ಬುಧವಾರ, ಜುಲೈ 6, 2022
21 °C

ಇಟಲಿ ಹಾದಿಯಲ್ಲಿ ನವಮಿ ಕನಸು

ಮಹೇಶ್‌ ಎಸ್‌. ಕನ್ನೇಶ್ವರ Updated:

ಅಕ್ಷರ ಗಾತ್ರ : | |

Prajavani

‘ಅಥ್ಲೀಟ್‌ ನವಮಿ ಗೌಡ ಅವರ ಐದು ವರ್ಷಗಳ ಕ್ರೀಡಾ ತ‍ಪಸ್ಸಿಗೆ ಕಡೆಗೂ ಫಲ ಸಿಕ್ಕಿದೆ. ಇಟಲಿಯಲ್ಲಿ ನಡೆಯಲಿರುವ ವಿಶ್ವವಿದ್ಯಾಲಯಗಳ ಜಾಗತಿಕ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ಸಿದ್ಧವಾಗುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮುಗ್ತಿಹಳ್ಳಿಯಿಂದ ಆರಂಭಗೊಂಡಿರುವ ನವಮಿ ಗೌಡ ಅವರ ಕ್ರೀಡಾ ಪಯಣಕ್ಕೆ ಹೊಸ ದಿಕ್ಕು ಸಿಕ್ಕಿದ್ದು ಮೂಡುಬಿದಿರೆಯ ಆಳ್ವಾಸ್‌ ಮಹಾವಿದ್ಯಾಲಯದಲ್ಲಿ.  ಕ್ರೀಡಾ ಕೋಟಾದ ಅಡಿಯಲ್ಲಿ ಆಳ್ವಾಸ್‌ ಕಾಲೇಜಿನಲ್ಲಿ ಎಂ.ಎ . ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ನವಮಿ ಗೌಡ ಅವರ ಕ್ರೀಡಾಸಾಧನೆಗೆ ಆಳ್ವಾಸ್‌ ಸಂಸ್ಥೆ ಡಾ. ಮೋಹನ್‌ ಆಳ್ವಾ ಅವರು ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ಎಲ್ಲ ಕ್ರೀಡಾ ಖರ್ಚು, ವೆಚ್ಚವನ್ನು ಸಂಸ್ಥೆಯೇ ನಿಭಾಯಿಸುತ್ತಿರುವುದರಿಂದ ಅಥ್ಲೀಟ್‌ ನವಮಿ ಗೌಡ ಅವರ ಸಾಧನೆಗೆ ಮತ್ತಷ್ಟು ಇಂಬು ಸಿಕ್ಕಿದೆ.

 ಗ್ರಾಮೀಣ ಕ್ರೀಡಾಪಟು ನವಮಿ ಗೌಡ ಅವರಿಗೆ ಯಾರೂ ರೋಲ್‌ ಮಾಡೆಲ್ ಇಲ್ಲ. ಆತ್ಮವಿಶ್ವಾಸ, ಗಟ್ಟಿತನವೇ ಅವರಿಗೆ ರೋಲ್‌ ಮಾಡೆಲ್‌ ಆಗಿದೆ. 100 ಮೀಟರ್‌ ಓಟಗಾರ್ತಿ ಆಗಿರುವ ನವಮಿ ಅವರು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದು, ಈಚೆಗೆ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ 100 ಮೀಟರ್‌ ಓಟದಲ್ಲಿ ಬೆಳ್ಳಿ ಗೆದ್ದು ಜುಲೈ 3 ರಿಂದ 14 ವರೆಗೆ ಇಟಲಿಯಲ್ಲಿ ನಡೆವ ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ 4x100 ಮೀಟರ್‌ ರಿಲೆಗೆ ಆಯ್ಕೆ ಆಗಿದ್ದಾರೆ. ಪದಕ ಸಾಧನೆಯ ದೊಡ್ಡ ಕನಸಿನೊಂದಿಗೆ ದಿನವು ಮೂರು ಗಂಟೆಗಳ ಕಾಲ ಆಭ್ಯಾಸ ಮಾಡುತ್ತಿದ್ದಾರೆ.

ಚಿಕ್ಕಮಗಳೂರ ವಿಶ್ವವಿದ್ಯಾಲಯ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾರೆ. ಇಲ್ಲಿ ಕಲಿಯುವಾಗಲೇ ಅವರು ಕ್ರೀಡೆಯ ಬಗ್ಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದರು. ರಾಜ್ಯಮಟ್ಟದಲ್ಲಿಯೂ ಕೂಡ ಪದಕ ಗೆದ್ದಿದ್ದರು. ಪಿಯುಸಿ ಓದಿಗಾಗಿ ಮೈಸೂರಿನ ಟೆರೆಷಿಯನ್ ಕಾಲೇಜಿಗೆ ಪ್ರವೇಶ ಪಡೆದು, ಐದು ವರ್ಷಗಳ ಕಾಲ ಕ್ರೀಡಾ ಹಾಸ್ಟೇಲ್‌ನಲ್ಲಿಯೇ ಇದ್ದುಕೊಂಡು ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡುವತ್ತ ಚಿತ್ತ ಹರಿಸಿದ್ದರು. ತಂದೆ ರಾಮೇಗೌಡ ನಿಧನದ ನಂತರ ತಾಯಿ ಗುಣವತಿ ಹಾಗೂ ಚಿಕ್ಕಮ್ಮ ಸವಿತಾ ಅವರು ನವಮಿ ಗೌಡ ಅವರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಮೊದಲು 400 ಮತ್ತು 200 ಮೀಟರ್ಸ್‌ನಲ್ಲಿ ಉತ್ತಮ ಟ್ರ್ಯಾಕ್‌ ಕಂಡುಕೊಂಡಿದ್ದ ನವಮಿ ಗೌಡ ಅವರು ಎತ್ತರ ಕಡಿಮೆ ಇದ್ದ ಕಾರಣದಿಂದ ತರಬೇತುದಾರರು 100 ಮೀಟರ್‌ನಲ್ಲಿ ಓಡುವಂತೆ ಸಲಹೆ ನೀಡಿದ್ದರು. ಅದಕ್ಕಾಗಿ ಅಗತ್ಯ ತರಬೇತಿ ಕೂಡಾ ಪಡೆದುಕೊಂಡಿದ್ದರು. ಪರಿಣಾಮ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದರು.

100 ಮೀ ಓಟವನ್ನು 12.4 ಸೆಕೆಂಡ್‌ನಲ್ಲಿ ಪೂರೈಸುತ್ತಿದ್ದ ನವಮಿ ಅವರು ಈಗ 11.5 ಸೆಕೆಂಡ್‌ಗಳಲ್ಲಿ ಗುರಿಸಾಧನೆ ಮಾಡುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ತರಬೇತುದಾರ ಯತೀಶ್‌ ಅವರ ಗರಡಿಯಲ್ಲಿ ಇಟಲಿ ಕ್ರೀಡಾಕೂಟಕ್ಕೆ ತರಬೇತಿ ಪಡೆಯುತ್ತಿದ್ದಾರೆ. ಆದರೆ, ಅವರಿಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಒಳಗಡೆ ಅಭ್ಯಾಸ ಮಾಡುವುದಕ್ಕೆ ಅವಕಾಶ ಸಿಗುತ್ತಿಲ್ಲ. ಕಬ್ಬನ್ ಪಾರ್ಕ್‌ ಆವರಣದಲ್ಲಿ, ಬೇರೆ ಟ್ರ್ಯಾಕ್‌ಗಳಲ್ಲಿ ಅಭ್ಯಾಸ ಮಾಡುವ ಪರಿಸ್ಥಿತಿ ಇದೆ. ಆದರೆ, ಎಷ್ಟೇ ಕೊರತೆಗಳು ಇದ್ದರೂ ಗೆಲುವಿನ ಓಟ ಮುಂದುವರಿಸಿದ್ದಾರೆ.

ಭುವನೇಶ್ವರದಲ್ಲಿ ನಡೆದ ಮುಕ್ತ ನ್ಯಾಷನಲ್ಸ್‌ನ 100  ಮೀಟರ್‌ ಓಟದಲ್ಲಿ 12.4 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಏಳನೇ ಸ್ಥಾನ ಪಡೆದಿದ್ದಾರೆ. ಮೂಡಬಿದಿರೆಯಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ 11.9 ಸೆಕೆಂಡುಗಳಲ್ಲಿ ಗುರಿ ತಲುಪಿ 6ನೇ ಸ್ಥಾನ ಗಳಿಸಿದ್ದಾರೆ. ವಿಶ್ವ ವಿಶ್ವವಿದ್ಯಾಲಯ ಗೇಮ್ಸ್‌ಗಾಗಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ 100 ಮೀಟರ್‌ ಓಟದಲ್ಲಿ ನವಮಿ ಬೆಳ್ಳಿ ಪದಕ ಗೆದ್ದು ಇಟಲಿ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ.

‘ಕಳೆದ ಐದು ವರ್ಷಗಳಲ್ಲಿ ಹಲವು ಪೆಟ್ಟುಗಳು ಬಿದ್ದಿವೆ, ಗಾಯಗಳೂ ಆಗಿವೆ. ಅವುಗಳನ್ನೆಲ್ಲ ಸವಾಲಾಗಿ ಸ್ವೀಕರಿಸಿ ತಯಾರಿ ನಡೆಸಿದ್ದೇನೆ. ತಂದೆಯ ಸಾವಿನ ನಂತರ ಸ್ವಲ್ಪಮಟ್ಟಿನ ಹಿನ್ನಡೆ ಆಗಿತ್ತು, ಅದನ್ನು ಈಗ ಸುಧಾರಿಸಿಕೊಂಡಿರುವೆ. ಟ್ರ್ಯಾಕ್‌ನಲ್ಲಿ ಸಿಗುವ ನೋವುಗಳಿಗೆ ಬೆಲೆ ಸಿಗಬೇಕು ಎಂದಾದರೆ ಪದಕ ಸಿಗಲೇಬೇಕು. ಇಟಲಿ ಕ್ರೀಡಾಕೂಟವು ಕ್ರೀಡಾ ಬದುಕಿಗೆ ತಿರುವು ನೀಡಲಿದೆ ಎಂಬ ಆಶಾಭಾವನೆ ಇದೆ. ನಮ್ಮದು ಮಧ್ಯಮ ವರ್ಗದ ಕುಟುಂಬ. ಆರ್ಥಿಕ ಸಂಕಷ್ಟದಲ್ಲಿಯೂ ಕ್ರೀಡೆಯಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವೆ. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರು ಪ್ರತಿ ತಿಂಗಳು ಫಿಟ್‌ನೆಸ್‌ ಹಾಗೂ ಆಹಾರ ಸೌಲಭ್ಯಕ್ಕಾಗಿ ಆರ್ಥಿಕ ಸಹಾಯ ಮಾಡುತ್ತಿದ್ದಾರೆ ಎಂದು ಅಥ್ಲೀಟ್‌ ನವಮಿ ಗೌಡ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು