ಮಂಗಳವಾರ, ಸೆಪ್ಟೆಂಬರ್ 28, 2021
24 °C
ಮೋಟರ್‌ಸ್ಪೋರ್ಟ್ಸ್ ಕ್ರೀಡಾಪಟು ಸಂತೋಷ್ ಸಂದರ್ಶನ

ಸವಾಲು ಎದುರಿಸುವುದೇ ‘ಸಂತೋಷ’

ಬಸವರಾಜ ದಳವಾಯಿ Updated:

ಅಕ್ಷರ ಗಾತ್ರ : | |

ಸಿ.ಎಸ್‌. ಸಂತೋಷ್‌... ಅಪ್ಪಟ ಕನ್ನಡದ ಪ್ರತಿಭೆ. ಮೋಟರ್‌ಸ್ಪೋರ್ಟ್ಸ್ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ. ದಶಕಗಳಿಗೂ ಹೆಚ್ಚು ಕಾಲ ಅಪಾಯಕಾರಿ ಪ್ರದೇಶಗಳ ರೇಸ್‌ಗಳಲ್ಲಿ ಧೈರ್ಯದಿಂದ ಮುನ್ನುಗ್ಗಿ ಸೈ ಎನಿಸಿಕೊಂಡವರು. 2015ರಲ್ಲಿ ಮೊದಲ ಬಾರಿ ವಿಶ್ವದ ಅಪಾಯಕಾರಿ ಕ್ರೀಡೆ, ಡಕಾರ್‌ ರ‍್ಯಾಲಿಗೆ ಕಾಲಿಟ್ಟ ಅವರು, ಈ ಅವಕಾಶ ಗಿಟ್ಟಿಸಿದ ಮೊದಲ ಭಾರತೀಯ ಅಥ್ಲೀಟ್‌ ಎಂಬ ಹೆಗ್ಗಳಿಕೆ ಉಳ್ಳವರು. ಆ ವರ್ಷ 36ನೇ ಸ್ಥಾನ ಗಿಟ್ಟಿಸಿದ್ದ  ಸಂತೋಷ್‌, ಹೋದ ಸಲ 34ನೇ ಸ್ಥಾನ ಗಳಿಸಿದ್ದರು. ಈ ಬಾರಿ ಅಗ್ರ 20ರಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿರುವ ಅವರು ‘ಪ್ರಜಾವಾಣಿ’ಯೊಂದಿಗೆ ಮನದಾಳ ಹಂಚಿಕೊಂಡಿದ್ದಾರೆ.  

ಡಕಾರ್‌ ರ‍್ಯಾಲಿ ವಿಶ್ವದ ಕಠಿಣ ರ‍್ಯಾಲಿ ಎಂದು ಹೇಳುತ್ತಾರೆ. ಇದರಲ್ಲಿ ಯಾವಾಗ ಭಾಗವಹಿಸಿದ್ದೀರಿ?

2015ರಲ್ಲಿ ಮೊದಲ ಬಾರಿ ಡಕಾರ್‌ ರ‍್ಯಾಲಿಯಲ್ಲಿ ಭಾಗವಹಿಸಿದ್ದೆ. ಅದಕ್ಕಿಂತ ಮೊದಲು ಅಂದರೆ 2012ರಿಂದಲೇ ಗುಡ್ಡಗಾಡು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ.  ಹಿಮಾಲಯ ರೇಸ್‌ ಹಾಗೂ ರಾಜಸ್ತಾನದಲ್ಲಿ ನಡೆದ ರೇಸ್‌ ಗೆದ್ದ ನಂತರ ಡಕಾರ್‌ ರ‍್ಯಾಲಿಗಳಿಗೆ ಹೋಗಲಾರಂಭಿಸಿದೆ. ಭಾರತದಲ್ಲಿನ ರೇಸ್‌ಗಳು ನನಗೆ ಕಷ್ಟ ಎನಿಸಲಿಲ್ಲ. ಹಾಗಾಗಿ ವಿದೇಶಗಳಲ್ಲಿ ಶಕ್ತಿ, ಸಾಮರ್ಥ್ಯ ಪರೀಕ್ಷೆಗೆ ಸಜ್ಜಾದೆ.

ಡಕಾರ್‌ ರ‍್ಯಾಲಿ ಯಾವಾಗ ನಡೆಯುತ್ತದೆ?

ವರ್ಷದಲ್ಲಿ ಒಂದು ಬಾರಿ ಅಂದರೆ ಜನವರಿಯಲ್ಲಿ ಇದನ್ನು ನಡೆಸಲಾಗುತ್ತದೆ. ವಿಶ್ವದ ಅತ್ಯಂತ ಕಠಿಣ ರ‍್ಯಾಲಿ ಇದು. ಜಗತ್ತಿನ ಅತ್ಯುತ್ತಮ ರೈಡರ್‌ಗಳು ಇಲ್ಲಿ ಸಾಮರ್ಥ್ಯ ತೋರಲು ಆಗಮಿಸುತ್ತಾರೆ. ಈ ಹಿಂದಿನ ಐದು ವರ್ಷ ದಕ್ಷಿಣ ಅಮೆರಿಕದಲ್ಲಿ ನಡೆಯಿತು. ಮುಂದಿನ ವರ್ಷ ಸೌದಿ ಅರೇಬಿಯಾದಲ್ಲಿ ನಡೆಯಲಿದೆ.

ಮೋಟರ್‌ಸ್ಪೋರ್ಟ್ಸ್‌ ಕ್ರೀಡೆಯಲ್ಲಿ ಹೆಚ್ಚಾಗಿ ವಿದೇಶಿಯರೇ ಪಾರಮ್ಯ ಮೆರೆಯುತ್ತಾರೆ. ಭಾರತದವರು ಹಿಂದುಳಿಯಲು ಕಾರಣ ಏನಿರಬಹುದು?

ಭಾರತೀಯರ ಮನಸ್ಥಿತಿಯೇ ಕಾರಣ. ಇಲ್ಲಿ ಅಪಾಯ ಮೈಮೇಲೆ ಎಳೆದುಕೊಳ್ಳಲು ಬಯಸುವುದಿಲ್ಲ. ತಮ್ಮ ಮಕ್ಕಳನ್ನು ಡಾಕ್ಟರ್‌, ಎಂಜಿನಿಯರ್‌ ಆಗಿಸಬೇಕೆಂದು ಬಯಸುತ್ತಾರೆ. ಮಕ್ಕಳಲ್ಲಿಯೂ ಅದೇ ಭಾವನೆ ತುಂಬಿಸುತ್ತಾರೆ. ಆದರೆ ಬೇರೆ ದೇಶದವರು ಹಾಗಲ್ಲ; ಅವರು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೇರೇಪಣೆ ಮಾಡುತ್ತಾರೆ. ಆದರೆ ಈಗೀಗ ಭಾರತೀಯರ ಮನಸ್ಥಿತಿಯಲ್ಲಿ ಬದಲಾವಣೆ ಕಂಡುಬರುತ್ತಿದೆ.ಇದಕ್ಕೆ ಸಾಕ್ಷಿ ಎಂಬಂತೆ ಬ್ಯಾಡ್ಮಿಂಟನ್‌ನಲ್ಲಿ ಉತ್ತಮ ಆಟಗಾರರು ಕಾಣಸಿಗುತ್ತಿದ್ದಾರೆ.

ಮೋಟರ್‌ಸ್ಪೋರ್ಟ್ಸ್ ಒಂದು ಅಪಾಯಕಾರಿ ಕ್ರೀಡೆ ಎಂದು ಗೊತ್ತಿದ್ದೂ ನೀವು ಮುಂದುವರಿದಿದ್ದೀರಿ. ಇದಕ್ಕೆ ಕುಟುಂಬದ ಬೆಂಬಲ ಇದೆಯಾ?

ಆರಂಭದಲ್ಲಿ ನನ್ನ ತಂದೆ–ತಾಯಿಯಿಂದ ಅಲ್ಪ ವಿರೋಧವಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಮರ್ಥ್ಯ ತೋರಿದ ಬಳಿಕ ಅವರೂ ಬದಲಾದರು. ಈ ಕ್ಷೇತ್ರಕ್ಕೆ ಬರುತ್ತೇನೆ ಎಂದೂ ನಾನು ಅಂದುಕೊಂಡಿರಲಿಲ್ಲ. ನನ್ನಂತೆ ಹಲವು ರೈಡರ್‌ಗಳು ಇದರಲ್ಲೇ ಬದುಕು ಕಂಡುಕೊಂಡಿದ್ದಾರೆ. ಪ್ರಾಯೋಜಕರು ಸಿಗುತ್ತಿದ್ದಾರೆ. ಹಾಗಾಗಿ ಕುಟುಂಬದಲ್ಲಿ ಈಗ ಅಪಾರ ಬೆಂಬಲವಿದೆ.

ರ‍್ಯಾಲಿಗಳಿಗೆ ಯಾವ ಯಾವ ಬೈಕ್‌ಗಳನ್ನು ಬಳಸುತ್ತೀರಿ?

ಹೀರೊ ತಂಡದ ಪರ ಕಣಕ್ಕಿಳಿಯುವುದರಿಂದ ಅದೇ ಬೈಕ್‌ ಬಳಸುತ್ತೇನೆ. ರ‍್ಯಾಲಿಯ ಸಂದರ್ಭದಲ್ಲಿ ಒಂದೇ ಬೈಕ್‌ ಉಪಯೋಗಿಸಬೇಕಾಗುತ್ತದೆ; ಇಂಜಿನ್‌ ಕೂಡ ಬದಲಾಯಿಸುವಂತಿಲ್ಲ. ರೇಸ್‌ ಎಂದರೆ ಅದೇ.

ಅಪಾಯಗಳಿಗೆ ಮುಖಾಮುಖಿಯಾಗಿದ್ದೀರಾ?

ತುಂಬಾ ಸಲ ಬಿದ್ದಿದ್ದೀನಿ; ಆದರೆ ಅದೃಷ್ಟವಶಾತ್‌ ಅಪಾಯಗಳಿಂದ ಪಾರಾಗಿದ್ದೀನಿ.

ಮುಂದಿನ ಗುರಿ?

ಮುಂಬರುವ ಡಕಾರ್‌ ರ‍್ಯಾಲಿ ಫಿನಿಷ್‌ ಮಾಡುವುದೇ ಮುಖ್ಯ ಗುರಿ. ಎರಡನೇ ಆದ್ಯತೆ ವಿಶ್ವದ ಅಗ್ರ 20 ರೇಸರ್‌ಗಳಲ್ಲಿ ಸ್ಥಾನ ಪಡೆಯುವುದು. ಈ ಉದ್ದೇಶ ಸಾಧಿಸುವ ವಿಶ್ವಾಸವಿದೆ.

ಸಿದ್ಧತೆ ಹೇಗೆಲ್ಲ ಸಾಗಿದೆ?

ಹೋದ ವರ್ಷದಿಂದ ಸಿದ್ಧತೆ ಚೆನ್ನಾಗಿದೆ. ಈ ವರ್ಷ ಕೂಡ ತರಬೇತಿ ಪಡೆದಿದ್ದೇನೆ. ಸೌದಿ ಅರೇಬಿಯದಲ್ಲಿ ಜನವರಿ 5ರಿಂದ ಎರಡು ವಾರಗಳ ಡಕಾರ್‌ ರ‍್ಯಾಲಿ ನಡೆಯಲಿದ್ದು, ಮಾನಸಿಕವಾಗಿ ಈಗಲೇ ಸಜ್ಜಾಗಿದ್ದೇನೆ.

ಇದನ್ನೂ ಓದಿ: ‘ಮೋಟಾರ್‌ಸ್ಪೋರ್ಟ್ಸ್ ಆಸಕ್ತಿ ಹೆಚ್ಚಲಿ’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು