ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Commonwealth Games: ಚಿನ್ನ ಗೆದ್ದ ಅಚಿಂತ್ಯ ಶಿವಲಿಗೆ ಪ್ರಧಾನಿ ಮೋದಿ ಅಭಿನಂದನೆ

Last Updated 1 ಆಗಸ್ಟ್ 2022, 5:33 IST
ಅಕ್ಷರ ಗಾತ್ರ

ನವದೆಹಲಿ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೂರನೇ ಚಿನ್ನ ಗೆದ್ದುಕೊಟ್ಟಿರುವ ವೇಟ್‌ಲಿಫ್ಟರ್ ಅಚಿಂತ್ಯ ಶಿವಲಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಕ್ರೀಡಾಕೂಟಕ್ಕೆ ತೆರಳುವ ಮುನ್ನ ಶಿವಲಿ ಅವರ ಜತೆ ಸಂವಾದ ನಡೆಸಿದ್ದನ್ನು ನೆನಪಿಸಿಕೊಂಡು ಟ್ವೀಟ್ ಮಾಡಿರುವ ಪ್ರಧಾನಿ, ಅವರ ಸಾಧನೆ ಖುಷಿ ನೀಡಿದೆ ಎಂದು ಉಲ್ಲೇಖಿಸಿದ್ದಾರೆ.

‘ಪ್ರತಿಭಾವಂತ ಅಚಿಂತ್ಯ ಶಿವಲಿ ಅವರು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿರುವುದು ಸಂತಸ ತಂದಿದೆ. ಶಾಂತ ಚಿತ್ತ ಮತ್ತು ಸ್ಥಿರತೆಯಿಂದ ಗುರುತಿಸಿಕೊಂಡವರು ಅವರು. ಈ ವಿಶೇಷ ಸಾಧನೆಗಾಗಿ ಅವರು ಅತಿ ಕಠಿಣ ಪ್ರಯತ್ನ ಮಾಡಿದ್ದರು. ಅವರ ಭವಿಷ್ಯದ ಸಾಧನೆಗಳಿಗೆ ಶುಭ ಹಾರೈಕೆಗಳು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

‘ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ನಮ್ಮ ತಂಡ ತೆರಳುವ ಮುನ್ನ ನಾನು ಅಚಿಂತ್ಯ ಶಿವಲಿ ಜತೆ ಸಂವಾದ ನಡೆಸಿದ್ದೆ. ಅವರ ತಾಯಿ ಮತ್ತು ಸಹೋದರನಿಂದ ದೊರೆತ ಪ್ರೋತ್ಸಾಹದ ಬಗ್ಗೆ ನನ್ನ ಬಳಿ ಹೇಳಿಕೊಂಡಿದ್ದರು. ಪದಕ ಗೆದ್ದಿರುವ ಅವರಿಗೆ ಇನ್ನು ಸಿನಿಮಾ ವೀಕ್ಷಣೆಗೆ ಸಮಯ ಸಿಗಲಿದೆ ಎಂಬುದಾಗಿ ಭಾವಿಸುತ್ತೇನೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಪ್ರಧಾನಿ ಉಲ್ಲೇಖಿಸಿದ್ದಾರೆ.

ಪ್ರಧಾನಿ ಜತೆಗೆ ಸಂವಾದ ನಡೆಸಿದ್ದ ವೇಳೆ ತಮ್ಮ ತರಬೇತಿಯ ಬಗ್ಗೆ ಅಚಿಂತ್ಯ ಶಿವಲಿ ಮಾಹಿತಿ ಹಂಚಿಕೊಂಡಿದ್ದರು. ತರಬೇತಿಯ ಒತ್ತಡದಿಂದ ಸಿನಿಮಾ ವೀಕ್ಷಣೆಗೂ ಸಮಯ ಸಿಗುತ್ತಿಲ್ಲ ಎಂದು ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಮೋದಿ, ಕ್ರೀಡಾಕೂಟದಲ್ಲಿ ಪದಕ ಗೆದ್ದ ಬಳಿಕ ಸಿನಿಮಾ ನೋಡುವಿರಂತೆ ಎಂದು ನಗುತ್ತಾ ಹೇಳಿದ್ದರು.

ಕಾಮನ್‌ವೆಲ್ತ್ ಕ್ರೀಡಾ ಕೂಟದ ಪುರುಷರ 73 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಅಚಿಂತ್ಯ ಶಿವಲಿ ಅವರು ಚಿನ್ನದ ಪದಕ ಜಯಿಸಿದ್ದಾರೆ. ಶಿವಲಿ ಅವರು 143 ಕೆಜಿ ಹಾಗೂ 170 ಕೆಜಿ ಸೇರಿ ಒಟ್ಟು 313 ಕೆಜಿ ಭಾರ ಎತ್ತಿದ್ದರು.

ಭಾನುವಾರ ಪುರುಷರ ವೇಟ್‌ಲಿಫ್ಟಿಂಗ್‌ನ 67 ಕೆ.ಜಿ ವಿಭಾಗದಲ್ಲಿ ಮಿಜೋರಾಂನ 19 ವರ್ಷದ ಜರ್ಮಿ ಲಾಲ್‌ರಿನುಂಗಾ ಅವರು ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದರು. ಶನಿವಾರ ಮಹಿಳೆಯರ ವೇಟ್‌ಲಿಫ್ಟಿಂಗ್‌ನಲ್ಲಿ 49 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಮೀರಾಬಾಯಿ ಚಾನು ಅವರು ಚಿನ್ನದ ಪದಕ ಬೇಟೆ ಆರಂಭಿಸಿದ್ದರು.

ಕಾಮನ್‌ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತದ ಕ್ರೀಡಾಪಟುಗಳು ಈವರೆಗೆ 3 ಚಿನ್ನ, 2 ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಜಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT