ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾ ಕ್ರೀಡಾಪಟುವಿಗೆ ಮರೀಚಿಕೆಯಾದ ಅಂತರರಾಷ್ಟ್ರೀಯ ಕ್ರೀಡಾಕೂಟ

ಬಹುಮಾನದ ಮೊತ್ತ ಬಾಕಿ: ಆಸೆಗೆ ತಣ್ಣೀರು
Last Updated 15 ನವೆಂಬರ್ 2018, 20:10 IST
ಅಕ್ಷರ ಗಾತ್ರ

ಶಿರಸಿ: ಅಂತರರಾಷ್ಟ್ರೀಯ ಪ್ಯಾರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಕನಸು ಹೊತ್ತಿರುವ ಯುವ ಕ್ರೀಡಾಪಟುವೊಬ್ಬರಿಗೆ ಸರ್ಕಾರದಿಂದ ಸಕಾ ಲಕ್ಕೆ ಬಹುಮಾನದ ಮೊತ್ತ ಬಾರದ ಪರಿಣಾಮ, ಆಸೆ ಕಮರುವಂತಾಗಿದೆ.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಪ್ರತಾಪ್ ಹೆಗಡೆ ಅವರು, 2017ರಲ್ಲಿ ಹರಿಯಾಣದಲ್ಲಿ ನಡೆದ ರಾಷ್ಟ್ರ ಮಟ್ಟದ ಪ್ಯಾರಾ ಕ್ರೀಡಾಕೂಟದಲ್ಲಿ ಜಾವಲಿನ್ ಎಸೆತದಲ್ಲಿ ಕಂಚಿನ ಪದಕ ಪಡೆದಿದ್ದಾರೆ. 2018ರಲ್ಲಿ ಸಹ ಇದೇ ಕ್ರೀಡಾಕೂಟದಲ್ಲಿ ಭಾಗವಹಿಸಿ, ಮೂರನೇ ಸ್ಥಾನ ಉಳಿಸಿಕೊಂಡಿದ್ದಾರೆ.

2017ರಲ್ಲಿ ಜೈಪುರದಲ್ಲಿ ನಡೆದ ಪಿವಿಎಫ್‌ಐ ಸಿಟ್ಟಿಂಗ್ ವಾಲಿಬಾಲ್ ಸ್ಪರ್ಧೆಯಲ್ಲಿ ದ್ವಿತೀಯ, ಪ್ಯಾರಾ ಒಲಂಪಿಕ್ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾ ಇತ್ತೀಚೆಗೆ ಮಲ್ಪೆಯಲ್ಲಿ ನಡೆಸಿದ ಮೊದಲ ಬೀಚ್ ಪ್ಯಾರಾ ವಾಲಿಬಾಲ್ ಸೀನಿಯರ್ ಸ್ಟ್ಯಾಂಡಿಂಗ್ ನ್ಯಾಷನಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ, ದ್ವಿತೀಯ ಬಹುಮಾನ ಪಡೆದಿದ್ದಾರೆ.

‘ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಪದಕ ಪಡೆದವರಿಗೆ ಆಯಾ ರಾಜ್ಯ ಸರ್ಕಾರ ಬಹುಮಾನದ ಮೊತ್ತ ನೀಡುತ್ತದೆ. ಆದರೆ, ಕರ್ನಾಟಕದಲ್ಲಿ ಮಾತ್ರ 2014ರಿಂದ ಈವರೆಗೆ ಕ್ರೀಡಾಪಟುಗಳ ಬಹುಮಾನದ ಮೊತ್ತ ನೀಡುವುದು ಬಾಕಿಯಿದೆ. ನನಗೆ ನಾಲ್ಕು ಬಹುಮಾನಗಳಿಂದ ಒಟ್ಟು (ಜಾವಲಿನ್ ತಲಾ ₹ 50ಸಾವಿರ, ವಾಲಿಬಾಲ್ ತಲಾ ₹ 1 ಲಕ್ಷ) ₹ 3 ಲಕ್ಷ ಸಂದಾಯವಾಗಬೇಕಾಗಿದೆ. ಈ ಹಣ ಸಿಗದಿರುವ ಕಾರಣಕ್ಕಾಗಿ, ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಿಂದ ವಂಚಿತನಾಗಬೇಕಾಯಿತು’ ಎಂದು ಪ್ರತಾಪ್ ಬೇಸರ ವ್ಯಕ್ತಪಡಿಸಿದರು.

‘ಹುಟ್ಟಿನಿಂದಲೇ ಎಡಗೈ ವೈಕಲ್ಯ ಹೊಂದಿರುವ ಪ್ರತಾಪ್, ಹಿರಿಯ ಜಾವಲಿನ್ ಕ್ರೀಡಾಪಟು ಕಾಶೀನಾಥ ನಾಯ್ಕ ಅವರಲ್ಲಿ 11 ತಿಂಗಳು ತರಬೇತಿ ಪಡೆದು, ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಪದಕ ಗೆದ್ದಿದ್ದಾರೆ. ಮೂರು ಬಾರಿ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದರೂ, ಆರ್ಥಿಕ ಮುಗ್ಗಟ್ಟಿನಿಂದಾಗಿ ಹೋಗಲು ಆಗಲಿಲ್ಲ. ಆತ ಜಾವಲಿನ್‌ ಎಸೆತದಲ್ಲಿ (53.62 ಮೀಟರ್) ವಿಶ್ವ ಮಟ್ಟದಲ್ಲಿ ಎಂಟನೇ ಕ್ರಮಾಂಕದಲ್ಲಿದ್ದರೂ, ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸದ ವಿನಾ ಈ ಸಾಧನೆ ಕ್ರಮಾಂಕದ ಪಟ್ಟಿಯಲ್ಲಿ ಸೇರ್ಪಡೆಯಾಗದು’ ಎಂದು ಪ್ರತಾಪ್ ತಂದೆ ಪರಮಾನಂದ ಹೆಗಡೆ ನೋವಿನಿಂದ ನುಡಿದರು.

‘ಎಸ್‌ಎಸ್‌ಎಲ್‌ಸಿ ಓದುವಾಗ ಗಂಭೀರ ಕಾಯಿಲೆಗೆ ತುತ್ತಾಗಿದ್ದ ಪ್ರತಾಪನನ್ನು ಬದುಕಿಸಿದ್ದೇ ಕ್ರೀಡೆ. ಕ್ರೀಡೆಯಲ್ಲಿ ಅತೀವ ಆಸಕ್ತಿ ಇರುವ ಆತ, ಹೆಚ್ಚಿನ ತರಬೇತಿ ಇಲ್ಲದೆ ದೊಡ್ಡ ಸಾಧನೆ ಮಾಡಿದ್ದಾನೆ. ನಿರಂತರ ತರಬೇತಿಗೆ ಹೋಗಲು ಉದ್ಯೋಗದ ಅಭದ್ರತೆ ಕಾಡುತ್ತದೆ. ಸರ್ಕಾರವೇ ಇಂತಹ ಕ್ರೀಡಾಪಟುಗಳಿಗೆ ಪೌಷ್ಟಿಕ ಆಹಾರ, ತರಬೇತಿ ನೀಡುವಂತಾಗಬೇಕು’ ಎಂದು ಅವರ ತಾಯಿ ಸುಮಿತ್ರಾ ಹೆಗಡೆ ಒತ್ತಾಯಿಸುತ್ತಾರೆ.

ಪ್ರಧಾನಮಂತ್ರಿ, ಮುಖ್ಯಮಂತ್ರಿಗೆ ಪತ್ರ

‘ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮುಖ್ಯಮಂತ್ರಿ ಬಳಿ ಇರುವ ಕಾರಣಕ್ಕಾಗಿ ಅವರಿಗೆ ಪತ್ರ ಬರೆದು, ಶೀಘ್ರ ಬಹುಮಾನದ ಮೊತ್ತ ಬಿಡುಗಡೆಗೊಳಿಸುವಂತೆ ವಿನಂತಿಸಿದ್ದೇನೆ. ಪ್ರಧಾನಮಂತ್ರಿ ಹಾಗೂ ಕೇಂದ್ರ ಯುವ ಸಬಲೀಕರಣ ಸಚಿವ ರಾಜ್ಯವರ್ದನ ಸಿಂಗ್ ರಾಥೋಡ್ ಅವರಿಗೂ ಇ–ಮೇಲ್ ಮೂಲಕ ಪತ್ರ ಕಳುಹಿಸಿದ್ದೇನೆ’ ಎಂದು ಪರಮಾನಂದ ಹೆಗಡೆ ಹೇಳಿದರು.

ಸಂಪರ್ಕ ಸಂಖ್ಯೆ: 9481274838.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT