ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನೆತ್‌ ಪೊವೆಲ್‌: ಅಥ್ಲೆಟಿಕ್ ಕ್ಷೇತ್ರದ ‘ಜಂಟ್ಲ್‌ಮನ್‌ ಸ್ಪ್ರಿಂಟರ್‌’

1964ರ ಟೋಕಿಯೊ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸಿದ್ದ ವೇಗದ ಓಟಗಾರ
Last Updated 11 ಡಿಸೆಂಬರ್ 2022, 21:38 IST
ಅಕ್ಷರ ಗಾತ್ರ

ಬೆಂಗಳೂರು: ಒಲಿಂಪಿಯನ್ ಹಾಗೂ 1970ರ ಏಷ್ಯನ್‌ ಕ್ರೀಡಾಕೂಟದ 4X100 ಮೀ. ರಿಲೇನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತ ತಂಡದ ಸದಸ್ಯರಾಗಿದ್ದ ಕೆನೆತ್‌ ಪೊವೆಲ್‌ ಅವರು ಅಥ್ಲೆಟಿಕ್ಸ್‌ ವಲಯದಲ್ಲಿ ‘ದಿ ಜಂಟ್ಲ್‌ಮನ್‌ ಸ್ಪ್ರಿಂಟರ್‌’ ಎಂದೇ ಜನಪ್ರಿಯರಾಗಿದ್ದರು.

1960ರ ದಶಕದಲ್ಲಿ ದೇಶದ ಮುಂಚೂಣಿಯ ವೇಗದ ಓಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದರಲ್ಲದೆ, 1964ರ ಟೋಕಿಯೊ ಒಲಿಂಪಿಕ್ಸ್‌ನ 100ಮೀ., 200 ಮೀ. ಓಟ ಮತ್ತು 4X100 ಮೀ. ರಿಲೇನಲ್ಲಿ ಸ್ಪರ್ಧಿಸಿದ್ದರು.

ಟೋಕಿಯೊದಲ್ಲಿ 4X100 ಮೀ. ರಿಲೇನಲ್ಲಿ ಕೆನೆತ್‌ ಪೊವೆಲ್‌, ಆಂಥೋಣಿ ಫ್ರಾನ್ಸಿಸ್‌ ಕುಟಿನೊ, ಮಖಾನ್‌ ಸಿಂಗ್‌ ಮತ್ತು ರಾಜಶೇಖರನ್‌ ಪಿಚಾಯ ಅವರನ್ನೊಳಗೊಂಡ ಭಾರತ ತಂಡ ಸೆಮಿಫೈನಲ್‌ ಪ್ರವೇಶಿಸಿತ್ತು.

1962 ಮತ್ತು 1966ರ ಏಷ್ಯನ್‌ ಕ್ರೀಡಾಕೂಟಕ್ಕೆ ಭಾರತ ತಂಡದಲ್ಲಿ ಅವರಿಗೆ ಸ್ಥಾನ ಲಭಿಸಿರಲಿಲ್ಲ. ಆದರೆ 1970ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದರಲ್ಲದೆ 4X100 ಮೀ. ರಿಲೇನಲ್ಲಿ ಭಾರತಕ್ಕೆ ಮೂರನೇ ಸ್ಥಾನ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಒ.ಎಲ್‌.ಥಾಮಸ್‌, ಎ.‍ಪಿ.ರಾಮಸ್ವಾಮಿ, ರಮೇಶ್‌ ತಾವ್ಡೆ ಮತ್ತು ಪೊವೆಲ್‌ ಅವರಿದ್ದ ತಂಡ 40.9 ಸೆ.ಗಳಲ್ಲಿ ಗುರಿ ತಲುಪಿತ್ತು. ಈ ಸ್ಪರ್ಧೆಯಲ್ಲಿ ಥಾಯ್ಲೆಂಡ್‌ (40.4 ಸೆ.) ಮತ್ತು ಜಪಾನ್‌ (40.7 ಸೆ.) ತಂಡಗಳು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಜಯಿಸಿದ್ದವು.

1940ರ ಏಪ್ರಿಲ್‌ 20 ರಂದು ಕೋಲಾರದಲ್ಲಿ ಜನಿಸಿದ ಅವರು 1957ರಲ್ಲಿ ಕೋಲ್ಕತ್ತದಲ್ಲಿ ನಡೆದಿದ್ದ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಮುನ್ನಲೆಗೆ ಬಂದಿದ್ದರು.

ತಮ್ಮ 19ನೇ ವಯಸ್ಸಿನಲ್ಲಿ ಬೆಂಗಳೂರಿಗೆ ವಾಸ ಬದಲಿಸಿದ ಬಳಿಕ ಅಥ್ಲೆಟಿಕ್ಸ್‌ಅನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ರೇಂಜರ್ಸ್‌ ಕ್ಲಬ್‌ನಲ್ಲಿ ಕೃಷ್ಣ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು, ವೇಗದ ಓಟಗಾರನಾಗಿ ರೂಪುಗೊಂಡಿದ್ದರು. 1963 ರಲ್ಲಿ ಅಲಹಾಬಾದ್‌ನಲ್ಲಿ ನಡೆದಿದ್ದ ಚೊಚ್ಚಲ ಅಂತರ ರಾಜ್ಯ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ‘ಸ್ಪ್ರಿಂಟ್‌ ಡಬಲ್‌’ ಸಾಧನೆ ಮಾಡಿದ್ದರು. 100 ಮೀ. ಓಟವನ್ನು 10.8 ಸೆ. ಹಾಗೂ 200 ಮೀ. ಓಟವನ್ನು 22 ಸೆ.ಗಳಲ್ಲಿ ಪೂರೈಸಿದ್ದರು.

ಅಥ್ಲೆಟಿಕ್ಸ್‌ನಿಂದ ನಿವೃತ್ತಿಯಾದ ಬಳಿಕ ಹ್ಯಾಂಡ್‌ಬಾಲ್‌ ಆಟದಲ್ಲಿ ತಮ್ಮ ಸಾಮರ್ಥ್ಯ ತೋರಿದ್ದರು. ರಾಷ್ಟ್ರೀಯ ಹ್ಯಾಂಡ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಏಷ್ಯನ್‌ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಮತ್ತು ವಿಶ್ವ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ನಲ್ಲೂ ಅವರು ಭಾಗವಹಿಸಿದ್ದಾರೆ.

1965 ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದ ಅವರು ಈ ಗೌರವಕ್ಕೆ ಪಾತ್ರರಾದ ರಾಜ್ಯದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದರು. ಕರ್ನಾಟಕ ಸರ್ಕಾರ 2018 ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ಪೊವೆಲ್‌ ನಿಧನಕ್ಕೆ ಕರ್ನಾಟಕ ರಾಜ್ಯ ಅಥ್ಲೆಟಿಕ್‌ ಸಂಸ್ಥೆ, ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಹಾಗೂ ಎಎಫ್‌ಐ ಸಂತಾಪ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT