ಶನಿವಾರ, ಜನವರಿ 18, 2020
20 °C

ಪದಕದ ಗುರಿ ಸವಾಲಿನ ದಾರಿ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಹೊಸ ವರ್ಷ ಕಾಲಿಟ್ಟಾಯ್ತು. ಕ್ರೀಡಾ ಕ್ಷೇತ್ರದಲ್ಲಿ ಇದು ಸವಾಲಿನ ವರ್ಷ. ಮಹತ್ವದ ಕ್ರೀಡಾಕೂಟಗಳು, ಟೂರ್ನಿಗಳ ಜೊತೆಯಲ್ಲಿ ಮಹಾ ಕ್ರೀಡಾಹಬ್ಬ ಒಲಿಂಪಿಕ್ಸ್ ನಡೆಯುವುದೂ ಇದೇ ವರ್ಷ. ಟ್ವೆಂಟಿ-20 ಕ್ರಿಕೆಟ್‌ನಂತೆ 2020ನೇ ಇಸವಿಯನ್ನು ರೋಚಕವಾಗಿಸಲು ಕ್ರೀಡಾಪಟುಗಳು ಪಣ ತೊಟ್ಟು ತೊಡೆ ತಟ್ಟಿ ನಿಂತಿದ್ದಾರೆ. ಹಾಕಿ, ಶೂಟಿಂಗ್, ಈಕ್ವೆಸ್ಟ್ರಿಯನ್, ಆರ್ಚರಿ, ಕುಸ್ತಿ ಮತ್ತು ಅಥ್ಲೆಟಿಕ್ಸ್‌ನಲ್ಲಿ ಈಗಾಗಲೇ 62 ಮಂದಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ಉಳಿದ ಕೋಟಾಗಳು ಇನ್ನಷ್ಟೇ ತುಂಬಬೇಕಿವೆ.

ಅಥ್ಲೆಟಿಕ್ಸ್‌ ಸವಾಲು; ಆರ್ಚರಿಗೆ ಅತನು ಬಲ

ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ಸ್ ಕೋಟಾ ಪೂರ್ಣಗೊಳಿಸಲು ಇನ್ನೂ ನಾಲ್ಕು ತಿಂಗಳ ಅವಧಿ ಇದೆ. ಭಾರತ ಪಾಲ್ಗೊಂಡ ಮೊತ್ತಮೊದಲ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳು ಅಥ್ಲೆಟಿಕ್ಸ್‌ನಲ್ಲಿ ಬಂದಿದ್ದವು. ನಂತರ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ದೇಶದ ಸಾಧನೆ ಶೂನ್ಯ. ಈ ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲು ಸಾಧ್ಯವಾಗದ ಕಾರಣ ಒಲಿಂಪಿಕ್ಸ್‌ನಲ್ಲೂ ಭಾರತದ ಅಥ್ಲೀಟ್‌ಗಳ ಮೇಲೆ ಹೆಚ್ಚಿನ ನಿರೀಕ್ಷೆ ಇಲ್ಲ. ನಡಿಗೆ ಸ್ಪರ್ಧೆಯಲ್ಲಿ ಕೆ.ಟಿ ಇರ್ಫಾನ್, ಸ್ಟೀಪಲ್ ಚೇಸ್‌ನಲ್ಲಿ ಅವಿನಾಶ ಸಬಳೆ ಆಯ್ಕೆಯಾಗಿದ್ದು ಮಿಶ್ರ ರಿಲೇ ತಂಡವೂ ‘ರೇಸ್’ನಲ್ಲಿದೆ.
ಆರ್ಚರಿಯಲ್ಲಿ ತರುಣ್ ದೀಪ್ ರಾಯ್, ಅತನು ದಾಸ್ ಮತ್ತು ಪ್ರವೀಣ್ ಜಾಧವ್ ಈಗಾಗಲೇ ಅರ್ಹತೆ ಗಳಿಸಿದ್ದಾರೆ. ಮಹಿಳಾ ವಿಭಾಗಕ್ಕೆ ಇನ್ನೂ ಹಾದಿ ತೆರೆಯಲಿಲ್ಲ.

ಶೂಟಿಂಗ್: ಪದಕಕ್ಕೆ ‘ಗುರಿ’ ಇಡಲು ಸನ್ನದ್ಧ

ವಿಶ್ವ ಮಟ್ಟದ ಕೂಟಗಳಲ್ಲಿ ಭಾರತಕ್ಕೆ ಪದಕ ಗಳಿಕೆಯ ನಿರೀಕ್ಷೆಗಳಿರುವುದು ಶೂಟಿಂಗ್‌ನಲ್ಲಿ. ಕಾಮನ್‌ವೆಲ್ತ್ ಗೇಮ್ಸ್‌ನಿಂದ ಶೂಟಿಂಗ್ ಕೈಬಿಡಲು ಆಯೋಜಕರು ಮುಂದಾದಾಗ ಭಾರತವು ಕೂಟವನ್ನೇ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದು ಈ ಕಾರಣಕ್ಕೇನೆ. ಒಲಿಂಪಿಕ್ಸ್‌ನಲ್ಲಿ ಭಾರತ ಶೂಟಿಂಗ್‌ನಲ್ಲಿ ಈ ವರೆಗೆ ಗೆದ್ದಿರುವುದು ನಾಲ್ಕು ಪದಕ ಮಾತ್ರ. ಆದರೆ ಇತ್ತೀಚಿಗೆ ದೇಶದ ಶೂಟರ್‌ಗಳು ಮಾಡುತ್ತಿರುವ ಸಾಧನೆಯು ಟೋಕಿಯೊದಲ್ಲಿ ಪದಕಗಳನ್ನು ಬಾಚುವ ನಿರೀಕ್ಷೆ ಮೂಡಿಸಿದೆ. 10 ಮೀಟರ್ಸ್ ಏರ್ ರೈಫಲ್, ಏರ್ ಪಿಸ್ತೂಲ್‌ನ ಪುರುಷ-ಮಹಿಳಾ ವಿಭಾಗ, 25 ಮೀಟರ್ಸ್ ಪಿಸ್ತೂಲ್‌ನಲ್ಲಿ ಮಹಿಳಾ ವಿಭಾಗ, 50 ಮೀಟರ್ಸ್ ರೈಫಲ್ 3 ಪೊಸಿಷನ್‌ನಲ್ಲಿ ಪುರುಷ-ಮಹಿಳಾ ವಿಭಾಗ ಹಾಗೂ ಸ್ಕೀಟ್‌ನಲ್ಲಿ ಪುರುಷರ ವಿಭಾಗದ ಕೋಟಾಗಳು ಈಗಾಗಲೇ ಪೂರ್ಣಗೊಂಡಿವೆ. ದಿವ್ಯಾಂಶ್ ಸಿಂಗ್ ಪನ್ವರ್, ಸೌರಭ್ ಚೌಧರಿ, ಅಂಜುಮ್ ಮೌದ್ಗಿಲ್, ಅಪೂರ್ವಿ ಚಾಂಡೇಲ, ಮನು ಭಾಕರ್ ಮುಂತಾದವರು ಪದಕ ಗೆಲ್ಲುವ ಉತ್ಸಾಹದಲ್ಲಿದ್ದಾರೆ.

ಕುಸ್ತಿಯಲ್ಲಿ ಶಕ್ತಿ ತೋರಲು ಅವಕಾಶ

ಸ್ವಾತಂತ್ರ್ಯಾನಂತರ ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಪದಕ ಗೆದ್ದುಕೊಂಡಿದ್ದು ಕುಸ್ತಿಯಲ್ಲಿ ಕೆ.ಡಿ.ಜಾಧವ್‌ ಮೂಲಕ(1952). ಹಾಕಿ ಬಿಟ್ಟರೆ ಭಾರತಕ್ಕೆ ಹೆಚ್ಚು ಒಲಿಂಪಿಕ್ಸ್ ಪದಕಗಳನ್ನು ಗೆದ್ದುಕೊಟ್ಟದ್ದು ಕುಸ್ತಿ. ಆದರೆ ಚಿನ್ನ ಗೆಲ್ಲುವ ಕನಸು ಇನ್ನೂ ಸಾಕಾರಗೊಳ್ಳಲಿಲ್ಲ. ಈ ಬಾರಿ ಈಗಾಗಲೇ ನಾಲ್ಕು ಮಂದಿ ಸ್ಪರ್ಧೆ ಖಾತರಿಪಡಿಸಿಕೊಂಡಿದ್ದಾರೆ. 53 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ವಿನೇಶ್ ಪೋಗಟ್ ಈ ಬಾರಿ ಮೊದಲು ಅರ್ಹತೆ ಗಳಿಸಿದ ಕುಸ್ತಿಪಟು. ಕಜಕಸ್ತಾನದಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದು ಅವರು ಈ ಸಾಧನೆ ಮಾಡಿದ್ದರು. 65 ಕೆಜಿ ವಿಭಾಗದಲ್ಲಿ ಬಜರಂಗ್ ಪೂನಿಯಾ, 57 ಕೆಜಿಯಲ್ಲಿ ರವಿಕುಮಾರ್ 86 ಕೆಜಿ ವಿಭಾಗದಲ್ಲಿ ದೀಪಕ್ ಪೂನಿಯಾ ಸ್ಪರ್ಧಿಸಲಿದ್ದಾರೆ. ಕಶಾಬಾ ದಾದಾಸಾಹೇಬ್ ಜಾಧವ್ 1952ರಲ್ಲಿ ಕಂಚು ಗೆದ್ದ ನಂತರ ಕುಸ್ತಿಯಲ್ಲಿ ಪದಕ ಗೆಲ್ಲಲು ಭಾರತ ಅರ್ಧ ಶತಮಾನ ಕಾಯಬೇಕಾಗಿ ಬಂದಿತ್ತು. ಸುಶೀಲ್ ಕುಮಾರ್, ಯೋಗೇಶ್ವರ್ ದತ್ತಾ ಕ್ರಮವಾಗಿ 2008 ಹಾಗೂ 2012ರಲ್ಲಿ ಪದಕ ಗೆದ್ದ ನಂತರ, ಕಳೆದ ಬಾರಿ ಸಾಕ್ಷಿ ಮಲಿಕ್ ‘ಸ್ತ್ರೀಶಕ್ತಿ’ ಪ್ರದರ್ಶಿಸಿದ್ದಾರೆ. ಈ ಬಾರಿ ಭಾರತಕ್ಕೆ ಕುಸ್ತಿಯ ಕಾಣಿಕೆ ಏನೆಂದು ಕಾದುನೋಡಬೇಕು.

ಈಜು: ಶ್ರೀಹರಿ, ಕುಶಾಗ್ರ ಮೇಲೆ ನಿರೀಕ್ಷೆ

ಈಜಿನಲ್ಲಿ ಒಮ್ಮೆಯೂ ಒಲಿಂಪಿಕ್ಸ್ ಪದಕ ಗೆಲ್ಲಲು ಸಾಧ್ಯವಾಗದ ಭಾರತ ಈ ಬಾರಿ ಕನಸು ಸಾಕಾರಗೊಳಿಸುವ ಹಾದಿಯಲ್ಲಿದೆ. ಕಳೆದ ಬಾರಿ ವಿಶ್ವವಿದ್ಯಾಲಯ ಮಟ್ಟದಿಂದ ಆಯ್ಕೆಯಾದ ಇಬ್ಬರನ್ನು ಕಳುಹಿಸಿದ್ದ ಭಾರತ ಈ ಸಲ ಕುಶಾಗ್ರ ರಾವತ್, ಅದ್ವೈತ್ ಪಾಗೆ, ಸಾಜನ್ ಪ್ರಕಾಶ್ ಅವರ ಮೇಲೆ ಭರವಸೆ ಇದೆ. ಕನ್ನಡಿಗ ಶ್ರೀಹರಿ ನಟರಾಜ್ ಅವರ ಮೇಲೆಯೂ ನಿರೀಕ್ಷೆ ಇದೆ. ಭಾರತ ಈಜಿನಲ್ಲಿ ಒಮ್ಮೆಯೂ ‘ಎ’ ಹಂತದ ಅರ್ಹತೆ ಗಳಿಸಲಿಲ್ಲ. ಕುಶಾಗ್ರ, ಅದ್ವೈತ್ ಮತ್ತು ಸಾಜನ್ ಈಗ ‘ಬಿ’ ಗುಂಪಿನ ಅರ್ಹತೆ ಗಳಿಸಿದ್ದು ‘ಎ’ ವಿಭಾಗಕ್ಕಾಗಿ ಪ್ರಯತ್ನ ನಡೆಯಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು