ಬುಧವಾರ, ಜುಲೈ 28, 2021
28 °C
ಭಾರತ ಜೂನಿಯರ್‌ ಮಹಿಳಾ ಹಾಕಿ ತಂಡದ ನಾಯಕಿ ಸುಮನ್‌ ದೇವಿ ಅಭಿಪ್ರಾಯ

ವಿಶ್ವಕಪ್‌ ಅರ್ಹತೆಯ ಕನಸಿಗೆ ಲಾಕ್‌ಡೌನ್‌ ಅಡ್ಡಿ

ಪಿಟಿಐ Updated:

ಅಕ್ಷರ ಗಾತ್ರ : | |

ಇಂಫಾಲ: ‘ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಎಫ್‌ಐಎಚ್ ಮಹಿಳಾ ಹಾಕಿ‌ ವಿಶ್ವಕಪ್‌ಗೆ ಅರ್ಹತೆ ಗಳಿಸುವ ನಮ್ಮ ಕನಸಿಗೆ ಕೋವಿಡ್‌–19 ಹಾಗೂ ಲಾಕ್‌ಡೌನ್‌ ಅಡ್ಡಿಯಾದವು’ ಎಂದು ಭಾರತ ಜೂನಿಯರ್‌ ಹಾಕಿ ತಂಡದ ನಾಯಕಿ ಸುಮನ್‌ ದೇವಿ ಥೌದಮ್‌ ಗುರುವಾರ ಹೇಳಿದ್ದಾರೆ.

ಇದೇ ವರ್ಷದ ‌ಏಪ್ರಿಲ್‌ 6ರಿಂದ ಜಪಾನ್‌ನ ಕಾಕಾಮಿಗಹರದಲ್ಲಿ ನಡೆಯಬೇಕಿದ್ದ ಜೂನಿಯರ್‌ ಏಷ್ಯಾಕಪ್‌ ಟೂರ್ನಿಯನ್ನು ಕೊರೊನಾ ಬಿಕ್ಕಟ್ಟಿನ ಕಾರಣ ರದ್ದು ಮಾಡಲಾಗಿತ್ತು. ಈ ಟೂರ್ನಿಯಲ್ಲಿ ಆಡಿ ಪ್ರಶಸ್ತಿ ಗೆದ್ದಿದ್ದರೆ ಭಾರತಕ್ಕೆ ವಿಶ್ವಕಪ್‌ ‘ಟಿಕೆಟ್‌’ ಲಭಿಸುತ್ತಿತ್ತು.

‘ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಗೆದ್ದು ವಿಶ್ವಕಪ್‌ಗೆ ನೇರ ಅರ್ಹತೆ ಗಳಿಸುವ ಗುರಿ ಹೊಂದಿದ್ದೆವು. ಇದನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್‌ ಮೊದಲ ವಾರದಿಂದಲೇ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದೆವು. ಅಷ್ಟರಲ್ಲೇ ಕೊರೊನಾ ವೈರಾಣುವಿನ ಬಿಕ್ಕಟ್ಟು ಸೃಷ್ಟಿಯಾಯಿತು. ಕೊರೊನಾಕ್ಕೆ ಕಡಿವಾಣ ಹಾಕಲು ಲಾಕ್‌ಡೌನ್‌ ಜಾರಿಗೊಳಿಸಲಾಯಿತು. ಹೀಗಾಗಿ ನಾವು ಅಭ್ಯಾಸದಿಂದ ದೂರ ಉಳಿಯಬೇಕಾಯಿತು’ ಎಂದು ಸುಮನ್‌ ಹೇಳಿದ್ದಾರೆ.

‘ಹೋದ ವರ್ಷ ನಡೆದಿದ್ದ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದೆವು. ಹೀಗಾಗಿ ಏಷ್ಯಾಕಪ್‌ನಲ್ಲಿ ಪರಿಣಾಮಕಾರಿಯಾಗಿ ಆಡುವ ವಿಶ್ವಾಸ ಹೊಂದಿದ್ದೆವು. ಎಲ್ಲರೂ ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಕಠಿಣ ತಾಲೀಮು ನಡೆಸಿದ್ದೆವು. ಮಾರ್ಚ್‌ 19ಕ್ಕೆ ಶಿಬಿರ ಮುಕ್ತಾಯವಾದ ಬಳಿಕ ಎಲ್ಲಾ ಆಟಗಾರ್ತಿಯರೂ ಮನೆಗೆ ಹೋದರು. ಆದರೆ ನಾನು ಸಾಯ್‌ ಕೇಂದ್ರದಲ್ಲೇ ಉಳಿಯಲು ತೀರ್ಮಾನಿಸಿದ್ದೆ. ಅಲ್ಲೇ ಎರಡೂವರೆ ತಿಂಗಳು ಇದ್ದೆ’ ಎಂದಿದ್ದಾರೆ.

‘ಸಾಯ್‌ ಕೇಂದ್ರದಲ್ಲಿ ಸೀನಿಯರ್‌ ತಂಡದ ಸದಸ್ಯರೂ ಇದ್ದರು. ಅವರು ನನಗೆ ಅಪಾರ ಬೆಂಬಲ ನೀಡಿದರು. ತಂಡದ ವೈಜ್ಞಾನಿಕ ಸಲಹೆಗಾರ ವೇಯ್ನ್‌ ಲ್ಯಾಂಬರ್ಡ್ ಅವರ ಮಾರ್ಗದರ್ಶನದಲ್ಲಿ ‌ಒಳಾಂಗಣದಲ್ಲೇ ಸ್ಟ್ರೆಂಥನಿಂಗ್‌ ವ್ಯಾಯಾಮಗಳನ್ನು ಮಾಡಿ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಪ್ರಯತ್ನಿಸಿದೆ’ ಎಂದೂ ಅವರು ನುಡಿದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು