ಮಂಗಳೂರು ವಿ.ವಿ. ತಂಡಕ್ಕೆ ದಾಖಲೆಯ ಪ್ರಶಸ್ತಿ

7
ಅಖಿಲ ಭಾರತ ಅಂತರ ವಾರ್ಸಿಟಿ ಮಹಿಳಾ ಬಾಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌

ಮಂಗಳೂರು ವಿ.ವಿ. ತಂಡಕ್ಕೆ ದಾಖಲೆಯ ಪ್ರಶಸ್ತಿ

Published:
Updated:

ಬೆಂಗಳೂರು: ಅಪೂರ್ವ ಸಾಮರ್ಥ್ಯ ತೋರಿದ ಮಂಗಳೂರು ವಿಶ್ವವಿದ್ಯಾಲಯ ತಂಡದವರು ಆಂಧ್ರಪ್ರದೇಶದ ಮಚಲಿಪಟ್ಟಣದ ಕೃಷ್ಣಾ ವಿಶ್ವವಿದ್ಯಾಲಯ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಬಾಲ್ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ದಾಖಲೆಯ ಎಂಟನೇ ಪ್ರಶಸ್ತಿ ಗೆದ್ದಿದ್ದಾರೆ.

ಸೋಮವಾರ ನಡೆದ ಫೈನಲ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯ 35–21, 35–19 ನೇರ ಸೆಟ್‌ಗಳಿಂದ ಕೇರಳದ ಕ್ಯಾಲಿಕಟ್‌ ವಿಶ್ವವಿದ್ಯಾಲಯ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಸತತ ಐದನೇ ಬಾರಿ ಟ್ರೋಫಿಗೆ ಮುತ್ತಿಕ್ಕಿದ ಸಾಧನೆಗೆ ಭಾಜನವಾಯಿತು.

ಪ್ರವೀಣ್‌ ಕುಮಾರ್‌ ಅವರ ಮಾರ್ಗದರ್ಶನದಲ್ಲಿ ತರಬೇತುಗೊಂಡಿದ್ದ ಮಂಗಳೂರು ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಕೊಯಮತ್ತೂರಿನ ಭಾರತಿಯಾರ್‌ ವಿಶ್ವವಿದ್ಯಾಲಯ ತಂಡವನ್ನು ನೇರ ಸೆಟ್‌ಗಳಿಂದ ಮಣಿಸಿತು.ಇದರೊಂದಿಗೆ ಸತತ 15ನೇ ಬಾರಿ ರೌಂಡ್ ರಾಬಿನ್‌ ಲೀಗ್‌ ಹಂತಕ್ಕೆ ಅರ್ಹತೆ ಗಳಿಸಿದ ಮೊದಲ ತಂಡ ಎಂಬ ದಾಖಲೆಗೆ ಪಾತ್ರವಾಯಿತು.

ರೌಂಡ್‌ ರಾಬಿನ್‌ ಹಂತದ ಮೊದಲ ಪಂದ್ಯದಲ್ಲಿ ಜಯಲಕ್ಷ್ಮಿ ಸಾರಥ್ಯದ ಮಂಗಳೂರು ತಂಡ 35–19, 35–13ರಲ್ಲಿ ಆತಿಥೇಯ ಕೃಷ್ಣ ವಿ.ವಿ. ಎದುರು ಗೆದ್ದಿತು.

ಎರಡನೇ ಹಣಾಹಣಿಯಲ್ಲಿ ಜಯಲಕ್ಷ್ಮಿ ಬಳಗ 27–35, 35–26, 35–29ರಲ್ಲಿ ಚೆನ್ನೈನ ಎಸ್‌.ಆರ್‌.ಎಂ. ವಿಶ್ವವಿದ್ಯಾಲಯ ತಂಡವನ್ನು ಮಣಿಸಿತ್ತು.

ಮಂಗಳೂರು ತಂಡದಲ್ಲಿದ್ದ ಹತ್ತು ಮಂದಿಯೂ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು. ಜಯಲಕ್ಷ್ಮಿ ಅವರು ಚಾಂಪಿಯನ್‌ಷಿಪ್‌ನ ಶ್ರೇಷ್ಠ ಆಟಗಾರ್ತಿಗೆ ನೀಡುವ ‘ಸ್ಟಾರ್‌ ಆಫ್ ಇಂಡಿಯಾ’ ಪ್ರಶಸ್ತಿಗೆ ಭಾಜನರಾದರು.

ಎಸ್‌.ಆರ್‌.ಎಂ ಮತ್ತು ಕೃಷ್ಣಾ ವಿಶ್ವವಿದ್ಯಾಲಯ ತಂಡಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದವು. ಚಾಂಪಿಯನ್‌ಷಿಪ್‌ನಲ್ಲಿ ದೇಶದ 84 ವಿಶ್ವವಿದ್ಯಾಲಯಗಳು ಭಾಗವಹಿಸಿದ್ದವು. ರೂಪತಿ ಅವರು ಮಂಗಳೂರು ತಂಡದ ಮ್ಯಾನೇಜರ್‌ ಆಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !