ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಿಯಾದ ಕೋಚ್‌ ಬಳಿ ತರಬೇತಿ, ಪಂದ್ಯದ್ದೇ ವಾತಾವರಣದಲ್ಲಿ ಅಭ್ಯಾಸ: ಪಿ.ವಿ ಸಿಂಧು

ಕೋಚ್, ಕೊರಿಯಾದ ಪಾರ್ಕ್‌ ತೇ ಸ್ಯಾಂಗ್ ತರಬೇತಿ ಕೌಶಲದ ಕುರಿತು ಸಿಂಧು ಅಭಿಪ್ರಾಯ
Last Updated 16 ಮೇ 2021, 13:26 IST
ಅಕ್ಷರ ಗಾತ್ರ

ನವದೆಹಲಿ: ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಭಾರತದ ಬ್ಯಾಡ್ಮಿಂಟನ್ ಪಟುಗಳು ಇತ್ತೀಚೆಗೆ ಮೂರು ಟೂರ್ನಿಗಳು ರದ್ದಾದ ಕಾರಣ ಬೇಸರಗೊಂಡಿದ್ದಾರೆ. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳದೇ ಕೂಟಕ್ಕೆ ತೆರಳುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಆದರೆ ಪಿ.ವಿ.ಸಿಂಧು ಮಾತ್ರ ನಿರಾಳವಾಗಿದ್ದಾರೆ. ತರಬೇತಿ ಸಂದರ್ಭದಲ್ಲಿ ಸ್ಪರ್ಧೆಯ ವಾತಾವರಣವನ್ನೇ ಸೃಷ್ಟಿಸಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೊರಿಯಾದ ಪಾರ್ಕ್ ತೇ ಸ್ಯಾಂಗ್ ಅವರ ಬಳಿ ಸಿಂಧು ತರಬೇತಿ ಪಡೆಯುತ್ತಿದ್ದಾರೆ. ಪ್ರತಿಯೊಬ್ಬ ಆಟಗಾರರಿಗೆ ಅವರದೇ ಆದ ಶೈಲಿ ಇದೆ. ತಾಯ್ ಜು ಯಿಂಗ್ ಅವರ ರೀತಿಯಂತೆ ರಚನಾಕ್ ಇಂಟನಾನ್ ಆಡುವುದಿಲ್ಲ. ಆದರೆ ಯಾವುದೇ ಆಟಗಾರ್ತಿಯರನ್ನು ಎದುರಿಸುವ ತಂತ್ರಗಳನ್ನು ಹೇಳಿಕೊಡಲು ಪಾರ್ಕ್‌ ಸಮರ್ಥರಾಗಿದ್ದಾರೆ ಎಂದು ಸಿಂಧು ಅಭಿಪ್ರಾಯಪಟ್ಟರು.

ಕೋವಿಡ್‌–19 ಏರುಗತಿಯಲ್ಲಿ ಸಾಗುತ್ತಿರುವುದರಿಂದ ಭಾರತ, ಮಲೇಷ್ಯಾ ಮತ್ತು ಸಿಂಗಪುರದಲ್ಲಿ ಓಪನ್ ಟೂರ್ನಿಗಳನ್ನು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ ರದ್ದುಗೊಳಿಸಿತ್ತು. ಒಲಿಂಪಿಕ್ಸ್‌ಗೂ ಮುನ್ನ ನಡೆಯಬೇಕಾಗಿದ್ದ ಪ್ರಮುಖ ಟೂರ್ನಿಗಳು ಆಗಿದ್ದವು ಇವು. ಇದರ ಬಗ್ಗೆ ಪ್ರತಿಕ್ರಿಯಿಸಿದ ಸಿಂಧು ‘ಸಿಂಗಪುರ ಓಪನ್ ಟೂರ್ನಿಯೂ ರದ್ದಾದ ಕಾರಣ ಒಲಿಂಪಿಕ್ಸ್‌ಗೆ ಮುನ್ನ ಟೂರ್ನಿಗಳೇ ಇಲ್ಲ ಎಂದಾಗಿದೆ. ಅದರ ಬಗ್ಗೆ ಹೆಚ್ಚು ಯೋಚಿಸದೆ ಬೇರೆ ಬೇರೆ ಆಟಗಾರ್ತಿಯರ ಜೊತೆ ಪಂದ್ಯ ಆಡುತ್ತಿದ್ದೇನೆ. ಕೋಚ್ ನನ್ನ ಬೆನ್ನಿಗಿದ್ದಾರೆ’ ಎಂದರು.

ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಇತರ ಆಟಗಾರರ ಜೊತೆ ಸಿಂಧು ಅಭ್ಯಾಸ ಮಾಡುತ್ತಿಲ್ಲ. ತೆಲಂಗಾಣದ ಗಚ್ಚಿಬೌಳಿ ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ತೊಡಗಿರುವ ಅವರು ಸುಚಿತ್ರಾ ಅಕಾಡೆಮಿಯಲ್ಲಿ ಫಿಟ್‌ನೆಸ್ ತರಬೇತಿ ಪಡೆಯುತ್ತಿದ್ದಾರೆ.

‘ಟೂರ್ನಿಗಳು ನಡೆದರೆ ಕೋವಿಡ್‌ನ ಆತಂಕ ಇದ್ದೇ ಇರುತ್ತದೆ. ಯಾಕೆಂದರೆ ಕೊರೊನಾ ವೈರಸ್ ಯಾವ ರೀತಿ ಆಕ್ರಮಣ ಮಾಡುತ್ತದೆ ಎಂದು ಹೇಳಲಾಗುವುದಿಲ್ಲ. ಟೂರ್ನಿಗಳನ್ನು ರದ್ದು ಮಾಡಿದ್ದರಿಂದ ಕ್ರೀಡಾಪಟುಗಳಿಗೆ ಬೇಸರವಾಗಿದೆ ನಿಜ. ಆದರೆ ಜನರ ಸುರಕ್ಷತೆಯ ದೃಷ್ಟಿಯಿಂದ ಇದು ಸರಿಯಾದ ನಿರ್ಧಾರ. ಆಯೋಜಕರು ತುಂಬ ಕಾಳಜಿ ವಹಿಸಿ ಕ್ರೀಡಾಪಟುಗಳನ್ನು ಬಯೊಬಬಲ್‌ನಲ್ಲಿ ಇರಿಸುತ್ತಾರೆ. ಆದರೂ ನಮ್ಮ ಸುರಕ್ಷತೆಯ ಬಗ್ಗೆ ನಾವೇ ಯೋಚಿಸಬೇಕು’ ಎಂದು ಸಿಂಧು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT