ಏಷ್ಯಾಡ್‌ ಬ್ರಿಡ್ಜ್‌: 60ರ ಹರಯದಲ್ಲಿ ಚಿನ್ನ ಗೆದ್ದ ಭಾರತದ ಬರ್ಧನ್‌–ಸರ್ಕಾರ್‌

7
ಬ್ರಿಡ್ಜ್‌: ಭಾರತದ ಜೋಡಿ ಪ್ರಣಬ್ ಬರ್ಧನ್‌ ಮತ್ತು ಶಿಬ್‌ನಾಥ್‌ ಸರ್ಕಾರ್‌ ಸಾಧನೆ

ಏಷ್ಯಾಡ್‌ ಬ್ರಿಡ್ಜ್‌: 60ರ ಹರಯದಲ್ಲಿ ಚಿನ್ನ ಗೆದ್ದ ಭಾರತದ ಬರ್ಧನ್‌–ಸರ್ಕಾರ್‌

Published:
Updated:
Deccan Herald

ಜಕಾರ್ತ: ಏಷ್ಯನ್ ಕ್ರೀಡಾಕೂಟಕ್ಕೆ ತೆರಳಿದ ಭಾರತದ ಕ್ರೀಡಾಪಟುಗಳಲ್ಲಿ ಅತ್ಯಂತ ಹಿರಿಯರಾಗಿದ್ದ ಪ್ರಣಬ್ ಬರ್ಧನ್ ಅವರು ಶನಿವಾರ ಚಿನ್ನ ಗೆದ್ದು ಸಂಭ್ರಮಿಸಿದರು. ಬ್ರಿಡ್ಜ್‌ ಸ್ಪರ್ಧೆಯ ಜೆಐ ಎಕ್ಸ್‌ಪೊ ಬಾಲ್‌ರೂಮ್‌ ವಿಭಾಗದ ಫೈನಲ್‌ನಲ್ಲಿ ಅವರು ಶಿಬ್‌ನಾಥ್ ಸರ್ಕಾ್‌ ಜೊತೆಗೂಡಿ ಈ ಸಾಧನೆ ಮಾಡಿದರು.

60 ವರ್ಷದ ಪ್ರಣಬ್‌ ಮತ್ತು 56 ವರ್ಷದ ಶಿಬ್‌ನಾಥ್‌ ಅವರು ಚೀನಾದ ಲಿಕ್ಸಿನ್‌ ಯಾಂಗ್ ಮತ್ತು ಗಾಂಗ್‌ ಚೆನ್‌ ಜೋಡಿಯನ್ನು ಮಣಿಸಿದರು. ಐದು ಸುತ್ತುಗಳ ಕೊನೆಯಲ್ಲಿ ಭಾರತದ ಆಟಗಾರರು 384 ಸ್ಕೋರು ಗಳಿಸಿದರೆ ಚೀನಾದವರು ಪಡೆದುಕೊಂಡದ್ದು 378 ಸ್ಕೋರು. 374 ಸ್ಕೋರು ಕಲೆ ಹಾಕಿದ ಇಂಡೊನೇಷ್ಯಾದ ಹೆಂಕಿ ಲಾಸೂತ್‌ ಮತ್ತು ಫ್ರೆಡಿ ಮನೊಪೊ ಕಂಚು ಗೆದ್ದರು.

ಭಾರತದ ಸುಮಿತ್ ಮುಖರ್ಜಿ ಮತ್ತು ದೇಬಬ್ರತ ಮಜುಂದಾರ್‌ 333 ಸ್ಕೋರುಗಳೊಂದಿಗೆ ಒಂಬತ್ತನೇ ಸ್ಥಾನ ಗಳಿಸಿದರು. ಸುಭಾಷ್ ಗುಪ್ತಾ ಮತ್ತು ಸಪನ್‌ ದೇಸಾಯಿ ಕೂಡ ಸ್ಪರ್ಧೆಯಲ್ಲಿದ್ದರು. ಅವರು 12ನೇ ಸ್ಥಾನಕ್ಕೆ ಕುಸಿದರು.

‘ನಿನ್ನೆ ರಾತ್ರಿಯಿಡೀ ನಿದ್ದೆ ಬರಲಿಲ್ಲ. ಬೆಳಿಗ್ಗೆ ಆಹಾರ ಸೇವಿಸುವುಕ್ಕೂ ಆಗಲಿಲ್ಲ. ಕೇವಲ ಹಣ್ಣುಗಳನ್ನು ತಿಂದು ಸ್ಪರ್ಧೆಗೆ ಬಂದಿದ್ದೆ. ಫೈನಲ್ ಹಣಾಹಣಿ ಅಷ್ಟೊಂದು ಸವಾಲಿನದ್ದು ಆಗಿತ್ತು. ಕೊನೆಗೂ ಗೆದ್ದು ಸಂಭ್ರಮಿಸಿದೆವು’ ಎಂದು ಜಾಧವ್‌ಪುರ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶಿಬ್‌ನಾಥ್ ಹೇಳಿದರು.

ಈ ಕ್ರೀಡೆಯನ್ನು ಇದೇ ಮೊದಲ ಬಾರಿ ಏಷ್ಯನ್ ಕ್ರೀಡಾಕೂಟದಲ್ಲಿ ಸೇರಿಸಲಾಗಿತ್ತು. ಮಿಶ್ರ ವಿಭಾಗದ ಫೈನಲ್‌ನಲ್ಲಿ ಭಾರತದ ಬಚ್ಚಿರಾಜು ಸತ್ಯನಾರಾಯಣ ಮತ್ತು ಕಿರಣ್‌ ನಾಡಾರ್‌ 333 ಸ್ಕೋರು ಕಲೆ ಹಾಕಿ ಐದನೇ ಸ್ಥಾನ ಗಳಿಸಿದರು. ರಾಜೀವ್‌ ಖಂಡೇಲ್‌ವಾಲ್‌ ಮತ್ತು ಹಿಮಾನಿ ಖಂಡೇಲ್‌ವಾಲ್‌ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಮಹಿಳೆಯರ ಜೋಡಿ ಹೇಮಾ ದೇವ್ರಾ ಮತ್ತು ಮರಿಯನೆ ಕರ್ಮಾರ್ಕರ್‌ ಏಳನೇ ಸ್ಥಾನ ಗಳಿಸಿದರು. ಒಟ್ಟು ಪಾಯಿಂಟ್ ಗಳಿಕೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಪುರುಷರ ಮತ್ತು ಮಿಶ್ರ ತಂಡ ವಿಭಾಗಗಳಲ್ಲಿ ಭಾರತ ತಲಾ ಒಂದೊಂದು ಕಂಚು ಗೆದ್ದಿತ್ತು.

ಬ್ರಿಡ್ಜ್‌ ಜೂಜು ಅಲ್ಲ; ಸವಾಲಿನ ಕ್ರೀಡೆ: ಬ್ರಿಡ್ಜ್ ಆಟವನ್ನು ಜೂಜು ಎಂದು ಪರಿಗಣಿಸಲಾಗದು. ಇದು ಚೆಸ್‌ಗಿಂತಲೂ ಸವಾಲಿನ ಕ್ರೀಡೆಯಾಗಿದೆ ಎಂದು ಚಿನ್ನದ ಪದಕ ಗೆದ್ದ ಭಾರತದ ಜೋಡಿ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !