ಮಂಗಳವಾರ, ಜೂನ್ 22, 2021
28 °C
ರಣಕಿರೆಡ್ಡಿ– ಅಶ್ವಿನಿಗೆ ಅಚ್ಚರಿಯ ಗೆಲುವು

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಸೈನಾ, ಶ್ರೀಕಾಂತ್‌ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕಾಕ್‌: ಸುಮಾರು ಎರಡು ತಿಂಗಳ ನಂತರ ಆಂಕಣಕ್ಕಿಳಿದ ಭಾರತದ ತಾರೆ ಸೈನಾ ನೆಹ್ವಾಲ್‌, ಸ್ಥಳೀಯ ಆಟಗಾರ್ತಿ ಪಿಟ್ಟಾಯಪೋರ್ನ್‌ ಚೈವಾನ್‌ ಅವರನ್ನು ಬುಧವಾರ ನೇರ ಗೇಮ್‌ಗಳಿಂದ ಸೋಲಿಸಿ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಎರಡನೇ ಸುತ್ತಿಗೆ ದಾಪುಗಾಲಿಟ್ಟರು.

ಗಾಯಾಳಾದ ಕಾರಣ ಕೊನೆಯ ಗಳಿಗೆಯಲ್ಲಿ ಇಂಡೊನೇಷ್ಯಾ ಓಪನ್‌ ಮತ್ತು ಕಳೆದ ವಾರದ ಜಪಾನ್‌ ಓಪನ್‌ ಟೂರ್ನಿಯಿಂದ ಹಿಂದೆ ಸರಿದಿದ್ದ ಸೈನಾ, 21–17, 21–19 ರಿಂದ ಚೈವಾನ್‌ ವಿರುದ್ಧ ಜಯಗಳಿಸಿದರು. ಏಳನೇ ಶ್ರೇಯಾಂಕದ ಸೈನಾ, ಮುಂದಿನ ಸುತ್ತಿನಲ್ಲಿ ಜಪಾನ್‌ನ ಸಯಾಕಾ ತಖಾಹಾಶಿ ಮತ್ತು ಇಂಡೊನೇಷ್ಯಾದ ರುಸೆಲಿ ಹರ್ಟವಾನ್‌ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಆಟಗಾರರಿಗೆ ಶುಭದಿನವಾಗಿತ್ತು. ಕಿದಂಬಿ ಶ್ರೀಕಾಂತ್‌, ಎಚ್‌.ಎಸ್‌.ಪ್ರಣಯ್‌, ಪರುಪಳ್ಳಿ ಕಶ್ಯಪ್‌ ಮತ್ತು ಶುಭಂಕರ್‌ ಡೇ ಎರಡನೇ ಸುತ್ತನ್ನು ಪ್ರವೇಶಿಸಿದರು.

ಶ್ರೀಕಾಂತ್‌ ಮುನ್ನಡೆ: ಐದನೇ ಶ್ರೇಯಾಂಕದ ಕಿದಂಬಿ ಶ್ರೀಕಾಂತ್‌ 21–13, 17–21, 21–19ರಲ್ಲಿ ಚೀನಾದ ರೆನ್‌ ಪೆಂಗ್‌ ಬೊ ವಿರುದ್ಧ ಜಯಗಳಿಸಿದರು. ಅವರ ಮುಂದಿನ ಎದುರಾಳಿ ಥಾಯ್ಲೆಂಡ್‌ನ ಖೊಸಿಟ್‌ ಫೆತಪ್ರದಾಬ್‌.

ಪ್ರಣಯ್‌ 21–16, 22–20 ರಲ್ಲಿ ಹಾಂಗ್‌ಕಾಂಗ್‌ನ ವೊಂಗ್‌ ವಿಂಗ್‌ ಕಿ ವಿನ್ಸೆಂಟ್‌ ಮೇಲೆ ನೇರ ಗೇಮ್‌ಗಳಿಂದ  ಜಯಗಳಿಸಿದರೆ, ಕಶ್ಯಪ್‌ 18–21, 21–8, 21–14ರಲ್ಲಿ ಇಸ್ರೇಲ್‌ನ ಮಿಶ ಜಿಲ್ಬರ್‌ಮನ್‌ ಅವರನ್ನು ಹಿಮ್ಮೆಟ್ಟಿಸಿದರು. ಶುಭಂಕರ್‌ ಡೇ ಅದೃಷ್ಟಶಾಲಿಯಾಗಿದ್ದರು. ವಿಶ್ವದ ಅಗ್ರಮಾನ್ಯ ಆಟಗಾರ ಕೆಂಟೊ ಮೊಮೊಟಾ ಅವರಿಂದ ಮೊದಲ ಸುತ್ತಿನಲ್ಲಿ ವಾಕ್‌ಓವರ್‌ ದೊರೆಯಿತು.

ಭಾರತದ ಇನ್ನೊಬ್ಬ ಆಟಗಾರ ಸೌರಭ್‌ ವರ್ಮಾ ಹೊರಬಿದ್ದರು. 64 ನಿಮಿಷಗಳ ಹೋರಾಟದ ನಂತರ ಏಳನೇ ಶ್ರೇಯಾಂಕದ ಕಾಂತಾ ಸುನೆಯಾಮಾ (ಜಪಾನ್‌) ಅವರು ಸೌರಭ್‌ರನ್ನು 23–21, 19–21, 21–5 ರಿಂದ ಸೋಲಿಸಿದರು.ಮಹಿಳಾ ಸಿಂಗಲ್ಸ್‌ನಲ್ಲಿ ಸಾಯಿ ಉತ್ತೇಜಿತ ರಾವ್‌ ಚುಕ್ಕಾ, ಚೀನಾದ ಚೆನ್‌ ಕ್ಸಿಯಾವೊ ಕ್ಸಿನ್‌ ಅವರಿಗೆ ಸಾಟಿಯಾಗಲಿಲ್ಲ. ಚೆನ್‌ 21–17, 21–7 ರಿಂದ ಜಯಗಳಿಸಿದರು.

ಅಚ್ಚರಿಯ ಜಯ: ಭಾರತದ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ– ಅಶ್ವಿನಿ ಪೊನ್ನಪ್ಪ ಜೋಡಿ, ಮಿಶ್ರ ಡಬಲ್ಸ್‌ ಮೊದಲ ಸುತ್ತಿನಲ್ಲಿ ಒಲಿಂಪಿಕ್ಸ್‌ ಬೆಳ್ಳಿ ಪದಕ ಗೆದ್ದ ಜೋಡಿಯನ್ನು ಹೊರದೂಡಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು. ಶ್ರೇಯಾಂಕರಹಿತ  ರಣಕಿರೆಡ್ಡಿ– ಅಶ್ವಿನಿ ಜೋಡಿ 21–18, 18–21, 21–17ರಲ್ಲಿ ಮಲೇಶಿಯಾದ ಚಾನ್‌ ಪೆಂಗ್‌ ಸೂನ್‌– ಗೊ ಲಿಯು ಯಿಂಗ್‌ ಜೋಡಿಯನ್ನು 62 ನಿಮಿಷಗಳ ಸೆಣಸಾಟದ ನಂತರ ಸೋಲಿಸಿತು.

ಭಾರತದ ಜೋಡಿ, ಐದನೇ ಶ್ರೇಯಾಂಕದ ಪಡೆದಿದ್ದ ಸೂನ್‌– ಯಿಂಗ್ ಜೋಡಿಯನ್ನು ಸೋಲಿಸುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಕೂಟದಲ್ಲಿ, ವಿಶ್ವ 23ನೇ ಕ್ರಮಾಂಕದ ಈ ಜೋಡಿ, ಮಲೇಶಿಯಾದ ಜೋಡಿಯನ್ನು ಮೊದಲ ಬಾರಿ ಸೋಲಿಸಿತ್ತು.

ಪ್ರಣವ್‌ ಜೆರಿ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ ಜೋಡಿ ಇನ್ನೊಂದು ಪಂದ್ಯದಲ್ಲಿ 21–16, 21–13ರಲ್ಲಿ ಜಪಾನಿನ ಕೊಹೆಯಿ ಗೊಂಡೊ– ಅಯನೆ ಕುರಿಹರ ಜೋಡಿ ವಿರುದ್ಧ 21–16, 21–13ರಲ್ಲಿ ಜಯಗಳಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು