ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಷನ್ಸ್‌ ಕಪ್‌ ಆನ್‌ಲೈನ್‌ ಚೆಸ್‌ ಟೂರ್ನಿ: ಭಾರತಕ್ಕೆ ಐದನೇ ಸ್ಥಾನ

ಅಂತಿಮ ಸುತ್ತಿನಲ್ಲಿ ರಷ್ಯಾ ಎದುರು ಪರಾಭವ
Last Updated 10 ಮೇ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಪರಿಣಾಮಕಾರಿ ಸಾಮರ್ಥ್ಯ ತೋರಲು ವಿಫಲವಾದ ಭಾರತ ತಂಡದವರು ನೇಷನ್ಸ್‌ ಕಪ್‌ ಆನ್‌ಲೈನ್‌ ಚೆಸ್‌ ಟೂರ್ನಿಯಲ್ಲಿ ಐದನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ್ದಾರೆ.

ಶನಿವಾರ ತಡರಾತ್ರಿ ನಡೆದ ಹತ್ತನೇ ಸುತ್ತಿನ ಹಣಾಹಣಿಯಲ್ಲಿ ಭಾರತ 1.5–2.5 ಪಾಯಿಂಟ್ಸ್‌ನಿಂದ ರಷ್ಯಾ ಎದುರು ಪರಾಭವಗೊಂಡಿತು. ಇದಕ್ಕೂ ಮುನ್ನ ನಡೆದಿದ್ದ ಹೋರಾಟದಲ್ಲಿ ಭಾರತವು ಇಷ್ಟೇ ಅಂತರದಿಂದ ಚೀನಾ ತಂಡಕ್ಕೆ ಶರಣಾಗಿತ್ತು.

ರಷ್ಯಾ ಎದುರಿನ ಪೈಪೋಟಿಯ ಆರಂಭದಲ್ಲೇ ಭಾರತಕ್ಕೆ ನಿರಾಸೆ ಕಾಡಿತು. ವಿದಿತ್‌ ಗುಜರಾತಿ, ವ್ಲಾದಿಸ್ಲಾವ್‌ ಅರ್ಟೆಮೀವ್‌ ಎದುರು ಸೋತರು. ಎರಡನೇ ಬೋರ್ಡ್‌ನಲ್ಲಿ ಕಣಕ್ಕಿಳಿದಿದ್ದ ಬಿ.ಅಧಿಬಾನ್‌ ಕೂಡ ನಿರಾಸೆ ಮೂಡಿಸಿದರು. ಭಾರತದ ಆಟಗಾರನನ್ನು ಮಣಿಸಿದ ಡಿಮಿಟ್ರಿ ಆ್ಯಂಡ್ರೆಕಿನ್‌, ರಷ್ಯಾ ತಂಡದ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು.

ಸರ್ಜಿ ಕರ್ಜಾಕಿನ್‌ ಎದುರಿನ ಹಣಾಹಣಿಯಲ್ಲಿ ಪಿ.ಹರಿಕೃಷ್ಣ ಡ್ರಾ ಸಾಧಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತದ ಖಾತೆಗೆ ಅರ್ಧ ಪಾಯಿಂಟ್‌ ಸೇರ್ಪಡೆ ಮಾಡಿದರು.

ನಾಲ್ಕನೇ ಬೋರ್ಡ್‌ನ ಪೈಪೋಟಿಯಲ್ಲಿ ರ‍್ಯಾಪಿಡ್‌ ವಿಭಾಗದ ವಿಶ್ವ ಚಾಂಪಿಯನ್‌ ಕೊನೇರು ಹಂಪಿ ಮಿಂಚಿದರು. ಓಲ್ಗಾ ಗಿರ‍್ಯಾ ಅವರನ್ನು ಸೋಲಿಸಿದ ಅವರು ಭಾರತದ ಹಿನ್ನಡೆಯನ್ನು ತಗ್ಗಿಸಲಷ್ಟೇ ಶಕ್ತರಾದರು. ಭಾರತವು ಒಟ್ಟು 5 ಮ್ಯಾಚ್‌ ಪಾಯಿಂಟ್ಸ್‌ ಹಾಗೂ 17.5 ಬೋರ್ಡ್‌ ಪಾಯಿಂಟ್ಸ್‌ ಗಳಿಸಿತು.

ಹತ್ತನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಯುರೋಪ್‌ ತಂಡ 2–2 ಪಾಯಿಂಟ್ಸ್‌ನಿಂದ ವಿಶ್ವ ಇತರೆ ತಂಡದ ಎದುರು ಡ್ರಾ ಮಾಡಿಕೊಂಡಿತು. ಈ ಪಂದ್ಯದಲ್ಲಿ ಗೆದ್ದಿದ್ದರೆ ಯುರೋಪ್‌ ತಂಡ ಸೂಪರ್‌ ಫೈನಲ್‌ ಪ್ರವೇಶಿಸುವ ಸಾಧ್ಯತೆ ಇತ್ತು. 13 ಮ್ಯಾಚ್‌ ಪಾಯಿಂಟ್ಸ್‌ ಹಾಗೂ 21.5 ಬೋರ್ಡ್‌ ಪಾಯಿಂಟ್ಸ್‌ ಸಂಗ್ರಹಿಸಿದ ಈ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ರಷ್ಯಾ (8 ಮ್ಯಾಚ್‌ ಪಾಯಿಂಟ್ಸ್‌; 19 ಬೋರ್ಡ್‌ ಪಾಯಿಂಟ್ಸ್‌) ನಂತರದ ಸ್ಥಾನ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT