ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಶೂಟಿಂಗ್‌ ಟ್ರಯಲ್ಸ್: ಮೆಹುಲಿ ಘೋಷ್‌ಗೆ ಪ್ರಶಸ್ತಿ

ಜವಾಂಡಾ, ಪಾರುಲ್‌ ಕುಮಾರ್‌ಗೆ ಚಿನ್ನ
Last Updated 10 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಮೆಹುಲಿ ಘೋಷ್‌ ಅವರು ರಾಷ್ಟ್ರೀಯ ಶೂಟಿಂಗ್‌ ಟ್ರಯಲ್ಸ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮಹಿಳೆಯರ ಸೀನಿಯರ್‌ ಹಾಗೂ ಜೂನಿಯರ್‌ ವಿಭಾಗಗಳ 10 ಮೀಟರ್‌ ಏರ್‌ ರೈಫಲ್ಸ್‌ನಲ್ಲಿ ಮಂಗಳವಾರ ಅವರು ಪ್ರಶಸ್ತಿ ಗೆದ್ದರು.

ಡಾ.ಕರ್ಣಿಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ ಟ್ರಯಲ್ಸ್‌ ನಡೆಯಿತು. ಅನಹದ್‌ ಜವಾಂಡಾ ಹಾಗೂ ಪಾರುಲ್‌ ಕುಮಾರ್‌ ಕ್ರಮವಾಗಿ ಪುರುಷರ 25 ಮೀಟರ್‌ ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ಹಾಗೂ 50 ಮೀಟರ್‌ ರೈಫಲ್‌ 3 ಪೋಸಿಷನ್‌ನಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಪಶ್ಚಿಮ ಬಂಗಾಳದ ಮೆಹುಲಿ ಅವರು ದಿನದ ತಾರಾ ಶೂಟರ್‌ ಆಗಿ ಹೊರಹೊಮ್ಮಿದರು. 10 ಮೀ. ಏರ್‌ ರೈಫಲ್‌ನಲ್ಲಿ 252 ಪಾಯಿಂಟ್‌ ಗಳಿಸಿ ಅವರು ಮೊದಲ ಸ್ಥಾನ ಪಡೆದರೆ, ಮಧ್ಯಪ್ರದೇಶದ ಶ್ರೇಯಾ ಅಗರವಾಲ್‌ 251.2 ಪಾಯಿಂಟ್‌ಗಳೊಂದಿಗೆ ರನ್ನರ್‌ಅಪ್‌ ಆದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊಲದ ಸ್ಥಾನದಲ್ಲಿರುವ ರಾಜಸ್ಥಾನದ ಅಪೂರ್ವಿ ಚಾಂಡೇಲ (229.3) ಅವರಿಗೆ ಮೂರನೇ ಸ್ಥಾನ ದಕ್ಕಿತು.

ಮಹಿಳೆಯರ ಜೂನಿಯರ್‌10 ಮೀಟರ್‌ ಏರ್‌ ರೈಫಲ್ಸ್‌ ವಿಭಾಗದಲ್ಲಿ ಮೆಹುಲಿ ಅವರ ಗೆಲುವು ಮತ್ತಷ್ಟು ಪರಿಪೂರ್ಣವಾಗಿತ್ತು. 252.2 ಪಾಯಿಂಟ್‌ ಗಳಿಸಿದ ಅವರು, ಪಂಜಾಬ್‌ನ ಖುಷಿ ಸೈನಿ (248.8) ಅವರನ್ನು ಪರಾಭವಗೊಳಿಸಿದರು. ಮಧ್ಯಪ್ರದೇಶದ ಮಾನಸಿ ಕಥೈತ್‌ (227.5) ಹಾಗೂ ಶ್ರೇಯಾ ಅಗರವಾಲ್‌ (205.8) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರು.

ಇದೇ ಸ್ಪರ್ಧೆಯ ಯೂತ್‌ ವಿಭಾಗದಲ್ಲಿ ಹಿಮಾಚಲ ಪ್ರದೇಶದ ಜೀನಾ ಕಿಟ್ಟಾ ಚಿನ್ನ ಗೆದ್ದರು. ಫೈನಲ್ಸ್‌ನಲ್ಲಿ ಅವರು 252.5 ಪಾಯಿಂಟ್ಸ್ ಸಂಪಾದಿಸಿದರು.

ಅನ್‌ಹದ್‌ ಮಿಂಚು: ಪುರುಷರ 25 ಮೀ. ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಅನಹದ್‌ ಅವರು ಪ್ರಶಸ್ತಿ ಗೆದ್ದರು. ಫೈನಲ್ಸ್‌ನಲ್ಲಿ ಅವರು 31 ಪಾಯಿಂಟ್ಸ್ ಗಳಿಸಿದರು. ಒಲಿಂಪಿಯನ್‌ ಹಾಗೂ ಸೇನಾ ಶೂಟರ್‌ ಗುರುಪ್ರೀತ್‌ ಸಿಂಗ್‌ (26 ಪಾಯಿಂಟ್ಸ್) ಬೆಳ್ಳಿ ಮತ್ತು ಕೇರಳದ ಥಾಮಸ್‌ ಜಾರ್ಜ್‌ (23) ಕಂಚು ಗೆದ್ದರು.

ಪುರುಷರ ಜೂನಿಯರ್‌ ವಿಭಾಗದಲ್ಲಿ ಚಂಡಿಗಡದ ವಿಜಯವೀರ್‌ ಸಿಧು (31 ಪಾಯಿಂಟ್ಸ್) ಚಿನ್ನ, ಆದರ್ಶ್‌ಸಿಂಗ್‌ (26) ಬೆಳ್ಳಿ ಗೆದ್ದರು. ಕಂಚು ವಿಜಯವೀರ್‌ ಅವರ ಅವಳಿ ಸಹೋದರ ಉದಯವೀರ್‌ (25) ಪಾಲಾಯಿತು. ಪುರುಷರ 50 ಮೀ. 3 ಪೋಸಿಷನ್ಸ್‌ನಲ್ಲಿ ಏರ್‌ಫೋರ್ಸ್ ತಂಡದ ಪಾರುಲ್‌ಕುಮಾರ್‌ (458.3 ಪಾಯಿಂಟ್ಸ್) ಪ್ರಶಸ್ತಿ ಪಡೆದರು. ಸತ್ಯೇಂದ್ರ ಸಿಂಗ್‌ (456.5) ದ್ವಿತೀಯ ಹಾಗೂ ಚೈನ್‌ಸಿಂಗ್‌ (443.1 ಪಾಯಿಂಟ್ಸ್) ತೃತೀಯ ಸ್ಥಾನ ಗಳಿಸಿದರು. ಉದಯೋನ್ಮುಖ ಪ್ರತಿಭೆ ಮಧ್ಯಪ್ರದೇಶದ ಐಶ್ವರ್ಯಪ್ರತಾಪ್ ಸಿಂಗ್‌ ಥೋಮರ್‌ (453.5 ಪಾಯಿಂಟ್ಸ್) ಅವರಿಗೆ ಪುರುಷರ ಜೂನಿಯರ್‌ 3 ಪೋಸಿಷನ್ಸ್‌ನಲ್ಲಿ ಚಿನ್ನ ಒಲಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT