ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಲ್ಲಿ ಬಂದ್‌, ಮೊಟಕುಗೊಂಡ ಪ್ರತಿಭಟನೆ

ರೈತರ ಸಾಲಮನ್ನಾ: ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ನಿಧನದಿಂದ ಬಂದ್‌ನಿಂದ ಹಿಂದೆ ಸರಿದ ಬಿಜೆಪಿ
Last Updated 29 ಮೇ 2018, 10:10 IST
ಅಕ್ಷರ ಗಾತ್ರ

ವಿಜಯಪುರ: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ, ಸ್ವಯಂ ಪ್ರೇರಿತರಾಗಿ ಬಂದ್‌ ಆಚರಿಸಿ ಎಂಬ ಕರೆ ನೀಡಿದ್ದ ಬಿಜೆಪಿ, ಸೋಮವಾರ ನಸುಕಿನಲ್ಲೇ ರಸ್ತೆ ಅಪಘಾತದಲ್ಲಿ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಮೃತಪಟ್ಟಿದ್ದರಿಂದ ಬಂದ್‌, ಪ್ರತಿಭಟನೆಯನ್ನು ಜಿಲ್ಲೆಯ ಬಹುತೇಕ ಕಡೆ ಕೈಬಿಟ್ಟಿತು.

ವಿಜಯಪುರ ನಗರ ಸೇರಿದಂತೆ ಸಿಂದಗಿ, ಇಂಡಿ, ಬಸವನಬಾಗೇವಾಡಿ ಪಟ್ಟಣಗಳಲ್ಲಿ ಬಂದ್‌ ಆಚರಣೆ ನಡೆಯಲೇ ಇಲ್ಲ. ಮುದ್ದೇಬಿಹಾಳ ಪಟ್ಟಣದಲ್ಲಿ ಪ್ರತಿಭಟನೆಯನ್ನಷ್ಟೇ ಕೆಲ ಹೊತ್ತು ನಡೆಸಲಾಯಿತು. ತಾಳಿಕೋಟೆ, ನಾಲತವಾಡ ಪಟ್ಟಣಗಳಲ್ಲಿ ಅಂಗಡಿ ಮುಚ್ಚಿ ಬಂದ್‌ ಆಚರಿಸಲಾಗಿದೆ.

ಜಿಲ್ಲೆಯ ಎಲ್ಲೆಡೆ ವಾಹನ ಸಂಚಾರ ಎಂದಿನಂತೆಯೇ ಇತ್ತು. ಶಾಲಾ–ಕಾಲೇಜು, ಸರ್ಕಾರಿ ಕಚೇರಿಗಳು ಕರ್ತವ್ಯ ನಿರ್ವಹಿಸಿದವು. ಅಂಗಡಿ–ಹೋಟೆಲ್‌ ಬಾಗಿಲು ತೆರೆದು ವಹಿವಾಟು ನಡೆಸಿದವು. ತಾಳಿಕೋಟೆ, ನಾಲತವಾಡದಲ್ಲಿ ಮಾತ್ರ ಬಸ್‌ ಸಂಚಾರ, ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು.

ಮಾತಿನಂತೆ ನಡೆದುಕೊಳ್ಳಿ: ಪಾಟೀಲ ನಡಹಳ್ಳಿ

ಮುದ್ದೇಬಿಹಾಳ: ‘ಚುನಾವಣೆ ವೇಳೆ ಜನತೆಗೆ ನೀಡಿದ ಮಾತಿನಂತೆ ರೈತರ ಎಲ್ಲ ಸಾಲ ಮನ್ನಾ ಮಾಡುವುದನ್ನು ಬಿಟ್ಟು, ಗಳಿಗೆಗೊಂದು ನೆಪ ಹೇಳುತ್ತಿರುವ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಚನಭ್ರಷ್ಟ ಮುಖ್ಯಮಂತ್ರಿ ಎಂದು ಸ್ಥಳೀಯ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಟೀಕಿಸಿದರು.

ಬಿಜೆಪಿ ಮುದ್ದೇಬಿಹಾಳ ಮಂಡಲ ಮತ್ತು ರೈತಪರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಸಂದರ್ಭ ಬಸವೇಶ್ವರ ವೃತ್ತದಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

ವಿಜಯಪುರ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ‘ಅಧಿಕಾರದಲ್ಲಿರುವರಿಗೆ ರೈತರ ನೋವು ಗೊತ್ತಿಲ್ಲ. ಇವರ‍್ಯಾರೂ ರೈತರೇ ಅಲ್ಲ. ಹೀಗಾಗಿ ಕೆಲವರು ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಾರೆ. ಇಂಥ ಕೀಳು ಹೇಳಿಕೆ ನೀಡುವವರ ಮನೆಯ ಮುಂದೆಯೇ ರೈತರು ಮುಂದಿನ ದಿನಗಳಲ್ಲಿ ಧರಣಿ ನಡೆಸಿದಾಗ ರೈತರ ನೋವು ಏನು ಅನ್ನೋದು ಅಂಥವರಿಗೆ ಗೊತ್ತಾಗುತ್ತದೆ’ ಎಂದರು.

ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವಕೀಲ ಎಂ.ಡಿ.ಕುಂಬಾರ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಮಂಜು
ನಾಥಗೌಡ ಪಾಟೀಲ, ಧುರೀಣರಾದ ಶಿವಶಂಕರಗೌಡ ಹಿರೇಗೌಡರ, ಮಲಕೇಂದ್ರಗೌಡ ಪಾಟೀಲ, ಹೇಮರಡ್ಡಿ ಮೇಟಿ ಮತ್ತಿತರರು ಮಾತನಾಡಿ, ‘ಕುಮಾರಸ್ವಾಮಿ ತಕ್ಷಣ ರೈತರ ಸಾಲ ಮನ್ನಾ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಇದಕ್ಕಿಂತಲೂ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದರು.

ಪ್ರಮುಖರಾದ ನಿಂಗಪ್ಪ ಬಪ್ಪರಗಿ, ಕಾಶಿಬಾಯಿ ರಾಂಪೂರ, ರಾಜೇಂದ್ರಗೌಡ ರಾಯಗೊಂಡ, ಸಂಗಮ್ಮ ದೇವರಳ್ಳಿ, ಹಣಮಂತ್ರಾಯ ದೇವರಳ್ಳಿ, ಸೋಮನಗೌಡ ಪಾಟೀಲ ನಡಹಳ್ಳಿ, ಸೋಮನಗೌಡ ಬಿರಾದಾರ ಕವಡಿಮಟ್ಟಿ, ಶಿವಬಸ್ಸು ಸಜ್ಜನ, ರಾಜಶೇಖರ ಹೊಳಿ, ಸಿದ್ದರಾಜ ಹೊಳಿ, ಬಸವರಾಜ ಗುಳಬಾಳ, ರವೀಂದ್ರ ಬಿರಾದಾರ, ಪುನೀತ್ ಹಿಪ್ಪರಗಿ, ಶೇಖರ ಹಿರೇಮಠ, ಸಂಗಮೇಶ ಕರಭಂಟನಾಳ, ರುದ್ರಪ್ಪ ಬಿಜ್ಜೂರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಬಂದ್ ಭಾಗಶಃ ಯಶಸ್ವಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದ ರಾಜ್ಯವ್ಯಾಪಿ ಬಂದ್‌ಗೆ ಭಾಗಶ: ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರತಿಭಟನಾ ರ‍್ಯಾಲಿ ಮುಗಿದ ಮೇಲೆ ಮದ್ಯಾಹ್ನದ ನಂತರ ಅಂಗಡಿಗಳು ಯಥಾರೀತಿ ಪ್ರಾರಂಭಗೊಂಡವು.

ತಾಳಿಕೋಟೆ: ಬಂದ್‌ ಯಶಸ್ವಿ

ತಾಳಿಕೋಟೆ: ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಕರೆ ನೀಡಲಾಗಿದ್ದ ತಾಳಿಕೋಟೆ ಪಟ್ಟಣ ಬಂದ್ ಯಶಸ್ವಿಯಾಗಿದೆ.

ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತಾಪಿಗಳು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಪಟ್ಟಣ ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಆಸ್ಪತ್ರೆ, ಔಷಧಿ ಅಂಗಡಿಗಳಂತಹ ತುರ್ತು ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಸೋಮವಾರ ಸಂತೆಯ ದಿನವಾಗಿದ್ದರಿಂದ ರೈತರು ತಂದಿದ್ದ ತರಕಾರಿಗಳನ್ನು ಸಿಕ್ಕ ಬೆಲೆಗೆ ಕೊಟ್ಟು ಜಾಗ ಖಾಲಿ ಮಾಡಿದರು. ಬಸ್ ಸಂಚಾರ ಬೆಳಿಗ್ಗೆ ಪ್ರಾರಂಭವಾಗಿದ್ದು ನಂತರದಲ್ಲಿ ಸ್ಥಗಿತಗೊಳಿಸಲಾಯಿತು. ಸಂಜೆಗೆ ಸಂಚಾರ ಆರಂಭವಾಗಿದ್ದರಿಂದ  ದೂರದ ಊರುಗಳಿಗೆ ಹೋಗಬೇಕಾದ ಪ್ರಯಾಣಿಕರು ಪರಿತಪಿಸಿದರು.

ಆರಂಭದಲ್ಲಿ ತೆರೆಯಲಾಗಿದ್ದ ಕೆಲ ಅಂಗಡಿಗಳು ಕೂಡ ನಂತರ ಬಿಜೆಪಿ ಕಾರ್ಯಕರ್ತರ ಮನವಿ ಮೇರೆಗೆ ಅವು
ಗಳೂ ಬಂದ್ ಮಾಡಲಾಯಿತು. ಮಧ್ಯಾಹ್ನ ಅಂಬಾಭವಾನಿ ಮಂದಿರದಿಂದ ನೂರಾರು ರೈತರು, ಬಿಜೆಪಿ ಕಾರ್ಯ
ಕರ್ತರು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ನೇತೃತ್ವದಲ್ಲಿ ಕತ್ರಿ ಬಜಾರ, ಶಿವಾಜಿ ವೃತ್ತ, ಬಸ್ ನಿಲ್ದಾಣದ ಮೂಲಕ ಹಾಯ್ದು ವಿಜಯಪುರ ವೃತ್ತಕ್ಕೆ ಬಂದರು.

ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ‘ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಸದ್ಯ ಸಾಲ ಮನ್ನಾ ಮಾಡಲು ಸಲ್ಲದ ನೆಪ ಹೇಳುತ್ತಿದ್ದಾರೆ. ಇದರಿಂದ ರೈತರು ಬೀದಿಗಿಳಿದಿದ್ದಾರೆ’ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ,ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಬಸನಗೌಡ ಬಿರಾದಾರ, ರಾಜುಗೌಡ ಕೋಳುರ, ಗುರು ಕೊಪ್ಪದ, ಪ್ರಮುಖರಾದ ಆರ್.ಎಸ್.ಪಾಟೀಲ ಕೂಚಬಾಳ, ಮಲಕೇಂದ್ರಾಯಗೌಡ ಪಾಟೀಲ, ಶಿವಶಂಕರಗೌಡ ಹಿರೇಗೌಡರ, ನಿಂಗಪ್ಪಗೌಡ ಬಪ್ಪರಗಿ, ಮಂಡಲ ಅಧ್ಯಕ್ಷ ಎಂ.ಡಿ.ಕುಂಬಾರ, ರಾಘವೇಂದ್ರ ಚವ್ಹಾಣ, ವಾಸುದೇವ ಹೆಬಸೂರ, ರೈತ ಮುಖಂಡರಾದ ಜಿ.ಜಿ.ಮದರಕಲ್ಲ, ಕುಮಾರಗೌಡ ಪಾಟೀಲ, ನಿಂಗನಗೌಡ ದೇಸಾಯಿ,ಮಂಜುನಾಥ ಆಲ್ಯಾಳ, ಸಿದ್ದಪ್ಪ ವಾಲೀಕಾರ, ಬಸು ಕಶೆಟ್ಟಿ, ಮಲ್ಲಿಕಾರ್ಜುನ ಗುಂಡಕನಾಳ, ಬಸವರಾಜ ಚಾಳೇಕರ, ಮಂಜು ಶೆಟ್ಟಿ, ಪ್ರಕಾಶ ಹಜೇರಿ, ಮುತ್ತಪ್ಪ ಚಮಲಾ
ಪೂರ, ದತ್ತು ಹೆಬಸೂರ, ರಾಜುಗೌಡ ಗುಂಡಕನಾಳ, ಸಂಗನಗೌಡ ಹೆಗರಡ್ಡಿ, ಶಂಕ್ರಗೌಡ ದೇಸಾಯಿ, ಅಶ್ವಿನ ಬೇದರ
ಕರ, ರಾಘವೇಂದ್ರ, ವಿಠ್ಠಲ ಮೋಹಿತೆ, ರಾಘವೇಂದ್ರ ಕೊಪ್ಪದ ಇದ್ದರು.

**
ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಸಂಪುಟ ರಚನೆಗೆ ಮುಖ್ಯಮಂತ್ರಿ ಸರ್ಕಸ್‌ ನಡೆಸುತ್ತಿದ್ದಾರೆ. ರಾಜೀನಾಮೆ ಕೊಟ್ಟು, ಬಿಜೆಪಿಗೆ ಅವಕಾಶ ನೀಡುವುದು ಒಳ್ಳೆಯದು
ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT