ರಾಷ್ಟ್ರೀಯ ಟೆನ್‌ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌: ಆಕಾಶ್‌, ಸಬೀನಾ ಮುಡಿಗೆ ಗರಿ

7

ರಾಷ್ಟ್ರೀಯ ಟೆನ್‌ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌: ಆಕಾಶ್‌, ಸಬೀನಾ ಮುಡಿಗೆ ಗರಿ

Published:
Updated:
Prajavani

ಬೆಂಗಳೂರು: ಕರ್ನಾಟಕದ ಆಕಾಶ್‌ ಅಶೋಕ್‌ ಕುಮಾರ್‌ ಮತ್ತು ತಮಿಳುನಾಡಿನ ಸಬೀನಾ ಅಟಿಕಾ ಅವರು ಯುನಿಪ್ಲೇ ರಾಷ್ಟ್ರೀಯ ಟೆನ್‌ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳಾ ಸಿಂಗಲ್ಸ್‌ ವಿಭಾಗಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಚರ್ಚ್‌ಸ್ಟ್ರೀಟ್‌ನಲ್ಲಿರುವ ಅಮೀಬಾ ಬೌಲಿಂಗ್ ಕೇಂದ್ರದಲ್ಲಿ ಶನಿವಾರ ನಡೆದ ಫೈನಲ್‌ನಲ್ಲಿ ಬೆಂಗಳೂರಿನ ಆಕಾಶ್‌ 41 ಪಿನ್‌ಗಳಿಂದ ದೆಹಲಿಯ ಎರಡನೇ ಶ್ರೇಯಾಂಕದ ಆಟಗಾರ ಧ್ರುವ ಸರ್ದಾ ಅವರನ್ನು ಪರಾಭವಗೊಳಿಸಿದರು. ಈ ಮೂಲಕ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು.

ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಆಕಾಶ್‌ ಅಮೋಘ ಕೌಶಲ ತೋರಿದರು. ‘ಸ್ಟ್ರೈಕ್‌’ ಮತ್ತು ‘ಸ್ಪೇರ್‌’ಗಳ ಮೂಲಕ ಕೆಲ ಗೇಮ್‌ಗಳಲ್ಲಿ ಹತ್ತೂ ಪಿನ್‌ಗಳನ್ನು ಉರುಳಿಸುವ ಮೂಲಕ ಸ್ಕೋರ್‌ ಹೆಚ್ಚಿಸಿಕೊಂಡರು. ಅಂತಿಮವಾಗಿ ಅವರು 413 ಸ್ಕೋರ್‌ ಕಲೆಹಾಕಿದರು. ಧ್ರುವಾ 372 ಸ್ಕೋರ್‌ ಕಲೆಹಾಕಲಷ್ಟೇ ಶಕ್ತರಾದರು.

ಕರ್ನಾಟಕದ ಪ್ರತ್ಯೇಕ್‌ ಸತ್ಯಾ ಮತ್ತು ಆರ್‌.ಕಿಶನ್‌ ಅವರು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದರು. ಹಾಲಿ ಚಾಂಪಿಯನ್‌ ಶಬೀರ್‌ ಧನಕೋಟ್‌ ಐದನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಆಕಾಶ್‌ ಅವರು ಈ ಟೂರ್ನಿಯಲ್ಲಿ ಒಟ್ಟು 32 ಗೇಮ್‌ಗಳಿಂದ 206.50ರ ಸರಾಸರಿಯಲ್ಲಿ 6,608 ಸ್ಕೋರ್ ಗಳಿಸಿದರು. ಧ್ರುವ ಸರ್ದಾ ಅವರು 204.81ರ ಸರಾಸರಿಯಲ್ಲಿ 6,554 ಸ್ಕೋರ್‌ ಕಲೆಹಾಕಿದರು. ಸತ್ಯಾ (6547) ಮತ್ತು ಕಿಶನ್‌ (6479) ಕೂಡಾ ಮಿಂಚಿದರು.

ಮಹಿಳಾ ವಿಭಾಗದ ಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ಸಬೀನಾ 112 ಪಿನ್‌ಗಳಿಂದ ತೆಲಂಗಾಣದ ಸುಮತಿ ನಲ್ಲಬಂಟು ಅವರನ್ನು ಮಣಿಸಿದರು. ಈ ಮೂಲಕ ಹತ್ತನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಈ ಪಂದ್ಯದಲ್ಲಿ ಸಬೀನಾ 378 ಸ್ಕೋರ್‌ ಕಲೆಹಾಕಿದರು. ಸುಮತಿ 266 ಸ್ಕೋರ್‌ ಗಳಿಸಿದರು.

ಚಾಂಪಿಯನ್‌ಷಿಪ್‌ನಲ್ಲಿ ಸಬೀನಾ ಅವರು 20ಗೇಮ್‌ಗಳಿಂದ 192.10ರ ಸರಾಸರಿಯಲ್ಲಿ 3842 ಸ್ಕೋರ್‌ ಗಳಿಸಿದರೆ, ಸುಮತಿ 3503 ಸ್ಕೋರ್‌ ಸಂಗ್ರಹಿಸಿದರು. ಹರಿಯಾಣದ ಅನುಕೃತಿ ಬಿಷ್ಣೋಯ್‌ (3442) ಮೂರನೇ ಸ್ಥಾನ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !