ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಮರಿನ್, ಅಕ್ಸೆಲ್ಸನ್‌ ಮುಡಿಗೆ ಪ್ರಶಸ್ತಿ

ಗ್ರೇಸಿಯಾ–ಅಪ್ರಿಯಾಣಿ, ಲೀ ಯಾಂಗ್–ವಾಂಗ್ ಚಿ ಲಿನ್‌ಗೆ ಡಬಲ್ಸ್ ಪ್ರಶಸ್ತಿ
Last Updated 17 ಜನವರಿ 2021, 13:27 IST
ಅಕ್ಷರ ಗಾತ್ರ

ಬ್ಯಾಂಕಾಕ್: ಟೋಕಿಯೊ ಒಲಿಂಪಿಕ್ಸ್‌ಗೆ ಸಿದ್ಧವಾಗುತ್ತಿರುವ ಹಾಲಿ ಒಲಿಂಪಿಕ್ ಚಾಂಪಿಯನ್, ಸ್ಪೇನ್‌ನ ಕರೊಲಿನಾ ಮರಿನ್ ಮತ್ತೊಮ್ಮೆ ಚಾಂಪಿಯನ್ ಪಟ್ಟದತ್ತ ಹೆಜ್ಜೆ ಹಾಕಿರುವುದನ್ನು ಇಲ್ಲಿ ಸಾಬೀತು ಮಾಡಿದರು. ಥಾಯ್ಲೆಂಡ್ ಓಪನ್‌ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತೆಯನ್ನು ಮಣಿಸಿ ಅವರು ಪ್ರಶಸ್ತಿ ಮುಡಿಗೇರಿಸಿಕೊಂಡರು.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಕರೊಲಿನಾ ಮರಿನ್ ಥೈವಾನ್‌ನ ತಾಯ್ ಜು ಇಂಗ್ ಎದುರು21-9, 21-16ರಲ್ಲಿ ಜಯ ಗಳಿಸಿದರು. ಪುರುಷರ ವಿಭಾಗದ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಡೆನ್ಮಾರ್ಕ್‌ ಆಟಗಾರ ವಿಕ್ಟರ್ ಅಕ್ಸೆಲ್ಸನ್21-14, 21-14ರಲ್ಲಿ ಹಾಂಕಾಂಗ್‌ನ ಅಂಗಸ್ ಲಾಂಗ್ ವಿರುದ್ಧ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಿದರು.

27 ವರ್ಷದ ಮರಿನ್ ಭರ್ಜರಿ ಸ್ಮ್ಷಾಷ್ ಮತ್ತು ಚುರುಕಿನ ಡ್ರಾಪ್‌ಗಳನ್ನು ಹಾಕಿ ಎದುರಾಳಿಯನ್ನು ಕಂಗೆಡಿಸಿ 42 ನಿಮಿಷಗಳಲ್ಲಿ ಪಂದ್ಯ ಗೆದ್ದುಕೊಂಡರು. ‘ಗೆಲ್ಲುವುದಕ್ಕಾಗಿಯೇ ಕಣಕ್ಕೆ ಇಳಿದಿದ್ದೇನೆ ಎಂದು ಎದುರಾಳಿಗೆ ಆರಂಭದಲ್ಲೇ ಮನದಟ್ಟು ಮಾಡಿಸಬೇಕಾಗಿತ್ತು. ಅದಕ್ಕಾಗಿ ಆಕ್ರಮಣಕಾರಿ ಆಟಕ್ಕೆ ಮುಂದಾದೆ. ಅದು ಫಲ ನೀಡಿತು’ ಎಂದು ಪಂದ್ಯದ ನಂತರ ಮರಿನ್ ಹೇಳಿದರು.

‘ಕರೊಲಿನಾ ಮರಿನ್ ಅತ್ಯಂತ ವೇಗದ ಮತ್ತು ಆಕ್ರಮಣಕಾರಿ ಆಟಗಾರ್ತಿ. ಅದು ಅವರ ಆಟದ ಶೈಲಿ. ಈ ಪಂದ್ಯದಲ್ಲಿ ನನ್ನ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು’ ಎಂದು ತಾಯ್ ಜು ಇಂಗ್ ಒಪ್ಪಿಕೊಂಡರು.

ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಪ್ರಶಸ್ತಿ ಗೆದ್ದ ಏಷ್ಯಾದ ಹೊರಗಿನ ಮೊದಲ ಆಟಗಾರ್ತಿ ಎಂದೆನಿಸಿಕೊಂಡಿರುವ ಮರಿನ್ 2019ರ ಜನವರಿಯಲ್ಲಿ ಮೊಣಕಾಲಿನ ನೋವಿನಿಂದ ಬಳಲಿ ಕೆಲ ಕಾಲ ಅಂಗಣದಿಂದ ದೂರ ಉಳಿದಿದ್ದರು.

ಅಕ್ಸೆಲ್ಸನ್‌ಗೆ ಸುಲಭ ಜಯ

ಅಕ್ಸೆಲ್ಸನ್ ಕೇವಲ 44 ನಿಮಿಷಗಳಲ್ಲಿ ಎದುರಾಳಿಯನ್ನು ಮಣಿಸಿದರು. ಈ ಮೂಲಕ 10 ತಿಂಗಳ ಅವಧಿಯಲ್ಲಿ ಸತತ ಪ್ರಶಸ್ತಿ ಗೆದ್ದಂತಾಯಿತು. ಕಳೆದ ಮಾರ್ಚ್‌ನಲ್ಲಿ ಅವರು ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗಳಿಸಿದ್ದರು. ‘ಕೆಲವು ಕಾಲದಿಂದ ಕಣಕ್ಕೆ ಇಳಿದಿರಲಿಲ್ಲ. ಆದರೂ ಇಲ್ಲಿ ಫೈನಲ್ ತಲುಪುವುದು ಖಚಿತ ಎಂಬ ಭರವಸೆ ಇತ್ತು. ‍ಪೂರ್ಣ ಪ್ರಮಾಣದ ಸಾಮರ್ಥ್ಯವನ್ನು ಪ್ರದರ್ಶಿಸಲು ಆಗಲಿಲ್ಲ. ಆದರೂ ಪ್ರಶಸ್ತಿ ಗೆದ್ದಿರುವುದು ಖುಷಿ ತಂದಿದೆ’ ಎಂದು ಅಕ್ಸೆಲ್ಸನ್ ಹೇಳಿದರು.

ಇಂಡೊನೇಷ್ಯಾದ ಗ್ರೇಸಿಯಾ ಪೊಲಿ ಮತ್ತು ಅಪ್ರಿಯಾಣಿ ರಹಾಯು ಜೋಡಿ ಥಾಯ್ಲೆಂಡ್‌ನ ಜೊಂಗೊಲ್ಫಾನ್ ಮತ್ತು ರವಿಂದ ಪ್ರಜೊಂಜಯ್ ಅವರನ್ನು 21-15, 21-12ರಲ್ಲಿ ಮಣಿಸಿ ಮಹಿಳೆಯರ ಡಬಲ್ಸ್ ವಿಭಾಗದ ಪ್ರಶಸ್ತಿ ಗಳಿಸಿದರು. ಇದು, ಈ ಜೋಡಿ ಇಲ್ಲಿ ಗೆದ್ದ ನಾಲ್ಕನೇ ಪ್ರಶಸ್ತಿಯಾಗಿದ್ದು ಈ ಮೂಲಕ ದಾಖಲೆ ನಿರ್ಮಿಸಿದರು.ಪುರುಷರ ಡಬಲ್ಸ್‌ನಲ್ಲಿ ಥಯ್ವಾನ್‌ನ ಲೀ ಯಾಂಗ್ ಮತ್ತು ವಾಂಗ್ ಚಿ ಲಿನ್ ಮಲೇಷ್ಯಾದ ಗೊಹ್ ಶೆಮ್‌ ಮತ್ತು ಟ್ಯಾನ್ ವೀ ಕಿಯಾಂಗ್ 21–16, 21-23, 21–19ರಲ್ಲಿ ಸೋಲಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಥಾಯ್ಲೆಂಡ್ ಜೋಡಿ ಡೆಚಾಪೊಲ್ ಪರ್ಣಕ್ರೊವ್ ಮತ್ತು ಸಬ್ಸಿರಿ ತರ್ಟನಚಿ ಇಂಡೊನೇಷ್ಯಾದ ಪ್ರವೀನ್ ಜೋರ್ಡನ್‌ ಮತ್ತು ಮೇಲಾತಿ ದೇವ ಒಕ್ಟವಿಂಟಿ ಅವರನ್ನು 21–3, 21–18ರಲ್ಲಿ ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT