ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್‌: ನವೀನ್‌ ‘ಎಕ್ಸ್‌ಪ್ರೆಸ್‌’ಗೆ ಮಣಿದ ಯೋಧಾ

ದಬಂಗ್ ಡೆಲ್ಲಿಗೆ ಮತ್ತೆ ಅಗ್ರ ಸ್ಥಾನ
Last Updated 8 ಜನವರಿ 2022, 16:32 IST
ಅಕ್ಷರ ಗಾತ್ರ

ಬೆಂಗಳೂರು: ಮೊದಲಾರ್ಧದಲ್ಲಿ ಮಿಂಚಲು ವಿಫಲರಾದ ‘ಎಕ್ಸ್‌ಪ್ರೆಸ್‌’ ಖ್ಯಾತಿಯ ನವೀನ್ ದ್ವಿತೀಯಾರ್ಧದಲ್ಲಿ ಭರ್ಜರಿ ರೇಡಿಂಗ್ ಮೂಲಕ ಕಬಡ್ಡಿ ಪ್ರಿಯರನ್ನು ರಂಜಿಸಿದರು. ಆ ಮೂಲಕ ದಬಂಗ್ ಡೆಲ್ಲಿ ತಂಡದ ರೋಚಕ ಜಯಕ್ಕೆ ಕಾರಣರಾದರು. ವೈಟ್‌ಫೀಲ್ಡ್‌ನ ಹೋಟೆಲ್ ಶೆರಟಾನ್ ಗ್ರ್ಯಾಂಡ್‌ನ ಮ್ಯಾಟ್‌ನಲ್ಲಿ ಶನಿವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ದಬಂಗ್ ಡೆಲ್ಲಿ 37–33ರಲ್ಲಿ ಯು.ಪಿ ಯೋಧಾವನ್ನು ಮಣಿಸಿತು. ಈ ಮೂಲಕ ಪಾಯಿಂಟ್‌ ಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೇರಿತು.

ಮೊದಲಾರ್ಧದಲ್ಲಿ 18–13ರಲ್ಲಿ ಮುನ್ನಡೆ ಸಾಧಿಸಿದ್ದ ಯು.ಪಿ.ಯೋಧಾಗೆ ದ್ವಿತೀಯಾರ್ಧದಲ್ಲಿ ನವೀನ್ ಆಘಾತ ನೀಡಿದರು. ದ್ವಿತೀಯಾರ್ಧದ ಆರಂಭದಲ್ಲೇ ಪ್ರದೀಪ್ ನರ್ವಾಲ್ ಅವರನ್ನು ಕ್ಯಾಚ್ ಮಾಡಿ ಟ್ಯಾಕ್ಲಿಂಗ್ ಪಾಯಿಂಟ್ ಕೂಡ ಗಳಿಸಿದ ನವೀನ್ ಒಟ್ಟು 5 ಬೋನಸ್ ಪಾಯಿಂಟ್‌ಗಳೊಂದಿಗೆ ಒಟ್ಟು 18 ಪಾಯಿಂಟ್ ಗಳಿಸಿ ಮತ್ತೊಮ್ಮೆ ‘ಸೂಪರ್‌ 10’ ಸಾಧನೆಗೆ ಪಾತ್ರರಾದರು.

ಆಲ್‌ರೌಂಡರ್ ವಿಜಯ್ 7 ಪಾಯಿಂಟ್ ಗಳಿಸಿದರೆ ಮಂಜಿತ್ ಚಿಲ್ಲಾರ್ 4 ಟ್ಯಾಕ್ಲಿಂಗ್ ಪಾಯಿಂಟ್‌ಗಳ ಮೂಲಕ ಮಿಂಚಿದರು. ಯು.ಪಿ.ಯೋಧಾದ ಪ್ರದೀಪ್ ನರ್ವಾಲ್ 9 ಪಾಯಿಂಟ್ ಗಳಿಸಿದರು. ಸುರೇಂದರ್ ಗಿಲ್ ಕೂಡ 9 ಪಾಯಿಂಟ್ ಗಳಿಸಿದರು. ರೇಡರ್‌ ಅಗಿರುವ ಅವರು ದ್ವಿತೀಯಾರ್ಧದಲ್ಲಿ ನವೀನ್ ಕುಮಾರ್ ಅವರನ್ನು ಕ್ಯಾಚ್ ಮಾಡಿದರು. ಆದರೆ ತಂಡದ ಕೊನೆಯ ರೇಡ್‌ನಲ್ಲಿ ಸಮಬಲ ಸಾಧಿಸಲು ಒದಗಿದ್ದ ಅತ್ಯಪೂರ್ವ ಅವಕಾಶವನ್ನು ಕೈಚೆಲ್ಲಿದರು. ಅಂಗಣದಿಂದ ಹೊರಗೆ ಹೋದ ಅವರು ‘ಔಟ್‌‘ ಆಗಿ ಡೆಲ್ಲಿಯ ಜಯವನ್ನು ಸುಲಭಗೊಳಿಸಿದರು.

ಯು ಮುಂಬಾ ಜಯಭೇರಿ

ಎರಡನೇ ಪಂದ್ಯದಲ್ಲಿ ಯು ಮುಂಬಾ 48–38ರಲ್ಲಿ ತೆಲುಗು ಟೈಟನ್ಸ್ ವಿರುದ್ಧ ಜಯ ಸಾಧಿಸಿತು. ವಿ.ಅಜಿತ್ ಮತ್ತು ಅಭಿಷೇಕ್ ಸಿಂಗ್ ಅವರ ಅಮೋಘ ಆಟದ ಬಲದಿಂದ ಯು ಮುಂಬಾ ಮೊದಲಾರ್ಧದಲ್ಲಿ 28–13ರ ಮುನ್ನಡೆ ಗಳಿಸಿತ್ತು. ಅಭಿಷೇಕ್‌ ದ್ವಿತೀಯಾರ್ಧದಲ್ಲೂ ಮಿಂಚಿದರು. ಒಟ್ಟು 13 ಟಚ್ ಪಾಯಿಂಟ್‌ಗಳು ಅವರ ಖಾತೆಗೆ ಸೇರಿದವು. ಅಜಿತ್ 2 ಬೋನಸ್ ಸೇರಿದಂತೆ ಒಟ್ಟು 8 ಪಾಯಿಂಟ್ ಗಳಿಸಿದರು. ರಿಂಕು 7 ಟ್ಯಕ್ಲಿಂಗ್ ಪಾಯಿಂಟ್ ಕಲೆ ಹಾಕಿದರು. ತೆಲುಗು ಟೈಟನ್ಸ್ ಪರ ರಾಕೇಶ್ ಗೌಡ್ 7 ಮತ್ತು ಅಂಕಿತ್ ಬೇನಿವಾಲ್ 6 ಪಾಯಿಂಟ್ ಕಲೆ ಹಾಕಿದರು. ಮೊಹಮ್ಮದ್ ಶಿಹಾಸ್ 5 ಟ್ಯಾಕ್ಲಿಂಗ್ ಪಾಯಿಂಟ್ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT