ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ತಡೆಗೆ ಆದ್ಯತೆ: ಬಿನ್ನಿ

Last Updated 28 ಸೆಪ್ಟೆಂಬರ್ 2019, 20:29 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಕ್ರಿಕೆಟ್ ಸಂಸ್ಥೆಯ ಆಡಳಿತದ ಚುಕ್ಕಾಣಿ ಹಿಡಿಯಲು ಸಿದ್ಧವಾಗಿರುವ ಹಿರಿಯ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಪರವಾದ ಬಣವು ಸೋಮವಾರ ನಾಮಪತ್ರ ಸಲ್ಲಿಸಲಿದೆ.

ಶನಿವಾರ ಬೆಳಿಗ್ಗೆ ಕೆಎಸ್‌ಸಿಎಯಲ್ಲಿ ಚುನಾವಣೆ ಸಿದ್ಧತೆಯಲ್ಲಿ ನಿರತ ರಾಗಿದ್ದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ, ಹಿರಿಯ ಕ್ರಿಕೆಟಿಗ ರೋಜರ್ ಮೈಕಲ್ ಹ್ಯಾಂಪ್ರಿ ಬಿನ್ನಿ ಸುದ್ದಿಗಾರರೊಂದಿಗೆ ಮಾತನಾಡಿದರು.

* ಕೆಎಸ್‌ಸಿಎ ಆಡಳಿತದ ಚುಕ್ಕಾಣಿ ಹಿಡಿಯಲು ಸಿದ್ಧರಾಗಿದ್ದೀರಿ. ಇದಕ್ಕೆ ಕಾರಣವೇನು?

– ನಾನು ಯಾವಾಗಲೂ ಕ್ರಿಕೆಟ್‌ನ ನಂಟು ಬಿಟ್ಟಿಲ್ಲ. ಆಟದಿಂದ ನಿವೃತ್ತ ನಾದ ನಂತರವೂ ಕ್ರಿಕೆಟ್ ಸಂಬಂಧಿತ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೇನೆ. ಆಯ್ಕೆ ಸಮಿ ತಿಯೂ ಸೇರಿದಂತೆ ವಿವಿಧ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ನಾನಿವತ್ತು ಏನೇ ಇದ್ದರೂ ಕ್ರಿಕೆಟಿನಿಂದಾಗಿಯೇ ಇದ್ದೇನೆ. ಆದ್ದರಿಂದ ಈ ಕ್ರೀಡೆಗೆ ಸ್ವಲ್ವ ವಾದರೂ ಕಾಣಿಕೆ ನೀಡುವುದು ನನ್ನ ಕರ್ತವ್ಯ. ಇದು ನನ್ನ ತವರು ರಾಜ್ಯ. ಇಲ್ಲಿಯ ಕ್ರಿಕೆಟ್‌ ಸಂಸ್ಥೆಗಾಗಿ ಕಾರ್ಯನಿರ್ವಹಿಸುವುದು ಹೆಮ್ಮೆ.

* ಕೆಎಸ್‌ಸಿಎ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೀರಿ. ಈ ನಿರ್ಧಾರ ಮಾಡುವುದು ನಿಮಗೆ ಕಠಿಣವಾಯಿತೇ?

– ಅಂತಹ ಕಠಿಣವೇನಾಗಲಿಲ್ಲ. ಈ ಹಿಂದೆ ಆಡಳಿತ ಸಮಿತಿಯ ಸದಸ್ಯರು ಚುನಾವಣೆಗೆ ಸ್ಪರ್ಧಿಸಲು ಅರ್ಹರಲ್ಲ ಎಂದು ಹೇಳಲಾಗಿತ್ತು.ಆರು ತಿಂಗಳ ನಂತರ ನಿರ್ಧಾರ ಬದಲಿಸಿದರು. ಆಡಳಿತ ಸಮಿತಿ ಸದಸ್ಯರು ಪದಾಧಿ ಕಾರಿಗಳ ಸ್ಥಾನಗಳಿಗಾಗಿ ಸ್ಪರ್ಧಿಸಬಹುದು ಎಂದು ಸೂಚಿಸಿದರು. ಆಗಲೇ ನಾನು ಈ ಬಾರಿ ಸ್ಪರ್ಧಿಸಲು ನಿರ್ಧರಿಸಿದೆ. 1999ರಲ್ಲಿ ಕ್ರಿಕೆಟ್‌ ಆಟಗಾರರೇ ಆಡಳಿತಕ್ಕೆ ಬರಲು ಆರಂಭಿಸಿದಾಗಿನಿಂದಲೂ ನಾವೆಲ್ಲ ಒಂದು ತಂಡದಲ್ಲಿದ್ದೇವೆ. ಈಗಲೂ ಅದು ಮುಂದುವರಿದಿದೆ.

* ನಿಮ್ಮ ಚುನಾವಣೆ ಭರವಸೆಗಳಲ್ಲಿ ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ನಿಯಂತ್ರಣ ಕುರಿತು ಏನಾದರೂ ಯೋಜನೆ ಇದೆಯೇ?
ಖಂಡಿತ ಇದೆ. ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ (ಬೆಟ್ಟಿಂಗ್, ಫಿಕ್ಡಿಂಗ್ ಇತ್ಯಾದಿ) ನಡೆಯುತ್ತಿರುವುದು ಒಳ್ಳೆಯದಲ್ಲ. ಯಾವುದೇ ಆಟಗಾರನ ಮೇಲೆ ಆರೋಪ ಬಂದರೂ ಅದು ಕೆಎಸ್‌ಸಿಎ ಹೆಸರಿಗೂ ಕುಂದು ತರುತ್ತದೆ. ಈ ಹಿಂದೆ ರಾಷ್ಟ್ರೀಯ ಮಟ್ಟದಲ್ಲಿಯೂ ಇಂತಹ ಘಟನೆಗಳು ನಡೆದಿವೆ. ಇದೀಗ ಕರ್ನಾಟಕದಲ್ಲಿಯೂ ಆಗಿದೆ. ಇದು ಆಂತಕಕಾರಿ ಬೆಳವಣಿಗೆ. ಮಟ್ಟ ಹಾಕಲು ಕ್ರಮ ಕೈಗೊಳ್ಳುತ್ತೇವೆ.

* ಹೊಸ ನಿಯಮಾವಳಿ ಮತ್ತಿ ತರರ ಬದಲಾವಣೆಗಳು ಆಗಿವೆ. ಇಂತಹ ಸಂದರ್ಭದಲ್ಲಿ ಆಡಳಿತ ನಡೆಸುವುದು ಕಠಿಣವಲ್ಲವೇ?

ಯಾವಾಗಲೂ ಪರಿಸ್ಥಿತಿಗಳು ವಿಭಿನ್ನವಾಗಿಯೇ ಇರುತ್ತವೆ. ನಾನು ಆಡುವ ದಿನಗಳು ಮತ್ತು ಕೋಚಿಂಗ್ ಮಾಡುತ್ತಿದ್ದ ದಿನಗಳಿಂದ ಇಲ್ಲಿಯವರೆಗೆ ಬಹಳಷ್ಟು ಬದಲಾವಣೆಗಳಾಗಿವೆ. ಕಷ್ಟದ ದಿನಗಳು ಒಳ್ಳೆಯದಿನಗಳನ್ನು ಅನುಭವಿಸಿದ್ದೇವೆ. ಕರ್ನಾಟಕದ ಕ್ರಿಕೆಟ್‌ ಯಾವಾಗಲೂ ಉತ್ತಮ ಹೆಸರು ಮತ್ತು ಗೌರವ ಹೊಂದಿದೆ. ಇದನ್ನು ಜನರೇ ಹೇಳುತ್ತಾರೆ. ಆ ಹೆಸರನ್ನು ಕಾಪಾಡಿಕೊಂಡು ಹೋಗಲು ಕೆಲಸ ಮಾಡುವುದಷ್ಟೇ ನಮ್ಮ ಕರ್ತವ್ಯ.

* ಗಾಲ್ಫ್, ವನ್ಯಜೀವಿ ಸಂರಕ್ಷಣಾ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿಯ ಬಗ್ಗೆ ಹೇಳಿ.

ಹೌದು. ಗಾಲ್ಫ್, ವನ್ಯಜೀವಿ ಛಾಯಾಗ್ರಹಣದಲ್ಲಿ ಆಸಕ್ತಿ ಇದೆ ನಿಜ. ಆದರೆ ಕ್ರಿಕೆಟ್‌ಗೆ ನನ್ನ ಮೊದಲ ಆದ್ಯತೆ. ಕ್ರಿಕೆಟ್‌ನಿಂದ ಬಿಡುವು ಸಿಕ್ಕಾಗ ಹವ್ಯಾಸಗಳಿಂದ ಮನೋಲ್ಲಾಸ ಪಡೆಯುತ್ತೇನೆ.

ಸಲ್ಲಿಕೆಯಾಗದ ನಾಮಪತ್ರ

ಕೆಎಸ್‌ಸಿಎ ಚುನಾವಣೆಗೆ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಬ್ರಿಜೇಶ್ ಪಟೇಲ್ ಬೆಂಬಲಿತ ಬಣವು ಶನಿವಾರ ನಾಮಪತ್ರ ಸಲ್ಲಿಸುವ ನಿರೀಕ್ಷೆ ಇತ್ತು. ಆದರೆ, ಮಹಾಲಯ ಅಮಾವಾಸ್ಯೆಯ ಕಾರಣ ಸೋಮವಾರಕ್ಕೆ ಮುಂದೂಡಲಾಯಿತು ಎಂದು ಹೇಳಲಾಗಿದೆ.

ಕಣಕ್ಕೆ ಸದಾನಂದ ವಿಶ್ವನಾಥ್: ಆಡಳಿತ ಸಮಿತಿಯ ಸದಸ್ಯ ಸ್ಥಾನಕ್ಕಾಗಿ ಹಿರಿಯ ಕ್ರಿಕೆಟಿಗ ಸದಾನಂದ್ ವಿಶ್ವನಾಥ್ ಸ್ಪರ್ಧಿಸಲಿದ್ದಾರೆ. ‘ಕ್ರಿಕೆಟಿಗನಾಗಿ, ಅಂಪೈರ್ ಮತ್ತು ಕೋಚ್ ಆಗಿ ಕಾರ್ಯನಿರ್ವಹಿಸಿದ್ದೇನೆ. ಆಡಳಿತದಲ್ಲಿದ್ದು ಸೇವೆ ಸಲ್ಲಿಸಲು ಆಸಕ್ತನಾಗಿದ್ದೇನೆ’ ಎಂದು ಸದಾನಂದ ‘ಪ್ರಜಾವಾಣಿ’ಗೆ ತಿಳಿಸಿದ್ಧಾರೆ.

ಬಿನ್ನಿ ತಂಡಕ್ಕೆ ಸ್ವಚ್ಛ ಕ್ರಿಕೆಟ್ ಸವಾಲು: ಕ್ಯಾಪ್ಟನ್ ಎಂ.ಎಂ. ಹರೀಶ್ ಮುಂದಾ ಳತ್ವದ ಸ್ವಚ್ಛ್ ಕ್ರಿಕೆಟ್ ಬಣವು ಕೆಎಸ್‌ಸಿಎ ಚುನಾವಣೆ ಕಣಕ್ಕೆ ಇಳಿಯಲಿದೆ. ಬ್ರಿಜೇಶ್ ಪಟೇಲ್ ಬೆಂಬಲಿತ ಬಣಕ್ಕೆ ಸವಾಲು ಒಡ್ಡಲಿದೆ. ಈ ಕುರಿತು ಶನಿವಾರ ತಮ್ಮ ಬಣದ ಪ್ರತಿನಿಧಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ತಂಡ: ಕ್ಯಾಪ್ಟನ್ ಎಂ.ಎಂ. ಹರೀಶ್ (ಅಧ್ಯಕ್ಷ), ಕೆ.ಎಸ್. ರಘುರಾಮ್ (ಕಾರ್ಯದರ್ಶಿ), ಜೋಸೆಫ್ ಹೂವರ್ (ಜಂಟಿ ಕಾರ್ಯದರ್ಶಿ), ಬಿ.ಎನ್. ಮಧುಕರ್ (ಖಜಾಂಚಿ), ವಿ.ಎಂ. ಮಂಜುನಾಥ್, ಶ್ರೀಪತಿ ರಾವ್ (ಆಜೀವ ಸದಸ್ಯರು), ಯಂಗ್ ಕ್ರಿಕೆಟರ್ಸ್, ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್, ಮಲ್ಲೇಶ್ವರಂ ಯುನೈಟೆಡ್ ಸಿಸಿ (ಸಂಸ್ಥೆಗಳು). ವಲಯಗಳು: ರಾಯಚೂರು (ಕುಶಾಲ್ ಪಾಟೀಲ, ಗಜಾನನ ಸಿಸಿ), ಮಂಗಳೂರು (ಡಾ.ಶ್ರೀಕಾಂತ್ ರೈ, ದ.ಕ.ಸಿಎ). ಧಾರವಾಡ(ಗೋಕಾಕ್ ಸಿಸಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT