ಸೋಮವಾರ, ಆಗಸ್ಟ್ 3, 2020
23 °C
ಮೇ 20ರಿಂದ ಇಂಡಿಯನ್‌ ಓಪನ್‌ ಬಾಕ್ಸಿಂಗ್‌ ಟೂರ್ನಿ

51 ಕೆಜಿ ವಿಭಾಗದಲ್ಲಿ ಮೇರಿ ಅಭಿಯಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ಖ್ಯಾತ ಬಾಕ್ಸಿಂಗ್‌ ತಾರೆ ಮೇರಿ ಕೋಮ್‌ 51 ಕೆಜಿ ವಿಭಾಗದಲ್ಲಿ ಮೊದಲ ಬಾರಿ ಭಾರತದಲ್ಲಿ ಅಭಿಯಾನ ಆರಂಭಿಸಲಿದ್ದಾರೆ. ಎರಡನೇ ಆವೃತ್ತಿಯ ಇಂಡಿಯನ್‌ ಬಾಕ್ಸಿಂಗ್‌ ಟೂರ್ನಿಯು ಮೇ 20ರಂದು ಆರಂಭವಾಗಲಿದೆ. ಗುವಾಹಟಿಯಲ್ಲಿ ಮೇ 24ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಮೇರಿ ಪಾಲ್ಗೊಳ್ಳಲಿದ್ದಾರೆ.

ಭಾರತದ 35 ಪುರುಷ ಹಾಗೂ 37 ಮಹಿಳಾ ಬಾಕ್ಸರ್‌ಗಳು ಟೂರ್ನಿಯಲ್ಲಿ ಸವಾಲಿಗೆ ಸಜ್ಜಾಗಲಿದ್ದಾರೆ. 16 ದೇಶಗಳ ಕನಿಷ್ಠ 200 ಸ್ಪರ್ಧಿಗಳು ಅದೃಷ್ಟ ಪರೀಕ್ಷೆಗೆ ಆಗಮಿಸಲಿದ್ದಾರೆ. ಇದು ಒಟ್ಟು ಸುಮಾರು ₹ 49 ಲಕ್ಷ ಮೊತ್ತದ ಟೂರ್ನಿಯಾಗಿದೆ.

ವಿಶ್ವಚಾಂಪಿಯನ್‌ಷಿಪ್‌ಗೆ ಸಿದ್ಧವಾಗಲು ಬಯಸಿದ್ದ ಮೇರಿ ಕೋಮ್‌ ಏಷ್ಯನ್‌ ಚಾಂಪಿಯನ್‌ಷಿಪ್‌ನಿಂದ ಹೊರಗುಳಿದಿದ್ದರು. ಒಲಿಂಪಿಕ್‌ ಅರ್ಹತಾ ಸುತ್ತಿಗೆ ರೂಪಿಸಲಾದ ನಿಯಮಕ್ಕನುಸಾರವಾಗಿ ಹಲವು ಭಾರತೀಯ ಬಾಕ್ಸರ್‌ಗಳು ತಮ್ಮ ತೂಕ ವಿಭಾಗಗಳನ್ನು ಬದಲಿಸಿಕೊಂಡಿದ್ದರು. 75 ಕೆಜಿ ವಿಭಾಗದಲ್ಲಿ ಪೂಜಾ ರಾಣಿ ಸ್ಪರ್ಧಿಸಲಿದ್ದಾರೆ. ಏಷ್ಯನ್‌ ಚಾಂಪಿಯನ್‌ಷಿಪ್‌ ಕಂಚು ಪದಕ ವಿಜೇತೆ ಮನೀಷಾ ಮೌನ್‌ ಮೊದಲ ಬಾರಿ 57 ಕೆಜಿ ವಿಭಾಗದಲ್ಲಿ ಸವಾಲಿಗೆ ಸಜ್ಜಾಗಿದ್ದಾರೆ.

ಪುರುಷರ ವಿಭಾಗದಲ್ಲಿ ಅಸ್ಸಾಂನ ಶಿವ ಥಾಪಾ(60 ಕೆಜಿ), ಅಂಕುಶಿತ ಬೊರೊ (64 ಕೆಜಿ), ಗೌರವ್‌ ಬಿಧುರಿ (56 ಕೆಜಿ) ಭಾರತವನ್ನು ಪ್ರತಿನಿಧಿಸಲಿದ್ದಾರೆ. ಟೂರ್ನಿಯಲ್ಲಿ ಚಿನ್ನದ ಪದಕ ವಿಜೇತರಿಗೆ ತಲಾ ₹ 1.76 ಲಕ್ಷ, ಬೆಳ್ಳಿ ಗೆದ್ದವರಿಗೆ ₹ 70,000 ಪ್ರಶಸ್ತಿ ಮೊತ್ತವನ್ನು ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು