ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಂದು ಬಿಂದು ಸೇರಿ... ಸಿಂಧು

ಸಿಂಧು ಸಾಧನೆ
Last Updated 1 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಬೆಳಗಿನ ಜಾವ 3.30ಕ್ಕೆ ಎದ್ದು, ಮಗಳನ್ನು ಎಬ್ಬಿಸಿಕೊಂಡು ಕಾರಿಗೆ ಹತ್ತಿಸಿ ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್‌ ಅಕಾಡೆಮಿಗೆ ಪುರ್ಸಾಲವೆಂಕಟರಮಣ ಕರೆದೊಯ್ಯುತ್ತಿದ್ದರು.

ಉದ್ದಕ್ಕೆ ಬೆಳೆಯುತ್ತಿದ್ದ ಆ ಮಗಳನ್ನು 56 ಕಿ.ಮೀ. ದೂರದ ಅಕಾಡೆಮಿಗೆ ಒಯ್ಯುವುದು, ಕರೆತರುವುದು ರೈಲ್ವೆ ಇಲಾಖೆಯಲ್ಲಿ, ಸಿಕಂದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದ ರಮಣ ಅವರಿಗೆ ಪ್ರಿಯವಾದ ಕೆಲಸ. ಅಂಥ ಅಪ್ಪನನ್ನೂ ಪಿ. ವಿಜಯಾ ಅವರಂಥ ಅಮ್ಮನನ್ನೂ ಪಡೆದ ಮಗಳೇ ಪಿ.ವಿ. ಸಿಂಧು; ತನ್ನ ಹೆಸರಿನ ಜತೆಗೇ ಅಪ್ಪನ ಹೆಸರನ್ನೂ ಸೇರಿಸಿಕೊಂಡೇ ಬೆಳೆದಾಕೆ. ಅಪ್ಪ–ಅಮ್ಮ ಇಬ್ಬರೂ ವಾಲಿಬಾಲ್‌ ಆಟದಲ್ಲಿ ಪಳಗಿದ್ದವರು. ಮಗಳು ಎಂಟನೇ ವಯಸ್ಸಿನಿಂದಲೇ ಬ್ಯಾಡ್ಮಿಂಟನ್‌ಗೆ ವಶಳಾದಳು.

ಸಿಂಧು ಈಗ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು ತಂದಿದ್ದಾರೆ. 2016ರಲ್ಲಿ ಒಲಿಂಪಿಕ್‌ ಬೆಳ್ಳಿ ಗೆದ್ದು ಅಂಥದೊಂದು ಸಾಧನೆ ಮಾಡಿದ ಭಾರತದ ಮೊದಲ ಹೆಣ್ಣುಮಗಳೆನಿಸಿದ್ದ ಅವರು ಈಗಲೂ ‘ಪ್ರಥಮ’ದ ಮೈಲುಗಲ್ಲನ್ನೇ ನೆಟ್ಟಿದ್ದು.

21–19, 12–21, 15–21... ಇದು ಒಂದು ಬಿಂದು. 21–19, 21–17... ಇದು ಇನ್ನೊಂದು ಬಿಂದು. 21–7, 21–7... ಇದು ಮತ್ತೊಂದು ಬಿಂದು. ಇವೆಲ್ಲವೂ ಸೇರಿ ಸಿಂಧು.

ಪಿ.ವಿ. ಸಿಂಧು ತಮ್ಮ ಬ್ಯಾಡ್ಮಿಂಟನ್ ಆಟದ ಈ ಮೂರೂ ಪಾಯಿಂಟ್‌ಗಳ ಪಟ್ಟಿಯನ್ನು ಮರೆಯಲಾರರು. ಮೊದಲನೆಯದು–ಸ್ಪೇನ್‌ನ ಕ್ಯಾರೊಲಿನಾ ಮರಿನ್ ವಿರುದ್ಧ 2016ರ ರಿಯೊ ಒಲಿಂಪಿಕ್ಸ್‌ ಫೈನಲ್ಸ್‌ನಲ್ಲಿನ ಸೋಲು. ಎರಡನೆಯದು–2018ರಲ್ಲಿ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್‌ನಲ್ಲಿ ಜಪಾನಿನ ನೊಜೊಮಿ ಒಕುಹಾರ ಎದುರಿನ ಗೆಲುವು. ಮೂರನೆಯದು ಅದೇ ಆಟಗಾರ್ತಿ ವಿರುದ್ಧ ಈಗ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದು ಬೀಗಿದ್ದು.

ಈ ಮೂಲಕ ಅವರು ತಮ್ಮ ಕೊರಳ ಪದಕಗಳಲ್ಲಿ ಬಹುತೇಕ ಫಳ ಫಳ್ಳೆನ್ನುತ್ತಿದ್ದ ಬೆಳ್ಳಿ ಬೆಳಕನ್ನು ಚಿನ್ನವಾಗಿ ಪರಿವರ್ತಿಸಿದ್ದು ವಿಕ್ರಮ.

ವಿಶ್ವ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ತೈವಾನ್‌ ಆಟಗಾರ್ತಿ ತೈ–ಝು–ಯಿಂಗ್ ಮೊದಲ ಗೇಮ್‌ನಲ್ಲಿ 21–12ರಿಂದ ಸೋಲಿಸಿದ ಮೇಲೆ ಅವರು ಪುಟಿದೆದ್ದ ರೀತಿ ರೋಚಕ. 23–21, 21–19ರಲ್ಲಿ ಆ ಪಂದ್ಯವನ್ನು ಗೆದ್ದುಕೊಂಡು ಮುಷ್ಟಿ ಬಿಗಿಮಾಡಿದ ಕ್ಷಣ ಆತ್ಮವಿಶ್ವಾಸ ದುಪ್ಪಟ್ಟಾಯಿತು.

ರಿಯೊ ಒಲಿಂಪಿಕ್ಸ್‌ ಬೆಳ್ಳಿ ಗಳಿಕೆಯ ನಂತರ ಅವರು ಮರಿನ್ ಅವರನ್ನು ಇಂಡಿಯಾ ಓಪನ್‌ನಲ್ಲಿ, ಕೊರಿಯಾದಲ್ಲಿ ಹಾಗೂ ಇಂಡಿಯನ್‌ ಗ್ರ್ಯಾನ್‌ ಪ್ರೀಯಲ್ಲಿ ಮಣಿಸಿದ್ದು ಅವರ ಗೆಲುವಿನ ಹಸಿವಿಗೆ ಸಾಕ್ಷಿ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 2013, 14ರಲ್ಲಿ ಕಂಚು, 2017 ಹಾಗೂ 2018ರಲ್ಲಿ ಬೆಳ್ಳಿ ಗೆದ್ದಿದ್ದ ಅವರು, ‘ದೊಡ್ಡ ಟೂರ್ನಿಗಳ ಫೈನಲ್‌ಗಳಲ್ಲಿ ಸತತವಾಗಿ ಸೋಲುವುದು ಹತಾಶಭಾವ ಮೂಡಿಸುತ್ತದೆ’ ಎಂದು ಬೇಸರ ಪಟ್ಟುಕೊಂಡಿದ್ದರು. ಚಿನ್ನದ ಪದಕ ಗೆಲ್ಲಬೇಕೆಂದು ಸಂಕಲ್ಪ ಮಾಡಿದ್ದೇ ಆಗ.

ರಿಯೊ ಒಲಿಂಪಿಕ್ಸ್‌ಗೆ ಮೊದಲು ಆಸ್ಟ್ರೇಲಿಯಾ ಓಪನ್‌ ಪ್ರೀ–ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಧು ಸೋತಿದ್ದರು. ಆಗ ತರಬೇತುದಾರ ಗೋಪಿಚಂದ್ ಭಾರತಕ್ಕೆ ಬಂದದ್ದೇ ಸಿಂಧು ಕೈಗೆ ಖಾಲಿ ಹಾಳೆ ಕೊಟ್ಟು, ಮಾಡಿದ ತಪ್ಪುಗಳನ್ನೆಲ್ಲ ಬರೆಯುವಂತೆ ಹೇಳಿದರು. ಒಂದೊಂದೇ ತಪ್ಪನ್ನು ಯೋಚಿಸಿ ಆಟಗಾರ್ತಿ ಪಟ್ಟಿಮಾಡಿದ್ದಾಯಿತು. ಸಿಹಿ ತಿನಿಸು ಹಾಗೂ ಮೊಬೈಲ್‌ನಿಂದ ತಮ್ಮ ನೆಚ್ಚಿನ ಶಿಷ್ಯೆಯನ್ನು ದೂರವಿಟ್ಟ ಗೋಪಿಚಂದ್, ಇನ್ನಿಲ್ಲದಂತೆ ತಿದ್ದಿದರು. ಶ್ರಮ, ವ್ಯಾಯಾಮ, ಆಟದ ಅಭ್ಯಾಸ ಇವಿಷ್ಟೂ ಫಲ ಕೊಟ್ಟವು.

ಗೋಪಿಚಂದ್ ಪಾಠದ ಇದೇ ವೈಖರಿ 2012ರ ಲಂಡನ್‌ ಒಲಿಂಪಿಕ್ಸ್‌ ಸಂದರ್ಭದಲ್ಲಿ ಸೈನಾ ನೆಹ್ವಾಲ್‌ ಅವರಿಗೂ ನೆರವಾಗಿತ್ತು.

ಈ ಸಲವೂ ಅದೇ ಪಾಠದ ಪುನರ್ಮನನ. ವಿಶ್ವ ಚಾಂಪಿಯನ್‌ಷಿಪ್‌ ಶುರುವಾಗಲು ಎರಡು ತಿಂಗಳು ಇರುವಾಗಿನಿಂದಲೇ ಮೊಬೈಲ್‌ನಿಂದ ದೂರ ಉಳಿದ ಸಿಂಧು ವ್ಯಾಯಾಮ ಮಾಡಿದ ಬಗೆಯ ವಿಡಿಯೊಗಳೂ ಈಗ ಹರಿದಾಡುತ್ತಿವೆ. ಅವನ್ನು ನೋಡುತ್ತಲೇ ಇನ್ನಷ್ಟು ಹೆಣ್ಣುಮಕ್ಕಳನ್ನು ಸಿಂಧುವಿನ ಹಾದಿಯಲ್ಲೇ ಪಯಣಕ್ಕೆ ಹಚ್ಚಲು ಅದೆಷ್ಟೋ ಅಪ್ಪ–ಅಮ್ಮಂದಿರು ಸಜ್ಜಾಗುತ್ತಿದ್ದಾರೆ. 2001ರಲ್ಲಿ ‍ಗೋಪಿಚಂದ್ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ ಆದಾಗ ಸಿಂಧುವಿಗಿನ್ನೂ ಆರು ವರ್ಷ. ಬ್ಯಾಡ್ಮಿಂಟನ್ ಕನಸು ಮೊಳೆತದ್ದು ಆಗಲೇ. ಈಗ ಸಿಂಧುವಿನ ಆಟ ನೋಡಿ ಕನಸು ಚಿಗುರಿಸಿಕೊಳ್ಳುತ್ತಿರುವ ಹೊಸ ತಲೆಮಾರು. ಬ್ಯಾಡ್ಮಿಂಟನ್ ಹೀಗೆ ದೇಶವ್ಯಾಪಿ ಆಗುವುದು ಹೆಮ್ಮೆಯ ವಿಷಯವೇ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT