ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಲ್‌ಬಿ: ಮೂರೂವರೆ ದಶಕದ ನಂತರ ಒಲಿದ ಚಿನ್ನ

ಅಖಿಲ ಭಾರತ ಅಂತರ ಕಾಲೇಜು ಪೆಂಕಾಕ್ ಸಿಲಾಟ್ ಚಾಂಪಿಯನ್‌ಷಿಪ್‌
Last Updated 22 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯವು ಆರಂಭವಾದ ಮೂರುವರೆ ದಶಕದ ಇತಿಹಾಸದಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂ ಟದಲ್ಲಿ ಮೊದಲ ಬಾರಿಗೆ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದೆ.

ಅಮೃತಸರದ ಗುರುನಾನಕ್ ದೇವ್ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಮುಕ್ತಾಯವಾದ ಪೆಂಕಾಕ್ ಸಿಲಾಟ್ ಚಾಂಪಿಯನ್‌ಷಿಪ್‌ನಲ್ಲಿ ಗುಲಬರ್ಗಾ ವಿವಿಯ ಪುರುಷ ಹಾಗೂ ಮಹಿಳಾ ತಂಡಗಳು ವಿವಿಧ ವಿಭಾಗಗಳಲ್ಲಿ ಒಂದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಒಂಬತ್ತು ಕಂಚಿನ ಪದಕ ಸೇರಿ 14 ಪದಕಗಳನ್ನು ಜಯಿಸಿವೆ.

ಬೀದರ್‌ನ ಅಂಬೇಡ್ಕರ್ ಕಾಲೇಜಿನ ಸುವಿತ್ ಮೋರೆ ಅವರು ತುಂಗಲ್ ವಿಭಾಗದಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿಯ ಸಾಧನೆ ಮಾಡಿದ್ದಾರೆ.

ಬೀದರ್‌ನ ಆರ್‌ಆರ್‌ಕೆ ಕಾಲೇಜಿನ ಸಿದ್ಧಾರ್ಥ್ ಅವರು ಗಂಡಾ ವಿಭಾಗದಲ್ಲಿ ಒಂದು ಬೆಳ್ಳಿ ಹಾಗೂ ಒಂದು ಕಂಚು ಹಾಗೂ ಟೆಂಡಿಂಗ್ ಬೀಚ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

ಅದೇ ರೀತಿ ಬೀದರ್‌ನ ಬಿವಿಬಿ ಕಾಲೇಜಿನ ಶರೀಫ್ ಗಂಡಾ ವಿಭಾಗದಲ್ಲಿ ಒಂದು ಬೆಳ್ಳಿ ಹಾಗೂ ಒಂದು ಕಂಚು ಗೆದ್ದಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಗುಲಬರ್ಗಾ ವಿವಿ ದೈಹಿಕ ಶಿಕ್ಷಣ ಕಾಲೇಜಿನ ಮಾಲಾಶ್ರೀ ತುಂಗಲ್ ಬೀಚ್ ವಿಭಾಗದಲ್ಲಿ ಒಂದು ಬೆಳ್ಳಿ, ತುಂಗಲ್ ಇಂಡೋರ್‌, ರೆಗು, ಟೆಂಡಿಂಗ್ ಫೈಟಿಂಗ್‌ ವಿಭಾಗದಲ್ಲಿ ಮೂರು ಕಂಚು ಹಾಗೂ ಟೆಂಡಿಂಗ್ ಫೈಟಿಂಗ್ ವಿಭಾಗದಲ್ಲಿ ವಿನಿತಾ, ರೆಗು ವಿಭಾಗದಲ್ಲಿ ಸಾವಿತ್ರಮ್ಮ ಎಸ್.ಮಂಗಳಾ ಅವರು ತಲಾ ಒಂದು ಕಂಚಿನ ಪದಕ ಗಳಿಸಿದ್ದಾರೆ.

ಗುಲಬರ್ಗಾ ವಿವಿಯಲ್ಲಿ 1981ರಲ್ಲಿ ದೈಹಿಕ ಶಿಕ್ಷಣ ವಿಭಾಗದ ಆರಂಭವಾಗಿದೆ. ಆಗಿನಿಂದ ಈವರೆಗೆ ಕೇವಲ ಮೂರು ಪದಕಗಳ ಸಾಧನೆ ಆಗಿತ್ತು.

2004ರಲ್ಲಿ ರೋಹಿತ್ ಹವಳ ಅವರು ಲಾಂಗ್‌ಜಂಪ್‌ನಲ್ಲಿ ಬೆಳ್ಳಿ, ಟ್ರಿಪಲ್‌ ಜಂಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅದಾಗಿ ದಶಕಗಳ ಬಳಿಕ 2014ರಲ್ಲಿ ಮಂಜುನಾಥ ಮಾದರ ಅವರು ಕುಸ್ತಿಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಅದಾದ ನಂತರ ನಡೆದ ಚಾಂಪಿಯನ್‌ಷಿಪ್‌ಗಳಲ್ಲಿ ವಿವಿಯಿಂದ ತೆರಳುತ್ತಿದ್ದ ತಂಡಗಳು ಬರಿಗೈಯಲ್ಲಿ ವಾಪಸ್‌ ಮರಳುತ್ತಿದ್ದವು. ಕಳೆದ ಅಕ್ಟೋಬರ್‌ನಲ್ಲಿ ವಿವಿ ಆತಿಥ್ಯ ವಹಿಸಿದ್ದ ಕ್ರಾಸ್‌ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿಯೂ ಹೇಳಿಕೊಳ್ಳುವಂತಹ ಸಾಧನೆ ಮೂಡಿ ಬಂದಿರಲಿಲ್ಲ.

’ಪೆಂಕಾಕ್‌ ಸಿಲಾಟ್ ಚಾಪಿಯನ್‌ಷಿಪ್‌ನಲ್ಲಿ ತಂಡಗಳು ಪದಕಗಳ ಸಾಧನೆ ಮಾಡಿ ವಿವಿಗೆ ಕೀರ್ತಿ ತಂದಿದ್ದಾರೆ. ಈ ಸಾಧನೆ ಯುವ ಕ್ರೀಡಾಪಟುಗಳಿಗೆ ಪ್ರೇರಣೆ ಆಗಲಿದೆ’ ಎಂದು ಗುಲಬರ್ಗಾ ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಎಂ.ಎಸ್.ಪಾಸೋಡಿ ಹೇಳಿದರು.

**

ವಿವಿಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ. ಇದು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಪೆಂಕಾಕ್ ಸಿಲಾಟ್‌ ಬೆಳವಣಿಗೆಗೆ ಸಹಕಾರಿಯಾಗಲಿದೆ
- ಅಬ್ದುಲ್ ರಜಾಕ್ ಟೇಲರ್ , ಕೋಚ್‌

**

ಪೆಂಕಾಕ್ ಸಿಲಾಟ್‌ ಕ್ರೀಡೆಯಲ್ಲಿ ವಿವಿಯ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು. ಆ ನಿಟ್ಟಿನಲ್ಲಿ ವಿವಿಯಿಂ ಅವರಿಗೆ ತರಬೇತಿ ನೀಡಲಾಗುವುದು
- ಎಂ.ಎಸ್.ಪಾಸೋಡಿ, ದೈಹಿಕ ಶಿಕ್ಷಣ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT