ಶುಕ್ರವಾರ, ಏಪ್ರಿಲ್ 16, 2021
31 °C
ದೈತ್ಯರನ್ನು ಮಣಿಸಿದ್ದ ಬಾಕ್ಸರ್‌ಗೆ ಕೊನೆಯಲ್ಲಿ ನಿರಾಸೆ; ಟರ್ಕಿ, ಅರ್ಜೆಂಟೀನಾ ಪಾರಮ್ಯ

ನಿಖತ್ ಜರೀನ್‌, ಗೌರವ್‌ ಸೋಳಂಕಿಗೆ ಕಂಚಿನ ಪದಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಿ ಕ್ವಾರ್ಟರ್ ಫೈನಲ್‌ ಮತ್ತು ಕ್ವಾರ್ಟರ್ ಫೈನಲ್‌ ಬೌಟ್‌ಗಳಲ್ಲಿ ವಿಶ್ವ ಚಾಂಪಿಯನ್ನರನ್ನು ಮಣಿಸಿದ್ದ ಭಾರತದ ನಿಖತ್ ಜರೀನ್‌ ಅವರು ಇಸ್ತಾಂಬುಲ್‌ನಲ್ಲಿ ನಡೆಯುತ್ತಿರುವ ಬೋಸ್ಫೊರಸ್ ಬಾಕ್ಸಿಂಗ್ ಟೂರ್ನಿಯಲ್ಲಿ ಶುಕ್ರವಾರ ರಾತ್ರಿ ನಿರಾಸೆ ಅನುಭವಿಸಿದರು. ‍‍ಪುರುಷರ ವಿಭಾಗದಲ್ಲಿ ಗೌರವ್ ಸೋಳಂಕಿ ಕೂಡ ಸೋಲುಂಡು ಮರಳಿದರು.

ಮಹಿಳೆಯರ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ನಿಖತ್ ಜರೀನ್ ಸೆಮಿಫೈನಲ್‌ನಲ್ಲಿ ಟರ್ಕಿಯ ಬುಸೆನಾಸ್ ಕಕಿರೊಗುಲು  ಎದುರು 0–5ರಲ್ಲಿ ಸೋಲುಂಡರು. ಬುಸೆನಾಸ್, 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಪ್ರಿ ಕ್ವಾರ್ಟರ್‌ನಲ್ಲಿ ವಿಶ್ವ ಚಾಂಪಿಯನ್‌ ರಷ್ಯಾದ ಪಲ್ಟೆಸೆವಾ ಎಕಟೇರಿನಾ ಅವರನ್ನು ಮಣಿಸಿದ್ದ ನಿಖತ್ ಎಂಟರ ಘಟ್ಟದಲ್ಲಿ ಮಾಜಿ ವಿಶ್ವ ಚಾಂಪಿಯನ್ ಕಜಕಸ್ತಾನದ ನಜೀಂ ಕೈಜಬೆ ಅವರನ್ನು ಮಣಿಸಿದ್ದರು.   

ಸೆಮಿಫೈನಲ್‌ನ ಮೊದಲ ಸುತ್ತಿನಲ್ಲಿ ಇಬ್ಬರೂ ತಾಳ್ಮೆಯಿಂದ ಆಡಿದರು. ಮುಂದಿನ ಸುತ್ತುಗಳಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಆದರೆ ಪಾಯಿಂಟ್‌ಗಳನ್ನು ಗಳಿಸುವಲ್ಲಿ ನಿಖತ್ ವಿಫಲರಾದರು. ಪ್ರಬಲ ಪಂಚ್‌ಗಳೊಂದಿಗೆ ಮಿಂಚಿದ ಸ್ಥಳೀಯ ಕ್ರೀಡಾಪಟು ಸುಲಭವಾಗಿ ಗೆಲುವು ಸಾಧಿಸಿದರು.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಸೋಳಂಕಿ ಕೂಡ ಈ ಹಿಂದಿನ ಸುತ್ತುಗಳಲ್ಲಿ ಅಮೋಘ ಸಾಧನೆ ಮಾಡಿದ್ದರು. ಆದರೆ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾದ ನಿರ್ಕೊ ಕುಯೆಲೊಗೆ0–5ರಲ್ಲಿ ಮಣಿದರು. ಆರಂಭದಲ್ಲಿ ಆಕ್ರಮಣಕಾರಿಯಾಗಿ ಮುನ್ನುಗ್ಗಿದ ಸೋಳಂಕಿ ಭರ್ಜರಿ ಪಂಚ್‌ಗಳ ಮೂಲಕ ಎದುರಾಳಿಗೆ ಸವಾಲೊಡ್ಡಿದರು. ಆದರೆ ನಂತರ ಎದುರಾಳಿ ಚೇತರಿಸಿಕೊಂಡು ಸತತ ಪಾಯಿಂಟ್ ಕಳೆ ಹಾಕಿದರು.

ಎರಡು ಕಂಚಿನ ಪದಕಗಳೊಂದಿಗೆ ಟೂರ್ನಿಯಲ್ಲಿ ಭಾರತದ ಅಭಿಯಾನ ಮುಕ್ತಾಯಗೊಂಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು