ಮಂಗಳವಾರ, ಜುಲೈ 5, 2022
25 °C
ಇಂದು ಸೆಮಿಫೈನಲ್‌ ಪಂದ್ಯಗಳು: ಬೆಂಗಳೂರಿನ ತಂಡಕ್ಕೆ ದಬಂಗ್‌ ಸವಾಲು

ಪ್ರೊ ಕಬಡ್ಡಿ: ಪವನ್‌ ‘ಪವಾಡ’ದ ನಿರೀಕ್ಷೆಯಲ್ಲಿ ಬುಲ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್‌: ಯು.ಪಿ.ಯೋಧಾ ಎದುರಿನ ಎಲಿಮಿನೇಟರ್‌ ಹಣಾಹಣಿಯಲ್ಲಿ ವೀರಾವೇಶದಿಂದ ಹೋರಾಡಿ ಗೆಲುವಿನ ಸಿಹಿ ಸವಿದಿದ್ದ ಬೆಂಗಳೂರು ಬುಲ್ಸ್‌ ತಂಡ ಈಗ ಮತ್ತೊಂದು ಅಗ್ನಿಪರೀಕ್ಷೆ ಎದುರಿಸಲು ಸಜ್ಜಾಗಿದೆ.

ಬುಧವಾರ ನಡೆಯುವ ಪ್ರೊ ಕಬಡ್ಡಿ ಲೀಗ್‌ ಏಳನೇ ಆವೃತ್ತಿಯ ಮೊದಲ ಸೆಮಿಫೈನಲ್‌ನಲ್ಲಿ ಪವನ್‌ ಶೆರಾವತ್‌ ಸಾರಥ್ಯದ ಬುಲ್ಸ್‌, ಬಲಿಷ್ಠ ದಬಂಗ್‌ ಡೆಲ್ಲಿ ವಿರುದ್ಧ ಸೆಣಸಲಿದೆ. ಈ ಪೈಪೋಟಿಯಲ್ಲಿ ಗೆದ್ದು ಸತತ ಎರಡನೇ ಸಲ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಡುವ ಹುಮ್ಮಸ್ಸಿನಲ್ಲಿ ಬೆಂಗಳೂರಿನ ತಂಡವಿದೆ.

ಯೋಧಾ ಎದುರು ಪವನ್‌, ಪರಾಕ್ರಮ ಮೆರೆದಿದ್ದರು. ಬರೋಬ್ಬರಿ 20 ಪಾಯಿಂಟ್ಸ್‌ ಕಲೆಹಾಕಿ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಈ ಋತುವಿನಲ್ಲಿ 17 ಸಲ ಸೂಪರ್‌–10 ಸಾಧನೆ ಮಾಡಿರುವ ಪವನ್‌ ಮೇಲೆ ಈಗ ಎಲ್ಲರ ಕಣ್ಣುಗಳು ನೆಟ್ಟಿವೆ. ಅವರು ದಬಂಗ್‌ ತಂಡದ ಬಲಿಷ್ಠ ರಕ್ಷಣಾ ಕೋಟೆಯನ್ನು ಭೇದಿಸಿ ತಂಡಕ್ಕೆ ಮತ್ತೊಂದು ಗೆಲುವು ತಂದುಕೊಡುವರೇ ಎಂಬ ಪ್ರಶ್ನೆಯೂ ಅಭಿಮಾನಿಗಳನ್ನು ಕಾಡುತ್ತಿದೆ.

ಪವನ್‌ಗೆ ‌ಸುಮಿತ್‌ ಸಿಂಗ್‌ ಮತ್ತು ಬಂಟಿ ಅವರಿಂದ ಸೂಕ್ತ ಬೆಂಬಲ ಸಿಗಬೇಕಿದೆ. ಮಹೇಂದರ್‌ ಸಿಂಗ್‌, ಅಮಿತ್‌ ಶೆರಾನ್‌ ಮತ್ತು ಮೋಹಿತ್‌ ಶೆರಾವತ್‌ ಅವರ ಮೇಲೂ ಹೆಚ್ಚಿನ ಜವಾಬ್ದಾರಿ ಇದೆ.

ದಬಂಗ್‌ ತಂಡವು ಈ ಸಲ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿತ್ತು. ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಈ ತಂಡವು ಈ ಬಾರಿ ಬುಲ್ಸ್‌ ಎದುರು ಆಡಿರುವ ಎರಡು ಪಂದ್ಯಗಳಲ್ಲೂ ಗೆದ್ದಿದೆ. ಇದು ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ.

‘ಬ್ಯಾಕ್‌ ಹೋಲ್ಡ್‌’ ಪ್ರವೀಣ, ರವಿಂದರ್‌ ಪಹಲ್‌, ಲೀಗ್‌ನಲ್ಲಿ ಪವನ್‌ ಅವರನ್ನು ಎಂಟು ಸಲ ಹಿಡಿದಿದ್ದಾರೆ. ಬುಧವಾರವೂ ‘ಪವನ ಶಕ್ತಿ’ಯನ್ನು ನಿಯಂತ್ರಿಸುವ ಹುಮ್ಮಸ್ಸಿನಲ್ಲಿ ಅವರಿದ್ದಾರೆ.

ಮೆರಾಜ್‌ ಶೇಕ್‌, ನೀರಜ್‌ ನರ್ವಾಲ್‌, ಸೋಮವೀರ್‌, ಸುಮಿತ್‌, ಮೋಹಿತ್‌ ಮತ್ತು ಅಮನ್‌ ಕಡಿಯಾನ್‌ ಅವರೂ ಈ ತಂಡದ ಬೆನ್ನೆಲುಬಾಗಿದ್ದಾರೆ.

ಬೆಂಗಾಲ್‌–ಮುಂಬಾ ಮುಖಾಮುಖಿ: ದಿನದ ಇನ್ನೊಂದು ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ಮತ್ತು ಯು ಮುಂಬಾ ಮುಖಾಮುಖಿಯಾಗಲಿವೆ.

ಬೆಂಗಾಲ್‌ ತಂಡ ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿದೆ. ಮಣಿಂದರ್‌ ಸಿಂಗ್‌, ಸುಕೇಶ್‌ ಹೆಗ್ಡೆ, ಕೆ.ಪ್ರಪಂಜನ್‌, ಮೊಹಮ್ಮದ್‌ ನಬಿಬಕ್ಷ್‌ ಅವರು ರೇಡಿಂಗ್‌ನಲ್ಲಿ ತಂಡದ ಶಕ್ತಿಯಾಗಿದ್ದಾರೆ.

ರಕ್ಷಣಾ ವಿಭಾಗದಲ್ಲಿ ಈ ತಂಡಕ್ಕೆ ಬಲದೇವ್‌ ಸಿಂಗ್‌ ಅವರ ಬಲವಿದೆ. ಅನುಭವಿ ಜೀವಕುಮಾರ್‌ ಮೇಲೂ ಭರವಸೆ ಇಡಬಹುದಾಗಿದೆ.

ಫಜಲ್‌ ಅತ್ರಾಚಲಿ ಸಾರಥ್ಯದ ಮುಂಬಾ ತಂಡದಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ.

ಇಂದಿನ ಪಂದ್ಯಗಳು

ಮೊದಲ ಸೆಮಿಫೈನಲ್‌

ಬೆಂಗಳೂರು ಬುಲ್ಸ್‌–ದಬಂಗ್‌ ಡೆಲ್ಲಿ

ಆರಂಭ: ರಾತ್ರಿ 7.30

ಎರಡನೇ ಸೆಮಿಫೈನಲ್‌

ಬೆಂಗಾಲ್‌ ವಾರಿಯರ್ಸ್‌–ಯು ಮುಂಬಾ

ಆರಂಭ: ರಾತ್ರಿ 8.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು