ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ ಸಂಘದಿಂದ ದೌರ್ಜನ್ಯ: ಆರೋಪ

Last Updated 28 ಜನವರಿ 2021, 14:14 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜ್ಯ ಕುಸ್ತಿ ಸಂಘದಿಂದ ಕುಸ್ತಿಪಟುಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿ ಜಿಲ್ಲಾ ಕುಸ್ತಿ ಸಂಘದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟಿಸಿದರು.

‘ಸಂಘದಿಂದ ಕುಸ್ತಿಯ ಪಾಲನೆ–ಪೋಷಣೆ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ರಾಷ್ಟ್ರಮಟ್ಟಕ್ಕೆ ಕುಸ್ತಿಪಟುಗಳ ಆಯ್ಕೆ ವಿಚಾರದಲ್ಲಿ ತಾರತಮ್ಯ ಮತ್ತು ಪಕ್ಷಪಾತ ಮಾಡಲಾಗುತ್ತಿದೆ. ರಾಷ್ಟ್ರಮಟ್ಟದ ಪಂದ್ಯಗಳಿಗೆ ತೆರಳುವಾಗ ಪಟುಗಳಿಗೆ ಸೀಟು ಕಾಯ್ದಿರಿಸಿಕೊಡುತ್ತಿಲ್ಲ. ಇದರಿಂದಾಗಿ ಅವರು ರೈಲಿನ ಶೌಚಾಲಯದ ಬಳಿ ಕುಳಿತು ಹೋಗಬೇಕಾದ ದುಸ್ಥಿತಿ ಇದೆ. ರಾಜ್ಯದಲ್ಲಿ ಬಹಳಷ್ಟು ಮಂದಿ ಕುಸ್ತಿ ತರಬೇತುದಾರರಿದ್ದರೂ ಅವರನ್ನೆಲ್ಲಾ ಕಡೆಗಣಿಸಿ ಕೇವಲ ಮೂವರಿಂದ ರಾಜ್ಯ ತಂಡ ಆಯ್ಕೆ ಮಾಡಿಸಲಾಗುತ್ತಿದೆ’ ಎಂದು ಅಧ್ಯಕ್ಷ ಎಂ.ಆರ್. ಪಾಟೀಲ ಆರೋಪಿಸಿದರು.

‘ಸಂಘದ ಕಚೇರಿಯು ಕಾರ್ಯದರ್ಶಿಯ ಮನೆಯಲ್ಲೇ ನಡೆಯುತ್ತಿದೆ. ಅವರು, ಸ್ಪರ್ಧೆಗಳ ಮಾಹಿತಿಗೆ ಕರೆ ಮಾಡಿದವರೊಂದಿಗೆ ಅವಾಚ್ಯವಾಗಿ ಮಾತನಾಡುತ್ತಾರೆ. ಸಂಘದ ಅಧ್ಯಕ್ಷರನ್ನು ಯಾವುದೇ ಜಿಲ್ಲೆಗಳ ಅಧ್ಯಕ್ಷರಿಗೆ ಮಾಹಿತಿ ನೀಡದೆ ವಜಾಗೊಳಿಸಲಾಗಿದೆ. ರಾಜ್ಯ ತಂಡದೊಂದಿಗೆ ಗೆದ್ದವರ ಬದಲಿಗೆ ಸೋತವರನ್ನು ಕರೆದುಕೊಂಡು ಹೋದ ಉದಾಹರಣೆಗಳಿವೆ’ ಎಂದು ದೂರಿದರು.

‘ಸರ್ಕಾರವು ಸಂಪೂರ್ಣ ವೆಚ್ಚ ಭರಿಸುತ್ತಿದ್ದರೂ, ಪೂರ್ಣ ಪ್ರಮಾಣದ ತಂಡ ಕರೆದೊಯ್ಯುತ್ತಿಲ್ಲ. ಇದೇ ತಿಂಗಳು ನೋಯ್ಡಾದಲ್ಲಿ ನಡೆದ ಹಿರಿಯರ ರಾಷ್ಟ್ರಮಟ್ಟದ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ತೆರಳಿದ್ದ ತಂಡದೊಂದಿಗೆ ತರಬೇತುದಾರರು ಮತ್ತು ವ್ಯವಸ್ಥಾಪಕರು ಇರಲಿಲ್ಲ. ಪಟುಗಳು ಮರಳುವಾಗ ರೈಲಿನಲ್ಲಿ ಸೀಟಿನ ವ್ಯವಸ್ಥೆ ಮಾಡಿರಲಿಲ್ಲ. ಹೆಸರಾಂತ ಹಾಗೂ ಅಂತರರಾಷ್ಟ್ರೀಯ ಕುಸ್ತಿಪಟುಗಳು ರೈಲು ನಿಲ್ದಾಣದಲ್ಲೇ ಊಟ, ಉಪಾಹಾರಕ್ಕಾಗಿ ಪರದಾಡಿ ಕಷ್ಟಪಟ್ಟು ಬಂದು ಸೇರಿದ್ದಾರೆ. ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT