲಿದ ಭಾರತ

Published:
Updated:
Prajavani

ಜೋಹರ್‌ ಬಹ್ರು, ಮಲೇಷ್ಯಾ: ಪಂದ್ಯ ಮುಗಿಯಲು ಒಂದು ನಿಮಿಷ ಇದ್ದಾಗ ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟ ಭಾರತ ಜೂನಿಯರ್‌ ಪುರುಷರ ತಂಡದವರು ಸುಲ್ತಾನ್‌ ಜೋಹರ್‌ ಕಪ್‌ ಹಾಕಿ ಟೂರ್ನಿಯ ಬ್ರಿಟನ್‌ ಎದುರಿನ ಪಂದ್ಯದಲ್ಲಿ ಗೆಲುವಿನ ಅವಕಾಶ ಕೈಚೆಲ್ಲಿದರು.

ಶುಕ್ರವಾರ ನಡೆದ ಉಭಯ ತಂಡಗಳ ನಡುವಣ ಅಂತಿಮ ರೌಂಡ್‌ ರಾಬಿನ್‌ ಲೀಗ್‌ ಹಣಾಹಣಿಯು 3–3 ಗೋಲುಗಳಿಂದ ಸಮಬಲವಾಯಿತು. ಶನಿವಾರ ನಡೆಯುವ ಫೈನಲ್‌ನಲ್ಲಿ ಎರಡೂ ತಂಡಗಳು ಎದುರಾಗಲಿವೆ.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಮನದೀಪ್‌ ಮೋರ್‌ ಸಾರಥ್ಯದ ಭಾರತಕ್ಕೆ 11ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಲಭಿಸಿತ್ತು. ದೀನಚಂದ್ರ ಸಿಂಗ್‌ ಅವರ ಗೋಲು ಗಳಿಕೆಯ ಪ್ರಯತ್ನಕ್ಕೆ ಬ್ರಿಟನ್‌ ತಂಡದ ಗೋಲ್‌ಕೀಪರ್‌ ಒಲಿವರ್‌ ಪೇಯ್ನ್‌ ಅಡ್ಡಿಯಾದರು.

ಎರಡನೇ ಕ್ವಾರ್ಟರ್‌ನಲ್ಲಿ ಎರಡು ತಂಡಗಳು ಗುಣಮಟ್ಟದ ಆಟಕ್ಕೆ ಒತ್ತು ನೀಡಿದವು. 27ನೇ ನಿಮಿಷದಲ್ಲಿ ಬ್ರಿಟನ್‌ ಖಾತೆ ತೆರೆಯಿತು. ಲೋನ್‌ ವಾಲ್‌ ಅವರು ಡ್ರ್ಯಾಗ್‌ಫ್ಲಿಕ್‌ ಮೂಲಕ ಚೆಂಡನ್ನು ಗುರಿ ಮುಟ್ಟಿಸಿದರು. ಇದರ ಬೆನ್ನಲ್ಲೇ ಶಿಲಾನಂದ ಲಾಕ್ರಾ ಅವರ ಪ್ರಯತ್ನವನ್ನು ವಿಫಲಗೊಳಿಸಿದ ಬ್ರಿಟನ್‌ ತಂಡ 1–0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ದ್ವಿತೀಯಾರ್ಧದ ಆರಂಭದಲ್ಲೇ ಬ್ರಿಟನ್‌ಗೆ ಮತ್ತೊಂದು ಯಶಸ್ಸು ಲಭಿಸಿತು. 32ನೇ ನಿಮಿಷದಲ್ಲಿ ಆ್ಯಂಡ್ರ್ಯೂ ಮೆಕಾನೆಲ್‌ ಗೋಲು ಬಾರಿಸಿ 2–0 ಮುನ್ನಡೆಗೆ ಕಾರಣರಾದರು.

ನಂತರ ಭಾರತ ತಂಡವು ಮೇಲುಗೈ ಸಾಧಿಸಿತು. 48ನೇ ನಿಮಿಷದಲ್ಲಿ ಶಿಲಾನಂದ ಲಾಕ್ರಾ ಕೈಚಳಕ ತೋರಿದರು. 51ನೇ ನಿಮಿಷದಲ್ಲಿ ನಾಯಕ ಮನದೀಪ್‌ ಗೋಲು ಬಾರಿಸಿ 2–2 ಸಮಬಲಕ್ಕೆ ಕಾರಣರಾದರು.

ಹೀಗಾಗಿ ಅಂತಿಮ ಕ್ವಾರ್ಟರ್‌ನ ಆಟ ರೋಚಕತೆ ಪಡೆದುಕೊಂಡಿತ್ತು. ಪಂದ್ಯ ಮುಗಿಯಲು ಮೂರು ನಿಮಿಷ ಇದ್ದಾಗ (57) ಭಾರತಕ್ಕೆ ‘ಪೆನಾಲ್ಟಿ ಸ್ಟ್ರೋಕ್‌’ ಲಭಿಸಿತು. ಈ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಶಾರದಾ ನಂದ ತಿವಾರಿ ಭಾರತದ ಪಾಳಯದಲ್ಲಿ ಗೆಲುವಿನ ಕನಸು ಚಿಗುರೊಡೆಯುಂತೆ ಮಾಡಿದರು.

ಫೈನಲ್‌ಗೆ ಅರ್ಹತೆ ಗಳಿಸಬೇಕಾದರೆ ಬ್ರಿಟನ್‌ ತಂಡವು ಈ ಪಂದ್ಯದಲ್ಲಿ ಡ್ರಾ ಮಾಡಿಕೊಳ್ಳಲೇಬೇಕಿತ್ತು. ಹೀಗಾಗಿ ತಂಡ ಕೊನೆಯ ಎರಡು ನಿಮಿಷಗಳಲ್ಲಿ ವೇಗದ ಆಟಕ್ಕೆ ಒತ್ತು ನೀಡಿತು. 59ನೇ ನಿಮಿಷದಲ್ಲಿ ಈ ತಂಡಕ್ಕೆ ಪೆನಾಲ್ಟಿ ಕಾರ್ನರ್‌ ಲಭ್ಯವಾಯಿತು. ಈ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾದ ಮ್ಯಾಥ್ಯೂ ರೆನ್‌ಶಾ, ಬ್ರಿಟನ್‌ ಆಟಗಾರರು ನೆಮ್ಮದಿಯ ನಿಟ್ಟುಸಿರುವ ಬಿಡುವಂತೆ ಮಾಡಿದರು.

ಪ್ರತಿಕ್ರಿಯಿಸಿ (+)