ಕರ್ನಾಟಕ ತಂಡ ಚಾಂಪಿಯನ್‌

7
ರಾಷ್ಟ್ರೀಯ ಅಂಗವಿಕಲರ ಕಬಡ್ಡಿ ಟೂರ್ನಿ

ಕರ್ನಾಟಕ ತಂಡ ಚಾಂಪಿಯನ್‌

Published:
Updated:
Deccan Herald

ಮಂಗಳೂರು: ಪರಮಾನಂದ ತಾಳೇವಾಡ್‌, ಸುರೇಶ್ ಚೆನ್ನದಾತರ್‌ ಹಾಗೂ ಬಸವರಾಜ್‌ ಅವರ ಅಮೋಘ ಆಲ್‌ರೌಂಡರ್‌ ಆಟದ ಫಲವಾಗಿ ಕರ್ನಾಟಕ ತಂಡವು ಇಲ್ಲಿ ನಡೆದ ರಾಷ್ಟ್ರಮಟ್ಟದ ಅಂಗವಿಕಲರ ಪುರುಷರ ಕಬಡ್ಡಿ ಚಾಂಪಿಯನ್‌ಷಿಪ್‌ ಮುಡಿಗೇರಿಸಿಕೊಂಡಿದೆ.

ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರ ತಂಡವನ್ನು 31–10 ಪಾಯಿಂಟ್‌ಗಳಿಂದ ಸೋಲಿಸಿ ಪ್ರಶಸ್ತಿ ಗಳಿಸಿಕೊಂಡಿತು.

ಇಲ್ಲಿನ ಮಂಗಳಾ ಕ್ರೀಡಾಂಗಣದಲ್ಲಿ ಮಾತೃ ಪ್ರತಿಷ್ಠಾನ, ರಾಜ್ಯ ಅಂಗವಿಕಲರ ಕಬಡ್ಡಿ ಸಂಸ್ಥೆ ಹಾಗೂ ಯುವ ಸಬಲೀ
ಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದ ಪ್ರಥಮ ಟೂರ್ನಿ ಇದಾಗಿತ್ತು.

ಪರಮಾನಂದ ತಾಳೇವಾಡ್‌ 17 ಹಾಗೂ ಸುರೇಶ್ ಚೆನ್ನದಾತರ್‌  5, ಬಸವರಾಜ್‌ 14 ಪಾಯಿಂಟ್ಸ್‌ ದಾಖಲಿಸಿದರು. ಪರಮಾನಂದ ತಾಳೇವಾಡ್‌ ಅವರು ಆಲ್‌ರೌಂಡರ್‌ ಆಟ ಆಡಿ 6 ಬೋನಸ್‌, 7 ರೈಡಿಂಗ್‌, 4 ಟ್ಯಾಕಲ್‌ ಪಾಯಿಂಟ್‌ ಗಳಿಸಿ ಕರ್ನಾಟಕ ತಂಡದ ಗೆಲುವಿನಲ್ಲಿ ಮುಂಚೂಣಿ ಸ್ಥಾನ ಪಡೆದರು. ಬಸವರಾಜ್‌ ಕೂಡಾ 5 ರೈಡಿಂಗ್‌, 5 ಬೋನಸ್‌, 4 ಪಾಯಿಂಟ್‌ ದಾಖಲಿಸಿದರು.

ಮಹಾರಾಷ್ಟ್ರ ತಂಡದ ಸಚಿನ್‌ ತಾಂಡೇಲ್‌ ಆಕ್ರಮಣಕಾರಿ ಆಲ್‌ರೌಂಡರ್ ಆಟವು ತಂಡದ ಗೆಲುವಿಗೆ ಆಸರೆ ಆಗಲಿಲ್ಲ. 5 ರೈಡಿಂಗ್‌, 4 ಬೋನಸ್‌ ಪಾಯಿಂಟ್‌ ಮಾತ್ರ ದಾಖಲಿಸಿದರು. ಮಹಾರಾಷ್ಟ್ರ ತಂಡವು ಸೆಮಿಫೈನಲ್‌ನಲ್ಲಿ 51–36 ರಿಂದ ತಮಿಳುನಾಡು ತಂಡದ ವಿರುದ್ದ ಉತ್ತಮ ಪ್ರದರ್ಶನ ನೀಡಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು.

ರಾಮರಾವ್‌ ಪಾಂಡೆ 18 ಪಾಯಿಂಟ್‌ ದಾಖಲಿಸಿದ್ದರು. ಸಚಿನ್‌ ತಾಂಡೇಲ್‌ 30 ಪಾಯಿಂಟ್‌ ದಾಖಲಿಸಿದ್ದರು. ಆದರೆ, ಫೈನಲ್‌ ಹಂತದ ಟೂರ್ನಿಯಲ್ಲಿ ಅದೃಷ್ಟ ಅವರ ಕೈ ಹಿಡಿಯಲಿಲ್ಲ. ತಮಿಳುನಾಡು ತಂಡದ ನಂದಕುಮಾರ್‌ 6 ರೈಡಿಂಗ್‌, 6 ಬೋನಸ್‌ ಪಾಯಿಂಟ್‌ ದಾಖಲಿಸಿದ್ದರು. ಮಹಾರಾಷ್ಟ್ರ ತಂಡವು ಬೆಳಿಗ್ಗೆ ನಡೆದ ಟೂರ್ನಿಯಲ್ಲಿ 46–6 ರಿಂದ ಜಾರ್ಖಾಂಡ್‌ ತಂಡದ ವಿರುದ್ಧ ಗೆದ್ದು ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿತ್ತು.

ಕರ್ನಾಟಕ ತಂಡ ಬೆಳಿಗ್ಗೆ ನಡೆದ ಟೂರ್ನಿಯಲ್ಲಿ 18–8 ರಿಂದ ತೆಲಂಗಾಣ ತಂಡದ ವಿರುದ್ಧ ಗೆದ್ದು ಸೆಮಿಫೈನಲ್‌ಗೆ ಅರ್ಹತೆ ಪಡೆದಿತ್ತು. ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡವು 46–10 ರಿಂದ ಗೋವಾ ತಂಡದ ವಿರುದ್ಧ ಅಮೋಘ ಗೆಲುವು ದಾಖಲಿಸಿತು. ಕರ್ನಾಟಕ ತಂಡದ ಆಟಗಾರರು ಎಲ್ಲ ಟೂರ್ನಿಯಲ್ಲಿಯೂ ಉತ್ತಮ ಸಾಧನೆ ಮೆರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !