ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌ ಬಗ್ಗೆ ಬಿಂದ್ರಾಗೆ ಏನು ಗೊತ್ತು?: ಮೇರಿ ಕೋಮ್‌

ಒಲಿಂಪಿಯನ್‌ ಶೂಟರ್‌ ವಿರುದ್ಧ ಕಿಡಿಕಾರಿದ ಬಾಕ್ಸರ್‌
Last Updated 19 ಅಕ್ಟೋಬರ್ 2019, 11:35 IST
ಅಕ್ಷರ ಗಾತ್ರ

ನವದೆಹಲಿ: ‘ಬಾಕ್ಸಿಂಗ್‌ಗೂ ಶೂಟರ್‌ ಅಭಿನವ್‌ ಬಿಂದ್ರಾ ಅವರಿಗೂ ಏನು ಸಂಬಂಧ. ಬಾಕ್ಸಿಂಗ್‌ ವಿಚಾರದಲ್ಲಿ ಅವರು ಮೂಗು ತೂರಿಸುವ ಅಗತ್ಯವಿಲ್ಲ’ ಎಂದು ಒಲಿಂಪಿಯನ್‌ ಬಾಕ್ಸರ್‌ ಎಂ.ಸಿ.ಮೇರಿ ಕೋಮ್‌ ಕಿಡಿ ಕಾರಿದ್ದಾರೆ.

ಮುಂದಿನ ವರ್ಷ ಚೀನಾದಲ್ಲಿ ನಡೆಯುವ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗೆ ತಂಡವನ್ನು ಕಳಿಸುವ ಮುನ್ನ ಮೇರಿ ಕೋಮ್‌ ಹಾಗೂ ತಮ್ಮ ನಡುವೆ ಟ್ರಯಲ್ಸ್‌ (51 ಕೆ.ಜಿ.ವಿಭಾಗದಲ್ಲಿ) ಆಯೋಜಿಸಬೇಕೆಂದು ಜೂನಿಯರ್‌ ವಿಶ್ವ ಚಾಂಪಿಯನ್‌ ನಿಖತ್‌ ಜರೀನ್‌ ಅವರು ಗುರುವಾರ ಆಗ್ರಹಿಸಿದ್ದರು. ಇದಕ್ಕೆ ಬಿಂದ್ರಾ ಕೂಡ ಧ್ವನಿಗೂಡಿಸಿದ್ದರು.

‘ಬಿಂದ್ರಾ ಅವರು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ನಾನು ಕೂಡ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಹಲವು ಪದಕಗಳನ್ನು ಜಯಿಸಿದ್ದೇನೆ. ಬಾಕ್ಸಿಂಗ್‌ ಮತ್ತು ಅದರ ನಿಯಮಗಳ ಬಗ್ಗೆ ಬಿಂದ್ರಾ ಅವರಿಗೆ ಏನು ಗೊತ್ತಿದೆ. ಶೂಟಿಂಗ್‌ ಕುರಿತು ನಾನು ಎಂದೂ ಮಾತನಾಡಲು ಹೋಗುವುದಿಲ್ಲ. ಹಾಗೆಯೇ ಅವರು ಕೂಡಾ ಬಾಕ್ಸಿಂಗ್‌ ವಿಷಯದಲ್ಲಿ ತಲೆಹಾಕದೆ ಸುಮ್ಮನಿರಲಿ. ಬಿಂದ್ರಾ ಅವರು ಈ ಹಿಂದೆ ಅಂತರರಾಷ್ಟ್ರೀಯ ಟೂರ್ನಿಗಳಿಗೂ ಮುನ್ನ ಟ್ರಯಲ್ಸ್‌ನಲ್ಲಿ ಭಾಗವಹಿಸುತ್ತಿದ್ದರೇ’ ಎಂದು ಮೇರಿ ಕುಟುಕಿದ್ದಾರೆ.

‘ನಿಖತ್‌ ಅವರು ಪದೇ ಪದೇ ನನ್ನ ಹೆಸರನ್ನು ಏಕೆ ಎಳೆದು ತರುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಬಹುಶಃ ಪ್ರಚಾರ ಪಡೆಯುವುದು ಅವರ ಉದ್ದೇಶವಾಗಿರಬಹುದು. ಅವರ ಹೇಳಿಕೆಗಳಿಗೆಲ್ಲಾ ಉತ್ತರ ನೀಡುವ ಅಗತ್ಯವಿಲ್ಲ’ ಎಂದಿದ್ದಾರೆ.

‘2020ರ ಟೋಕಿಯೊ ಒಲಿಂಪಿಕ್ಸ್‌ಗೆ ಯಾರನ್ನು ಕಳುಹಿಸಬೇಕು ಎಂಬುದನ್ನು ಭಾರತ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) ತೀರ್ಮಾನಿಸುತ್ತದೆ. ಯಾರನ್ನು ಕಳುಹಿಸಿದರೆ ಪದಕ ಗೆದ್ದು ತರುತ್ತಾರೆ ಎಂಬುದು ಫೆಡರೇಷನ್‌ಗೆ ಚೆನ್ನಾಗಿ ತಿಳಿದಿದೆ. ಟ್ರಯಲ್ಸ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ನಾನು ಯಾವತ್ತೂ ಬಿಎಫ್‌ಐಗೆ ಹೇಳಿಲ್ಲ. ನನ್ನನ್ನೇ ಒಲಿಂಪಿಕ್ಸ್‌ಗೆ ಕಳುಹಿಸಿಕೊಡಿ ಎಂದು ಯಾರ ಬಳಿಯೂ ಅಂಗಲಾಚಿಲ್ಲ’ ಎಂದಿದ್ದಾರೆ.

‘ಎಲ್ಲಾ ವಿಚಾರಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ಬಿಎಫ್‌ಐ ಅಧ್ಯಕ್ಷ ಅಜಯ್‌ ಸಿಂಗ್‌ ಅವರಿಗಿದೆ. ಈ ವಿಷಯದಲ್ಲಿ ಮೂಗು ತೂರಿಸುವ ಅಧಿಕಾರ ನನಗಂತೂ ಇಲ್ಲ. ಒಂದೊಮ್ಮೆ ಬಿಎಫ್‌ಐ ಆಯ್ಕೆ ಟ್ರಯಲ್ಸ್‌ ನಡೆಸಲು ಮುಂದಾದರೆ ಅದನ್ನು ಸ್ವಾಗತಿಸುತ್ತೇನೆ. ನಿಖತ್‌ ವಿರುದ್ಧ ಪೈಪೋಟಿ ನಡೆಸಲು ನನಗ್ಯಾವ ಭಯವೂ ಇಲ್ಲ’ ಎಂದು ಮೇರಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT