ಸೋಮವಾರ, ನವೆಂಬರ್ 18, 2019
23 °C

ಬ್ಯಾಡ್ಮಿಂಟನ್‌: ಮೊಮೊಟಾಗೆ ಪ್ರಶಸ್ತಿ

Published:
Updated:

ಶಾಂಘೈ: ಅಮೋಘ ಆಟ ಆಡಿದ ಜಪಾನ್‌ನ ಕೆಂಟೊ ಮೊಮೊಟಾ, ಫುಜೌ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಮೊಮೊಟಾ 21–15, 17–21, 21–18ರಲ್ಲಿ ತೈವಾನ್‌ನ ಚೊವ್‌ ತಿಯೆನ್‌ ಚೆನ್‌ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ ಈ ಋತುವಿನಲ್ಲಿ ಒಟ್ಟು 10 ಪ್ರಶಸ್ತಿಗಳನ್ನು ಗೆದ್ದ ಸಾಧನೆಯನ್ನೂ ಮಾಡಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ ಎರಡು ಸ್ಥಾನಗಳಲ್ಲಿದ್ದ ಆಟಗಾರರ ನಡುವಣ ಈ ಪೈಪೋಟಿ ಸಾಕಷ್ಟು ಕುತೂಹಲ ಕೆರಳಿಸಿತ್ತು. ಎರಡು ಬಾರಿಯ ವಿಶ್ವ ಚಾಂಪಿಯನ್‌ ಮೊಮೊಟಾ ಮೊದಲ ಗೇಮ್‌ನಲ್ಲಿ ಗೆದ್ದರು. ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿದ ತಿಯೆನ್‌ 1–1 ಸಮಬಲ ಸಾಧಿಸಿದರು.

ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನಲ್ಲಿ ಉಭಯ ಆಟಗಾರರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು.

ನಿರ್ಣಾಯಕ ಘಟ್ಟದಲ್ಲಿ ದಿಟ್ಟ ಆಟ ಆಡಿದ ಮೊಮೊಟಾ ಸತತ ಮೂರು ಪಾಯಿಂಟ್ಸ್‌ ಗಳಿಸಿ ಸಂಭ್ರಮಿಸಿದರು.

ಮಹಿಳಾ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಚೀನಾದ ಚೆನ್‌ ಯೂಫಿ ಅವರ ಪಾಲಾಯಿತು.

ಫೈನಲ್‌ನಲ್ಲಿ ಯೂಫಿ 9–21, 21–12, 21–18ರಲ್ಲಿ ಜಪಾನ್‌ನ ನೊಜೊಮಿ ಒಕುಹರಾ ಅವರನ್ನು ಸೋಲಿಸಿದರು.

ಪ್ರತಿಕ್ರಿಯಿಸಿ (+)