ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಜ್ಯೋತಿಯಾತ್ರೆಗೆ ಪ್ರಧಾನಿ ಚಾಲನೆ

ಚೆಸ್‌ ಒಲಿಂಪಿಯಾಡ್‌ನಲ್ಲಿ ಇದೇ ಮೊದಲ ಬಾರಿ ಆಯೋಜನೆ
Last Updated 19 ಜೂನ್ 2022, 19:53 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಚೆಸ್‌ ಒಲಿಂಪಿಯಾಡ್‌ನಲ್ಲಿ ಇದೇ ಮೊದಲ ಬಾರಿ ಆಯೋಜಿಸಿರುವ ಕ್ರೀಡಾ ಜ್ಯೋತಿ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು.

44ನೇ ಚೆಸ್‌ ಒಲಿಂಪಿಯಾಡ್‌ ತಮಿಳುನಾಡಿನ ಮಹಾಬಲಿಪುರಂನಲ್ಲಿ ಜುಲೈ 28 ರಿಂದ ಆಗಸ್ಟ್‌ 10ರ ವರೆಗೆ ನಡೆಯಲಿದೆ. ಅಂತರರಾಷ್ಟ್ರೀಯ ಚೆಸ್‌ ಸಂಸ್ಥೆ (ಫಿಡೆ) ಇದೇ ಮೊದಲ ಬಾರಿಗೆ ಚೆಸ್‌ ಒಲಿಂಪಿಯಾಡ್‌ನಲ್ಲಿ ಒಲಿಂಪಿಕ್‌ ಮಾದರಿಯಲ್ಲಿ ಜ್ಯೋತಿಯಾತ್ರೆ ಪರಿಚಯಿಸಿದೆ.

ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಫಿಡೆ ಅಧ್ಯಕ್ಷ ಅರ್ಕೇದಿ ದೊರ್ಕೊವಿಚ್‌ ಅವರು ಕ್ರೀಡಾ ಜ್ಯೋತಿಯನ್ನು ಪ್ರಧಾನಿಗೆ ಹಸ್ತಾಂತರಿಸಿದರು. ಪ್ರಧಾನಿ ಅದನ್ನು ಗ್ರ್ಯಾಂಡ್‌ಮಾಸ್ಟರ್‌ ವಿಶ್ವನಾಥನ್‌ ಆನಂದ್‌ಗೆ ನೀಡುವುದರೊಂದಿಗೆ ಯಾತ್ರೆಗೆ ಚಾಲನೆ ಲಭಿಸಿತು.

ಜ್ಯೋತಿಯಾತ್ರೆ 40 ದಿನಗಳಲ್ಲಿ 75 ನಗರಗಳಲ್ಲಿ ಸಾಗಿ, ಚೆನ್ನೈ ಸಮೀಪದ ಮಹಾಬಲಿಪುರಂ ತಲುಪಲಿದೆ. ಪ್ರತಿ ತಾಣದಲ್ಲೂ ಆಯಾ ರಾಜ್ಯದ ಗ್ರ್ಯಾಂಡ್‌ಮಾಸ್ಟರ್‌ಗಳು ಜ್ಯೋತಿಯನ್ನು ಸ್ವೀಕರಿಸಲಿದ್ದಾರೆ. ಲೆಹ್, ಶ್ರೀನಗರ, ಜೈಪುರ, ಸೂರತ್, ಮುಂಬೈ, ಭೋಪಾಲ್, ಪಟ್ನಾ, ಕೋಲ್ಕತ್ತ, ಗ್ಯಾಂಗ್ಟಕ್, ಹೈದರಾಬಾದ್, ಬೆಂಗಳೂರು, ತ್ರಿಶೂರ್‌, ಪೋರ್ಟ್‌ಬ್ಲೇರ್‌ ಮತ್ತು ಕನ್ಯಾಕುಮಾರಿ ನಗರಗಳಲ್ಲಿ ಯಾತ್ರೆ ಸಾಗಲಿದೆ.

100 ವರ್ಷಗಳ ಇತಿಹಾಸ ಹೊಂದಿರುವ ಚೆಸ್‌ ಒಲಿಂಪಿಯಾಡ್‌ಗೆ ಭಾರತ ಆತಿಥ್ಯ ವಹಿಸುತ್ತಿರುವುದು ಇದೇ ಮೊದಲು. 188 ದೇಶಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ.

ಚೆಸ್‌ಗೆ ದೊರೆತ ಗೌರವ: ’ಚೆಸ್‌ ಒಲಿಂಪಿಯಾಡ್‌ನ ಮೊಟ್ಟಮೊದಲ ಜ್ಯೋತಿಯಾತ್ರೆಗೆ ಭಾರತದಲ್ಲಿ ಚಾಲನೆ ಲಭಿಸಿದೆ. ನಮ್ಮ ದೇಶ ಇದೇ ಮೊದಲ ಬಾರಿಗೆ ಈ ಪ್ರತಿಷ್ಠಿತ ಟೂರ್ನಿಗೆ ಆತಿಥ್ಯ ವಹಿಸಿದೆ. ಚೆಸ್‌ ಕ್ರೀಡೆಯ ಹುಟ್ಟೂರು ಎನಿಸಿರುವ ಈ ನಾಡು, ಪ್ರಮುಖ ಟೂರ್ನಿಯನ್ನು ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿ. ಇದು ಭಾರತಕ್ಕೆ ಮಾತ್ರವಲ್ಲ, ಚೆಸ್‌ ಕ್ರೀಡೆಗೆ ದೊರೆತ ಗೌರವ’ ಎಂದು ಪ್ರಧಾನಿ ಹೇಳಿದರು.

ಕ್ರೀಡಾ ಸಚಿವ ಅನುರಾಗ್‌ ಠಾಕೂರ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT