ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ‘ಚಿನ್ನ’ ಅರ್ಚನಾ ಕಾಮತ್‌

Last Updated 13 ಜನವರಿ 2019, 20:00 IST
ಅಕ್ಷರ ಗಾತ್ರ

ಭಾರತ ಟೇಬಲ್‌ ಟೆನಿಸ್‌ ಲೋಕದ ಮಿನುಗು ತಾರೆ ಅರ್ಚನಾ ಕಾಮತ್‌. ಕರ್ನಾಟಕದ ಈ ಆಟಗಾರ್ತಿ ಸಾಗಿದ ಹಾದಿಯಲ್ಲೆಲ್ಲಾ ಸಾಧನೆಯ ಮೈಲುಗಲ್ಲು ಸ್ಥಾಪಿಸಿದ್ದಾರೆ. ವೈದ್ಯ ದಂಪತಿಗಳಾದ ಅನುರಾಧಾ ಮತ್ತು ಗಿರೀಶ್‌ ಕಾಮತ್‌ ಅವರ ಮಗಳಾದ ಅರ್ಚನಾ, ಹೋದ ವಾರ ಕಟಕ್‌ನಲ್ಲಿ ನಡೆದಿದ್ದ 80ನೇ ಸೀನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಸಾಧನೆ ಮಾಡಿದ ಭಾರತದ ಎರಡನೇ ಅತಿ ಕಿರಿಯ ಆಟಗಾರ್ತಿ ಎಂಬ ಹಿರಿಮೆ ಅವರದು. ಜೊತೆಗೆ 50 ವರ್ಷಗಳ ನಂತರ ಈ ಸಾಧನೆ ಮಾಡಿದ ಕರ್ನಾಟಕದ ಆಟಗಾರ್ತಿ ಎಂಬ ಹೆಗ್ಗಳಿಯನ್ನೂ ಹೊಂದಿದ್ದಾರೆ. ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

*ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದಿದ್ದೀರಿ? ಈ ಸಾಧನೆ ಬಗ್ಗೆ ಹೇಳಿ?

ಚಾಂಪಿಯನ್‌ಷಿಪ್‌ನಲ್ಲಿ ಬಲಿಷ್ಠ ಸ್ಪರ್ಧಿಗಳು ಭಾಗವಹಿಸಿದ್ದರು. ಹೀಗಾಗಿ ಟ್ರೋಫಿ ಗೆಲ್ಲುತ್ತೇನೆ ಅಂದುಕೊಂಡಿರಲಿಲ್ಲ. ಎಲ್ಲಾ ಪಂದ್ಯಗಳಲ್ಲೂ ಶ್ರೇಷ್ಠ ಸಾಮರ್ಥ್ಯ ತೋರಿದ್ದರಿಂದ ಈ ಸಾಧನೆ ಮೂಡಿಬಂದಿದೆ. ಹೊಸ ವರ್ಷದ ಆರಂಭದಲ್ಲೇ ಪ್ರಶಸ್ತಿ ಗೆದ್ದಿದ್ದರಿಂದ ಅತೀವ ಖುಷಿಯಾಗಿದೆ.

*ಚಾಂಪಿಯನ್‌ಷಿಪ್‌ಗೂ ಮುನ್ನ ಸಿದ್ಧತೆ ಹೇಗಿತ್ತು?

ಕೋಚ್‌ಗಳಾದ ಬೋನಾ ಥಾಮಸ್‌ ಜಾನ್‌, ಜರ್ಮನಿಯ ಪೀಟರ್‌ ಎಂಗೆಲ್‌ ಮತ್ತು ಸಗಾಯ್‌ ರಾಜ್‌ ಅವರ ಮಾರ್ಗದರ್ಶನದಲ್ಲಿ ಕಠಿಣ ಅಭ್ಯಾಸ ನಡೆ ಸಿದ್ದೆ. ಫಿಟ್‌ನೆಸ್‌ ಕಾಪಾಡಿಕೊಳ್ಳಲೂ ಹೆಚ್ಚಿನ ಒತ್ತು ನೀಡಿದ್ದೆ.

*ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧೆ ಹೇಗಿತ್ತು?

ಮೊದಲ ಸುತ್ತಿನಿಂದಲೇ ಸ್ಪರ್ಧೆ ಕಠಿಣವಾಗಿತ್ತು. ತೆಲಂಗಾಣ ಮತ್ತು ಮಹಾರಾಷ್ಟ್ರದ ಸ್ಪರ್ಧಿಗಳು ತುಂಬಾ ಬಲಿಷ್ಠರಾಗಿದ್ದರು.

*ನಾಲ್ಕು ವಯೋಮಿತಿಯಲ್ಲಿ ಆಡುತ್ತೀರಿ. ಎಲ್ಲಾ ವಿಭಾಗಗಳಲ್ಲೂ ಸ್ಥಿರ ಸಾಮರ್ಥ್ಯ ತೋರುವುದು ಕಷ್ಟವಲ್ಲವೇ?

ಎಳೆಯ ವಯಸ್ಸಿನಿಂದಲೇ ಟೇಬಲ್‌ ಟೆನಿಸ್‌ ಬಗ್ಗೆ ವಿಶೇಷ ಪ್ರೀತಿ ಬೆಳೆಸಿಕೊಂಡಿದ್ದೇನೆ. ಮೊದಲು 15, 18, 21 ವರ್ಷದೊಳಗಿನವರು ಮತ್ತು ಮಹಿಳಾ ವಿಭಾಗಗಳಲ್ಲಿ ಆಡುತ್ತಿದ್ದೆ. ನಾಲ್ಕೂ ವಿಭಾಗಗಳಲ್ಲಿ ಪೈಪೋಟಿ ನಡೆಸುವುದು ನಿಜಕ್ಕೂ ಸವಾಲಿನದ್ದಾಗಿತ್ತು. ಹೆಚ್ಚೆಚ್ಚು ಪಂದ್ಯಗಳನ್ನು ಆಡಬೇಕಿದ್ದರಿಂದ ಸಾಕಷ್ಟು ದಣಿವಾಗುತ್ತಿತ್ತು. ಕ್ರಮೇಣ ಇದಕ್ಕೆ ಹೊಂದಿಕೊಂಡೆ. ಈಗ ಜೂನಿಯರ್‌ ಹಂತ ಮುಗಿದಿದೆ. ಈ ವರ್ಷದಿಂದ ಸೀನಿಯರ್‌ ವಿಭಾಗದಲ್ಲಿ ಮಾತ್ರ ಆಡುತ್ತೇನೆ.

*ಟೂರ್ನಿಯೊಂದರಲ್ಲಿ ಸಿಂಗಲ್ಸ್‌, ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗಗಳಲ್ಲಿ ಒಂದಾದ ನಂತರ ಒಂದು ಪಂದ್ಯ ಆಡುವುದಕ್ಕೆ ಕಷ್ಟವಾಗುವುದಿಲ್ಲವೇ?

ಒಂದೇ ಟೂರ್ನಿಗಳಲ್ಲಿ ಒಂದಾದ ನಂತರ ಒಂದು ಪಂದ್ಯಗಳನ್ನು ಆಡುವುದು ನಿಜಕ್ಕೂ ಕಷ್ಟವೇ. ಕೆಲವೊಂದು ಟೂರ್ನಿಗಳಲ್ಲಿ ಎರಡು ಸಿಂಗಲ್ಸ್‌ ಪಂದ್ಯಗಳನ್ನು ಆಡಿದ ನಂತರ ಡಬಲ್ಸ್‌ ಅಥವಾ ಮಿಶ್ರ ಡಬಲ್ಸ್‌ನಲ್ಲಿ ಸ್ಪರ್ಧಿಸಲು ಅನುವಾಗುವ ರೀತಿ ವೇಳಾಪಟ್ಟಿ ಸಿದ್ಧಪಡಿಸಲಾಗಿರುತ್ತದೆ. ಒಂದೇ ವಿಭಾಗದಲ್ಲಿ ಸತತವಾಗಿ ಪಂದ್ಯಗಳನ್ನು ಆಡಿದರೆ ಸಹಜವಾಗಿಯೇ ಬೇಸರವಾಗುತ್ತದೆ. ಎರಡು ಸಿಂಗಲ್ಸ್‌ ಪಂದ್ಯಗಳ ನಂತರ ಡಬಲ್ಸ್‌ ಇಲ್ಲವೇ ಮಿಶ್ರ ಡಬಲ್ಸ್ ಆಡುವುದರಿಂದ ಮನಸು ಹಗುರವಾಗುತ್ತದೆ. ಕಷ್ಟ ಅಂದುಕೊಂಡರೆ ಏನನ್ನೂ ಸಾಧಿಸಲಾಗದು.

*ಮಣಿಕಾ ಬಾತ್ರಾ ಅವರೊಂದಿಗೆ ಡಬಲ್ಸ್‌ ವಿಭಾಗದಲ್ಲಿ ಆಡಿದ್ದೀರಿ. ಆ ಅನುಭವ ಹೇಗಿತ್ತು?

ಮಣಿಕಾ ಬಾತ್ರಾ, ಭಾರತದ ಶ್ರೇಷ್ಠ ಆಟಗಾರ್ತಿಯರಲ್ಲಿ ಒಬ್ಬರು. ಬೆಲ್ಜಿಯಂ, ಆಸ್ಟ್ರೇಲಿಯಾ ಮತ್ತು ಸ್ವೀಡನ್‌ ಓಪನ್‌ ಟೂರ್ನಿಗಳಲ್ಲಿ ಅವರೊಂದಿಗೆ ಆಡುವ ಅವಕಾಶ ಸಿಕ್ಕಿದ್ದೇ ಅದೃಷ್ಟ. ಅವರು ಒಲಿಂಪಿಕ್ಸ್‌ನಲ್ಲಿ ಆಡಿ ಹೆಜ್ಜೆ ಗುರುತು ಮೂಡಿಸಿದ್ದಾರೆ. ಹೀಗಿದ್ದರೂ ಅವರಲ್ಲಿ ಕೊಂಚವೂ ಅಹಂ ಇಲ್ಲ. ಆರಂಭದಲ್ಲಿ ಅವರೊಂದಿಗೆ ಮಾತನಾಡಲು ಭಯ ಪಡುತ್ತಿದ್ದೆ. ಪಂದ್ಯದ ಸಂದರ್ಭಗಳಲ್ಲಿ ಅಗತ್ಯ ಸಲಹೆಗಳನ್ನು ನೀಡುತ್ತಿದ್ದರು. ಪ್ರತಿ ಹಂತದಲ್ಲೂ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದರು.

*ಕ್ರೀಡೆ ಮತ್ತು ಓದು. ಎರಡನ್ನೂ ಹೇಗೆ ಸರಿದೂಗಿಸುತ್ತೀರಿ?

ಈ ಹಿಂದೆ ಓದಿದ ಪೂರ್ಣಪ್ರಜ್ಞ ಶಾಲೆ ಮತ್ತು ಈಗ ವ್ಯಾಸಂಗ ಮಾಡುತ್ತಿರುವ ಜೈನ್‌ ವಿಶ್ವವಿದ್ಯಾಲಯದ ಶಿಕ್ಷಕರು, ಅಧ್ಯಾಪಕರು ಮತ್ತು ಆಡಳಿತ ಮಂಡಳಿಯವರು ಎಲ್ಲಾ ಬಗೆಯ ಸಹಕಾರ ಮತ್ತು ಬೆಂಬಲ ನೀಡಿದ್ದಾರೆ. ಹೀಗಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಒಂಬತ್ತನೇ ರ‍್ಯಾಂಕ್‌ ಪಡೆಯಲು ಸಾಧ್ಯವಾಯಿತು. ಪಿಯುಸಿಯಲ್ಲಿ ಎರಡು ವರ್ಷವೂ ಶೇಕಡ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುವಂತಾಯಿತು. ಅಮ್ಮನ ಸಹಕಾರವನ್ನೂ ಮರೆಯುವಂತಿಲ್ಲ. ನನ್ನ ಪಠ್ಯಪುಸ್ತಕಗಳನ್ನು ಅವರೇ ಹೆಚ್ಚು ಓದುತ್ತಿದ್ದರು. ಹಾಗೆ ಓದಿದ್ದನ್ನು ಪರೀಕ್ಷೆಯ ಹಿಂದಿನ ದಿನ ನನಗೆ ವಿವರಿಸಿ ಹೇಳುತ್ತಿದ್ದರು.

*ಹಲವು ಪಂದ್ಯಗಳಲ್ಲಿ ನಿಮಗಿಂತಲೂ ಹಿರಿಯರು ಮತ್ತು ಅನುಭವಿ ಆಟಗಾರ್ತಿಯರ ಎದುರು ಆಡಿದ್ದೀರಿ. ಆಗೆಲ್ಲಾ ಭಯ ಪಟ್ಟಿದ್ದಿದೆಯೇ?

ಖಂಡಿತವಾಗಿಯೂ ಇಲ್ಲ. ಹಿರಿಯ ಆಟಗಾರ್ತಿಯರ ವಿರುದ್ಧ ಆಡುವಾಗ ನನಗಿಂತಲೂ ಹೆಚ್ಚು ಒತ್ತಡ ಅವರ ಮೇಲಿರುತ್ತದೆ. ಅನುಭವಿಗಳ ಎದುರು ಸೆಣಸು
ವುದರಿಂದ ಹೊಸ ವಿಷಯಗಳನ್ನು ಕಲಿಯಬಹುದು. ಇದರಿಂದ ಮನೋಬಲವೂ ಹೆಚ್ಚುತ್ತದೆ.

*ನಿಮ್ಮ ಅಭ್ಯಾಸ ಕ್ರಮ ಹೇಗಿರುತ್ತದೆ?

ಮುಂಜಾನೆ 5.30ಕ್ಕೆ ಏಳುತ್ತೇನೆ. ನಂತರ ಅಭ್ಯಾಸಕ್ಕೆ ಹೋಗುತ್ತೇನೆ. ಎರಡರಿಂದ ಮೂರು ಗಂಟೆ ತಾಲೀಮು ನಡೆಸುತ್ತೇನೆ. ಸಂಜೆಯೂ ಎರಡರಿಂದ ಮೂರು ಗಂಟೆ ಅಭ್ಯಾಸ ಮಾಡುತ್ತೇನೆ. ಫಿಟ್‌ ಆಗಿರಲು ಜಿಮ್‌ನಲ್ಲಿ ಹೆಚ್ಚು ಕಸರತ್ತು ಮಾಡುತ್ತೇನೆ. ಜೊತೆಗೆ ಸ್ಟ್ರೆಂಥನಿಂಗ್ ವ್ಯಾಯಾಮಗಳನ್ನು ಮಾಡುತ್ತೇನೆ.

*ಹೋದ ವರ್ಷ ಯೂತ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಿರಿ. ಆ ಅನುಭವದ ಬಗ್ಗೆ ತಿಳಿಸಿ?

ಕೂಟದಲ್ಲಿ ಪದಕ ಜಯಿಸುವ ನಿರೀಕ್ಷೆ ಇರಲಿಲ್ಲ. ಅಲ್ಲಿ ವಿಶ್ವದ ಬಲಿಷ್ಠ ಆಟಗಾರ್ತಿಯರು ಭಾಗವಹಿಸಿದ್ದರು. ಅವರ ಸವಾಲುಗಳನ್ನು ಮೀರಿನಿಂತು ಸೆಮಿಫೈನಲ್‌ ಪ್ರವೇಶಿಸಿದ್ದು ಹೆಮ್ಮೆಯ ವಿಷಯ. ರುಮೇನಿಯಾದ ಆ್ಯಂಡ್ರಿಯಾ ಡ್ರಾಗೋಮನ್‌ ಎದುರಿನ ಕಂಚಿನ ಪದಕದ ‘ಪ್ಲೇ ಆಫ್‌’ನಲ್ಲಿ ಪರಿಣಾಮಕಾರಿ ಸಾಮರ್ಥ್ಯ ಮೂಡಿಬರದಿದ್ದಾಗ ತುಂಬಾ ಬೇಸರವಾಗಿತ್ತು. ನಾಲ್ಕನೇ ಸ್ಥಾನ ಗಳಿಸಿದ್ದು ಕಡಿಮೆ ಸಾಧನೆಯೇನಲ್ಲ.

*ನಿಮ್ಮ ಪಾಲಿನ ಅವಿಸ್ಮರಣೀಯ ಗೆಲುವು?

ಯೂತ್‌ ಒಲಿಂಪಿಕ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಅಜರ್‌ ಬೈಜಾನ್‌ನ ನಿಗನ್‌ ಜಿಂಗ್‌ ಅವರನ್ನು ಮಣಿಸಿದ್ದೆ. ಆ ಗೆಲುವು ಎಂದಿಗೂ ಮರೆಯಲಾರದಂತಹುದು.

*ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಯಾವ ದೇಶದ ಸ್ಪರ್ಧಿಗಳಿಂದ ಕಠಿಣ ಸವಾಲು ಎದುರಾಗುತ್ತದೆ?

ಚೀನಾ, ದಕ್ಷಿಣ ಕೊರಿಯಾ ಮತ್ತು ಜಪಾನ್‌ ಈ ಕ್ರೀಡೆಯ ಶಕ್ತಿ ಕೇಂದ್ರಗಳಾಗಿವೆ. ಈ ದೇಶದ ಸ್ಪರ್ಧಿಗಳನ್ನು ಮಣಿಸುವುದು ಸವಾಲೇ ಸರಿ.

*ಮುಂದಿನ ಟೂರ್ನಿಗಳ ಬಗ್ಗೆ ಹೇಳಿ?

ಈ ತಿಂಗಳ 15ರಿಂದ 20ರವರೆಗೆ ಹಂಗರಿ ಸೀನಿಯರ್‌ ಓಪನ್‌ ಟೂರ್ನಿ ನಡೆಯಲಿದೆ. ಅದಾದ ಬಳಿಕ ಫೆಬ್ರುವರಿಯಲ್ಲಿ ಪೋರ್ಚುಗಲ್‌ ಓಪನ್‌ ಜರುಗಲಿದೆ. ಇವುಗಳಲ್ಲಿ ಪ್ರಶಸ್ತಿ ಜಯಿಸುವ ಗುರಿ ಇಟ್ಟುಕೊಂಡಿದ್ದೇನೆ.

*ನಿಮ್ಮ ಜೀವನದ ಗುರಿ?

ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಪದಕ ಜಯಿಸಬೇಕೆಂಬ ಮಹದಾಸೆ ಇದೆ. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಸಾಗುತ್ತಿದ್ದೇನೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿ ರ‍್ಯಾಂಕಿಂಗ್‌ ಉತ್ತಮ ಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

*ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ನಿಮಗೆ ಪ್ರೇರಣೆ. ಅವರಿಂದ ನೀವು ಕಲಿತಿದ್ದೇನು?

ಕಠಿಣ ಪರಿಶ್ರಮ ಮತ್ತು ಅರ್ಪಣಾ ಭಾವದಿಂದ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಸೈನಾ ಅವರಿಂದ ಕಲಿತಿದ್ದೇನೆ. ಎಂತಹುದೇ ಸಂದರ್ಭದಲ್ಲೂ ಅವರು ಸುಲಭವಾಗಿ ಸೋಲೊಪ್ಪಿಕೊಳ್ಳುವುದಿಲ್ಲ. ಅವರ ಆ ಹೋರಾಟದ ಗುಣ ನನ್ನನ್ನು ಪ್ರಭಾವಿಸಿದೆ.

*ಭಾರತ ಮತ್ತು ಕರ್ನಾಟಕದಲ್ಲಿ ಟೇಬಲ್‌ ಟೆನಿಸ್‌ ಅಭಿವೃದ್ಧಿಗೆ ಪೂರಕ ವಾತಾವರಣ ಇದೆಯೇ?

ಹತ್ತು ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಈಗ ಸಾಕಷ್ಟು ಬದಲಾವಣೆಗಳಾಗಿವೆ. ಕ್ರೀಡಾ ಸಚಿವಾಲಯ, ಭಾರತ ಟೇಬಲ್‌ ಟೆನಿಸ್‌ ಫೆಡರೇಷನ್‌ ಮತ್ತು ಭಾರತ ಕ್ರೀಡಾ ಪ್ರಾಧಿಕಾರದಿಂದ ತುಂಬಾ ಪ್ರೋತ್ಸಾಹ ಸಿಗುತ್ತಿದೆ.

*ಅಲ್ಟಿಮೇಟ್‌ ಟೇಬಲ್‌ ಟೆನಿಸ್‌ ಲೀಗ್‌ನಿಂದ ನೀವು ಕಲಿತಿದ್ದೇನು. ಇದರಿಂದ ಭಾರತದ ಸ್ಪರ್ಧಿಗಳಿಗೆ ಏನು ಲಾಭ?

ಈ ಲೀಗ್‌ನಲ್ಲಿ ವಿಶ್ವ ಶ್ರೇಷ್ಠ ಕ್ರೀಡಾಪಟುಗಳು ಭಾಗವಹಿಸುತ್ತಾರೆ. ತಂಡವೊಂದರಲ್ಲಿ ವಿದೇಶಿ ಮತ್ತು ಭಾರತದ ಅನುಭವಿ ಆಟಗಾರರು ಇರುತ್ತಾರೆ. ಅವರಿಂದ ಹೊಸ ವಿಷಯಗಳನ್ನು ಕಲಿಯಬಹುದು.

ವಿದೇಶಿ ಆಟಗಾರರ ಅಭ್ಯಾಸ ಮತ್ತು ಆಹಾರ ಕ್ರಮ, ಪಂದ್ಯಕ್ಕೂ ಮುನ್ನ ಸಜ್ಜಾಗುವ ಬಗೆ. ಒತ್ತಡದ ಸನ್ನಿವೇಶವನ್ನು ಮೀರಿನಿಂತು ಪಂದ್ಯ ಗೆಲ್ಲುವ ಕಲೆ, ಹೀಗೆ ಹಲವು ವಿಷಯಗಳನ್ನು ಅರಿತುಕೊಳ್ಳಲು ಭಾರತದವರಿಗೆ ಈ ಲೀಗ್‌ ಸಹಕಾರಿಯಾಗಿದೆ. ವಿದೇಶಿ ಕೋಚ್‌ಗಳಿಂದ ಅಮೂಲ್ಯ ಸಲಹೆಗಳು ಸಿಗುತ್ತವೆ. ಈ ಲೀಗ್‌ನಲ್ಲಿ ಮೂರು ಬಾರಿ ಆಡಿದ್ದೇನೆ. ಇದರಿಂದ ನನ್ನ ಆಟದಲ್ಲೂ ಸಾಕಷ್ಟು ಸುಧಾರಣೆಯಾಗಿದೆ. ತಂಡ ಸ್ಫೂರ್ತಿಯನ್ನೂ ಮೈಗೂಡಿಸಿಕೊಂಡಿದ್ದೇನೆ.

ಅರ್ಚನಾ ಮಹತ್ವದ ಮೈಲುಗಲ್ಲುಗಳು

l ವಿಶ್ವ ಜೂನಿಯರ್‌ ಸರ್ಕ್ಯೂಟ್‌ ಫೈನಲ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಭಾರತದ ಏಕೈಕ ಆಟಗಾರ್ತಿ.

l ರಾಷ್ಟ್ರೀಯ ಯೂತ್‌ ಬಾಲಕಿಯರ 21 ವರ್ಷದೊಳಗಿನವರ ವಿಭಾಗದ ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ್ತಿ.

l ಐಟಿಟಿಎಫ್‌ ವಿಶ್ವ ಕೆಡೆಟ್‌ ಚಾಲೆಂಜ್‌ನಲ್ಲಿ (2014) ಏಷ್ಯಾ ತಂಡವನ್ನು ಪ್ರತಿನಿಧಿಸಿದ ಭಾರತದ ಏಕೈಕ ಆಟಗಾರ್ತಿ.

l ವಿಶ್ವ ಕೆಡೆಟ್‌ ಚಾಲೆಂಜ್‌ ಟೂರ್ನಿಯಲ್ಲಿ ಐಟಿಟಿಎಫ್‌ ಫೇರ್‌ ಪ್ಲೇ ಪ್ರಶಸ್ತಿ ಜಯಿಸಿದ ಹಿರಿಮೆ.

l ಯೂತ್‌ ಒಲಿಂಪಿಕ್ಸ್‌ನ ಸಿಂಗಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಭಾರತದ ಮೊದಲ ಆಟಗಾರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT