ಶನಿವಾರ, ಜುಲೈ 31, 2021
27 °C
ಪ್ರದರ್ಶನಕ್ಕಿಂತ ಪರಿಚಯ ಮುಖ್ಯವಾಗಿದೆ ಎಂದ ಆಟಗಾರ

‘ಅರ್ಜುನ’ಕ್ಕೆ ಕಡೆಗಣನೆ: ಪ್ರಣಯ್‌ ಸಿಡಿಮಿಡಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅರ್ಜುನ ಪ್ರಶಸ್ತಿಗೆ ಸತತ ಎರಡನೇ ವರ್ಷವೂ ತಮ್ಮನ್ನು ಶಿಫಾರಸು ಮಾಡದಿರುವುದರಿಂದ ಎಚ್‌.ಎಸ್‌.ಪ್ರಣಯ್‌ ಸಿಡಿಮಿಡಿಗೊಂಡಿದ್ದಾರೆ. ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ (ಬಿಎಐ) ತಮಗಿಂತ ಕಡಿಮೆ ಸಾಧನೆ ಮಾಡಿದವರನ್ನು ಶಿಫಾರಸು ಮಾಡಿದೆ ಎಂದು ದೂರಿದ್ದಾರೆ.

ದೇಶದ ಅಗ್ರಮಾನ್ಯ ಡಬಲ್ಸ್‌ ಆಟಗಾರರಾದ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ರೆಡ್ಡಿ ಜೊತೆಗೆ ಸಿಂಗಲ್ಸ್‌ ಆಟಗಾರ ಸಮೀರ್‌ ವರ್ಮ ಅವರನ್ನು ಬಿಎಐ ಮಂಗಳವಾರ ಈ ಪ್ರತಿಷ್ಠಿತ  ಪ್ರಶಸ್ತಿಗೆ ಹೆಸರಿಸಿತ್ತು.

ಪ್ರಣಯ್‌, ಟ್ವಿಟರ್‌ನಲ್ಲಿ ತಮ್ಮ ಅಸಮಾಧಾನ ಹೊರಗೆಡಹಿದ್ದಾರೆ.

#ಅರ್ಜುನಪ್ರಶಸ್ತಿ, ಅದೇ ಹಳೆ ಕಥೆ. ಕಾಮನ್‌ವೆಲ್ತ್‌ ಗೇಮ್ಸ್‌ ಮತ್ತು ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದವರನ್ನೂ ಪ್ರಶಸ್ತಿಗೆ ಪರಿಗಣಿಸಿಲ್ಲ. ಇಂಥ ಪ್ರಮುಖ ಕೂಟಗಳಲ್ಲಿ ಆಡದ ವ್ಯಕ್ತಿಯನ್ನು ಶಿಫಾರಸು ಮಾಡಿದ್ದೀರಿ #ವಾ# ದಿಸ್‌ ಕಂಟ್ರಿ ಈಸ್‌ ಎ ಜೋಕ್‌’ ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಸಾತ್ವಿಕ್‌ ಮತ್ತು ಚಿರಾಗ್‌, 2018ರ ಕಾಮನ್‌ವೆಲ್ತ್‌ ಟೂರ್ನಿಯಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. ಆದರೆ 25 ವರ್ಷದ ಸಮೀರ್‌ ಪ್ರಮುಖ ಟೂರ್ನಿಯಲ್ಲಿ ಆಡಿರಲಿಲ್ಲ. ಅವರು  ಕಳೆದ ವರ್ಷವೂ ಗಮನ ಸೆಳೆಯುವ ಪ್ರದರ್ಶನ ನೀಡಿರಲಿಲ್ಲ.

ಧರ್‌ (ಮಧ್ಯಪ್ರದೇಶ)ನವರಾದ ಸಮೀರ್‌, 2018ರಲ್ಲಿ ಮೂರು ಪ್ರಶಸ್ತಿಗಳ ಜೊತೆ ಜೀವನಶ್ರೇಷ್ಠ ಸಾಧನೆಯೊಡನೆ ಕ್ರಮಾಂಕಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಏರಿದ್ದರು.

ಕಳೆದ ನಾಲ್ಕು ವರ್ಷಗಳಲ್, 2018ರಲ್ಲಿ ಪ್ರಣಯ್‌ ಗಮನಾರ್ಹ ಪ್ರದರ್ಶನ ನೀಡಿದ್ದರು. ಭಾರತ ಕಾಮನ್‌ವೆಲ್ತ್‌ ಗೇಮ್ಸ್‌ನ ಮಿಕ್ಸೆಡ್‌ ಡಬಲ್ಸ್‌ನಲ್ಲಿ ಮೊದಲ ಬಾರಿ ಚಿನ್ನ ಗೆದ್ದಾಗ ಅವರು ಆಡಿದ್ದರು. ವುಹಾನ್‌ನಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. 2018ರ ಮೇ ತಿಂಗಳಲ್ಲಿ ಅವರು ವಿಶ್ವ ಕ್ರಮಾಂಕದಲ್ಲಿ ಎಂಟನೇ ಸ್ಥಾನಕ್ಕೆ ಏರಿದ್ದರು.

2017ರ ಇಂಡೊನೇಷ್ಯಾ ಓಪನ್‌ನಲ್ಲಿ ಅವರು ವಿಶ್ವದ ಅಗ್ರಮಾನ್ಯ ಆಟಗಾರ ಲೀಚೊಂಗ್‌ ವಿ ಮತ್ತು ಒಲಿಂಪಿಕ್‌ ಚಾಂಪಿಯನ್‌ ಚೆನ್‌ ಲಾಂಗ್‌ ಅವರನ್ನು ಸೋಲಿಸಿ ಗಮನ ಸೆಳೆದಿದ್ದರು.

‘ಕ್ರೀಡಾ ಸಚಿವಾಲಯಕ್ಕೆ ಹೆಸರುಗಳನ್ನು ಶಿಫಾರಸು ಮಾಡುವಾಗ ನಾವು ಆಟಗಾರರ ನಿರ್ವಹಣೆಯನ್ನು ಅಳೆದೂತೂಗಿ ನೋಡುತ್ತೇವೆ’ ಎಂದು ಬಿಎಐ ಹೇಳಿದೆ.

ಕಳೆದ ವರ್ಷ ತಮ್ಮನ್ನು ಪ್ರಶಸ್ತಿಗೆ ಕಡೆಗಣಿಸಿದಾಗಲೂ ಪ್ರಣಯ್‌ ಆಕ್ರೋಶ ಹೊರಹಾಕಿ, ಆಯ್ಕೆಯ ಮಾನದಂಡವನ್ನು ಪ್ರಶ್ನಿಸಿದ್ದರು. ಅಂಗಣದಲ್ಲಿ ನೀಡುವ ಪ್ರದರ್ಶನಕ್ಕಿಂತ ಹೆಸರು ಸೂಚಿಸುವ ವ್ಯಕ್ತಿಗಳು ಗೊತ್ತಿರುವುದು ಮುಖ್ಯವಾಗುತ್ತದೆ ಎಂದು ವ್ಯಂಗ್ಯವಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು