ಶುಕ್ರವಾರ, ಮೇ 27, 2022
22 °C
ವಿಶ್ವ ಬ್ರಿಜ್ ಚಾಂಪಿಯನ್‌ಷಿಪ್‌: ಡಿ’ಆರ್ಸಿ ಟ್ರೋಫಿಗಾಗಿ ನಡೆದ ಟೂರ್ನಿಯಲ್ಲಿ ಬೆಳ್ಳಿ ಪದಕ

ವಿಶ್ವ ಬ್ರಿಜ್ ಚಾಂಪಿಯನ್‌ಷಿಪ್‌: ಇತಿಹಾಸ ನಿರ್ಮಿಸಿದ ಭಾರತ ಸೀನಿಯರ್ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಥರ್ಮಲ್‌ ಬಾತ್‌ ಮತ್ತು ಸ್ಪಾಗಳಿಗೆ ಹೆಸರು ಗಳಿಸಿರುವ ಇಟಲಿಯ ಸಾಲ್ಸೊಮಾಗೆಯೊರ್‌ ನಗರದಲ್ಲಿ ಭಾರತದ ಸೀನಿಯರ್ ಬ್ರಿಜ್ ಆಟಗಾರರು ಇತಿಹಾಸ ನಿರ್ಮಿಸಿದರು. ಎರಡು ವಾರ ನಡೆದ 45ನೇ ವಿಶ್ವ ಬ್ರಿಜ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಬೆಳ್ಳಿ ಪದಕ ಗೆದ್ದುಕೊಂಡಿತು.

ಭಾರತ ಸೀನಿಯರ್ ತಂಡದವರು ಡಿ’ಆರ್ಸಿ ಟ್ರೋಫಿಗಾಗಿ ಸ್ಪರ್ಧಿಸಿತ್ತು. ಆರ್‌.ಕೃಷ್ಣನ್ ನಾಯಕತ್ವದ ತಂಡದಲ್ಲಿ ಸುಬ್ರತಾ ಸಹಾ, ಸುಕಮಲ್ ದಾಸ್‌, ಅಶೋಕ್ ಗೋಯೆಲ್, ಅನಿಲ್ ಪಾಧ್ಯೆ ಮತ್ತು ರಾಜೇಶ್ ದಲಾಲ್ ಇದ್ದರು. ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿದ ತಂಡ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಪೋಲೆಂಡ್ ಎದುರು ಸೋತಿತು. ಐವರು ಮಾಜಿ ವಿಶ್ವ ಚಾಂಪಿಯನ್ನರನ್ನು ಒಳಗೊಂಡಿದ್ದ ಪೋಲೆಂಡ್‌ ಆರು ಸೆಟ್‌ ಮತ್ತು 96 ಡೀಲ್‌ಗಳಲ್ಲಿ 45 ಪಾಯಿಂಟ್‌ಗಳಿಂದ ಜಯ ಗಳಿಸಿತು.

ಬರ್ಮುಡಾ ಬೌಲ್ ಎಂದೇ ಕರೆಯಲಾಗುವ ವಿಶ್ವ ಬ್ರಿಜ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಟ್ರೋಫಿಗಳಿಗಾಗಿ ಸ್ಪರ್ಧೆಗಳು ನಡೆಯುತ್ತವೆ. ಬರ್ಮುಡಾ ಬೌಲ್ ಓಪನ್ ಇದರಲ್ಲಿ ಅತಿ ಹಳೆಯ ಸ್ಪರ್ಧೆಯಾಗಿದ್ದು ಡಿ’ಆರ್ಸಿ ಟ್ರೋಫಿ ತಂಡ ಚಾಂಪಿಯನ್‌ಷಿಪ್‌ 60 ವರ್ಷ ಮೇಲಿನವರಿಗಾಗಿ ನಡೆಯುತ್ತದೆ. ಮಹಿಳೆಯರಿಗಾಗಿ ವೆನಿಸ್ ಕಪ್ ಮತ್ತು ಪುರುಷ–ಮಹಿಳೆಯರ ಮಿಶ್ರ ಡಂಡಗಳಿಗಾಗಿ ವುಹಾನ್ ಕಪ್ ಟೂರ್ನಿ ನಡೆಯುತ್ತದೆ.  

ಪ್ರತಿ ಟ್ರೋಫಿಗಾಗಿ ರೌಂಡ್ ರಾಬಿನ್ ಸುತ್ತಿನ ನಂತರ ತಲಾ ಎಂಟು ತಂಡಗಳು ನಾಕೌಟ್‌ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಭಾರತವು ರೌಂಡ್ ರಾಬಿನ್‌ನಲ್ಲಿ ಐದನೇ ಸ್ಥಾನ ಗಳಿಸಿತ್ತು. ಅಮೆರಿಕ–1, ಡೆನ್ಮಾರ್ಕ್‌, ಪೋಲೆಂಡ್ ಮತ್ತು ಫ್ರಾನ್ಸ್ ಕೂಡ ನಾಕೌಟ್‌ಗೆ ಲಗ್ಗೆ ಇರಿಸಿದ್ದವು. ಅಂತಿಮ ಪ್ಲೇ ಆಫ್‌ ಪಂದ್ಯದಲ್ಲಿ ಭಾರತವು ಪ್ರಬಲ ಅಮೆರಿಕ–1 ತಂಡವನ್ನು ಮಣಿಸಿತ್ತು.  

ಕಳೆದ ವರ್ಷ ನಡೆಯಬೇಕಾಗಿದ್ದ ಟೂರ್ನಿಯನ್ನು ಕೋವಿಡ್‌–19ರಿಂದಾಗಿ ಈ ವರ್ಷಕ್ಕೆ ಮುಂದೂಡಲಾಗಿತ್ತು. ಟೂರ್ನಿಯಲ್ಲಿ 40 ದೇಶಗಳು ಪಾಲ್ಗೊಂಡಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.